ಸೋಮವಾರ, ಮಾರ್ಚ್ 1, 2021
17 °C
ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಡಿನೋಟಿಫೈ ಮಾಡಿದ ಪ್ರಕರಣ: ತಡೆ ನೀಡಿದ ನ್ಯಾಯಾಲಯ

ಅಕ್ರಮ ಡಿನೋಟಿಫೈ | ಬಿಎಸ್‌ವೈ, ನಿರಾಣಿ ನಿರಾಳ: ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಡಿನೋಟಿಫೈ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್‌ ನಿರಾಣಿ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

ಆದರೆ, ಯಡಿಯೂರಪ್ಪ ಅವರ ವಿರುದ್ಧದ ಕ್ರಿಮಿನಲ್‌ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್‌ ಜನವರಿ 5ರಂದು ನೀಡಿರುವ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.

2010–11ರಲ್ಲಿ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 26 ಎಕರೆ ಭೂಮಿ ಮಂಜೂರು ಮಾಡಿ ನಂತರ ನಕಲಿ ದಾಖಲೆ ಸೃಷ್ಟಿಸಿ ಆ ಭೂಮಿಯನ್ನು ಆಗ ಮುಖ್ಯಮಂತ್ರಿಯಾಗಿದ್ದ  ಬಿ.ಎಸ್‌. ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್‌ ನಿರಾಣಿ ತಮ್ಮಿಂದ ಹಿಂದಕ್ಕೆ ಪಡೆದಿದ್ದಾಗಿ ಉದ್ಯಮಿ ಎ.ಅಲಂ ಪಾಷಾ ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ನಿರಾಣಿ ಅವರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ಪೀಠವು ಪಾಷಾ ಅವರಿಗೆ ನೋಟಿಸ್‌ ಜಾರಿಗೊಳಿಸಿದೆ.

ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ಕೆ.ವಿ. ವಿಶ್ವನಾಥನ್‌ ಮತ್ತು ಸಜ್ಜನ್‌ ಪೂವಯ್ಯ ಅರ್ಜಿದಾರರ ಪರ ವಾದ ಮಂಡಿಸಿದರು.

‘ನಮ್ಮ ಅರ್ಜಿದಾರರು ಆಗ ಮುಖ್ಯಮಂತ್ರಿಯಾಗಿದ್ದರು. ಈಗಲೂ ಅದೇ ಹುದ್ದೆಯಲ್ಲಿದ್ದಾರೆ. ಈ ಹಿಂದೆ ಸಲ್ಲಿಸಿದ್ದ ದೂರನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಇದೇ ದೂರಿನ ಮೇಲೆಯೇ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ಮುಂದುವರಿಸಲು ಅವಕಾಶ ಇಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ವಕೀಲರಾದ ರೋಹಟಗಿ ಕೋರಿದರು.

ಈ ಬಗ್ಗೆ ತಡೆ ನೀಡಿದ ಪೀಠವು, ‘ನಿಮ್ಮ ಅರ್ಜಿದಾರರು ಮುಖ್ಯಮಂತ್ರಿ. ಮುಖ್ಯಮಂತ್ರಿ ವಿರುದ್ಧ ಯಾರು ವಾರಂಟ್‌ ಹೊರಡಿಸುತ್ತಾರೆ. ಮನವಿ ಪತ್ರವನ್ನು ಹೊರಡಿಸಬಹುದೇ ಹೊರತು ವಾರಂಟ್‌ ಅಲ್ಲ’ ಎಂದು ಯಡಿಯೂರಪ್ಪ ಪರ ವಕೀಲರಿಗೆ ತಿಳಿಸಿದೆ. ಇದೇ ರೀತಿಯ ಆದೇಶವನ್ನು ನಿರಾಣಿ ಅವರ ಅರ್ಜಿಗೂ ನೀಡಲಾಯಿತು.

ಯಡಿಯೂರಪ್ಪ ಮತ್ತು ನಿರಾಣಿ ವಿರುದ್ಧ ಕ್ರಿಮಿನಲ್‌ ವಿಚಾರಣೆಗೆ ಅವಕಾಶ ನೀಡಿರುವುದನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 5ರಂದು ವಜಾಗೊಳಿಸಿದ್ದ ಹೈಕೋರ್ಟ್‌, ವಿಚಾರಣೆ ನಡೆಸು ವಂತೆಯೂ ಆದೇಶಿಸಿತ್ತು. ಈ ಆದೇಶ ವನ್ನು ಪ್ರಶ್ನಿಸಿ ಯಡಿಯೂರಪ್ಪ ಮತ್ತು ನಿರಾಣಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು