ಬುಧವಾರ, ಮಾರ್ಚ್ 3, 2021
30 °C

‘ಕನ್ನಡ ವಿಶ್ವವಿದ್ಯಾಲಯ ಉಳಿಸಿ’ ಅಭಿಯಾನಕ್ಕೆ ಮಠಾಧೀಶರ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವುದೂ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ‘ಕನ್ನಡ ವಿವಿ ಉಳಿಸಿ’ ಭಿತ್ತಿ ಪತ್ರ ಚಳವಳಿ ಶುಕ್ರವಾರ ಮೂರನೇ ದಿನ ಪೂರೈಸಿತು.

ಚಳವಳಿ ಬೆಂಬಲಿಸಿರುವ ನಾಡಿನ ಮಠಾಧೀಶರು, ಸರ್ಕಾರದ ವಿರುದ್ಧ ದನಿ ಎತ್ತಿದ್ದಾರೆ.

‘ಸಂಶೋಧನೆಗಳಿಗೆಂದೇ ತೆರೆಯಲಾದ ಜ್ಞಾನದೇಗುಲ ಕನ್ನಡ ವಿಶ್ವವಿದ್ಯಾಲಯಕ್ಕೆ ಈಗ ಅನುದಾನದ ಕೊರತೆ ಎದುರಾಗಿರುವುದು ವಿಷಾದಕರ. ಕನ್ನಡಕ್ಕೆಂದೇ ಇರುವ ಏಕೈಕ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಟ್ಟು ಬೆಳೆಸುವುದು ಸರ್ಕಾರದ ಕರ್ತವ್ಯ. ಬೇರೆ ಉದ್ದೇಶಗಳಿಗೆ ಇರುವ ಹಣ, ಕನ್ನಡ ವಿಶ್ವವಿದ್ಯಾಲಯಕ್ಕೆ ಇಲ್ಲದಿರುವುದು ಗಂಭೀರ ವಿಷಯ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

ಚಿಂಚಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ‘ಕನ್ನಡದ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನಿಲ್ಲಿಸಿರುವುದು ತಪ್ಪು. ಇದರಿಂದ ಕನ್ನಡಮ್ಮ ನೊಂದುಕೊಂಡಿದ್ದಾಳೆ. ಹೋರಾಟ ಉಗ್ರರೂಪ ಪಡೆದುಕೊಳ್ಳುವ ಮುನ್ನ ಸರ್ಕಾರ ಅನುದಾನ ಬಿಡುಗಡೆ ಮಾಡಲಿ’ ಎಂದು ಆಗ್ರಹಿಸಿದ್ದಾರೆ.

ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ‘ನಾಡು, ನುಡಿ, ಸಂಸ್ಕೃತಿ ಸಂರಕ್ಷಣೆಗಾಗಿ ಇರುವ ಸ್ವಾಯತ್ತ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿ ಸರ್ಕಾರದ್ದು. ವಿಶ್ವವಿದ್ಯಾಲಯವನ್ನು ಒಗ್ಗೂಡಿ ಉಳಿಸಿಕೊಳ್ಳೋಣ’ ಎಂದು ಕರೆ ನೀಡಿದ್ದಾರೆ.

ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಕನ್ನಡದ ನೆಲದಲ್ಲಿ ಕನ್ನಡದ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಡಿ ಎಂದು ಹೋರಾಟ ಮಾಡುವ ಪರಿಸ್ಥಿತಿ ಉದ್ಭವವಾಗಿರುವುದೇ ಅವಮಾನದ ಸಂಗತಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹುಕ್ಕೇರಿ ಹಿರೇಮಠದ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ,‘ನಮ್ಮ ನುಡಿ ಕನ್ನಡ, ನಮ್ಮ ನಡೆ ಕರ್ನಾಟಕದ ಅಭಿವೃದ್ಧಿಗೆ ಎಂದು ಸರ್ಕಾರ ಹೇಳುತ್ತಾ ಕುಳಿತರೆ ಸಾಲದು. ಕನ್ನಡ ವಿಶ್ವವಿದ್ಯಾಲಯ ಉಳಿಯಬೇಕು, ಬೆಳೆಯಬೇಕು ಎಂದರೆ ಸರ್ಕಾರ ಸಹಾಯ ಹಸ್ತ ಚಾಚಬೇಕು’ ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು