ಶನಿವಾರ, ಮೇ 15, 2021
24 °C

ಡಿಎಸ್‌ಇಆರ್‌ಟಿ ಮಾರ್ಗಸೂಚಿಯಂತೆ 1–9 ಪರೀಕ್ಷೆ, ಮೌಲ್ಯಮಾಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಮತ್ತೆ ಹೆಚ್ಚುತ್ತಿದ್ದು, 1–9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯು ನಿರಂತರ ಮೌಲ್ಯಮಾಪನದ ರೀತಿಯಲ್ಲಿ ನಡೆಯುವುದರಿಂದ ಶೀಘ್ರ ಈ ಪ್ರಕ್ರಿಯೆ ಮುಗಿಸಿ ಬೇಸಿಗೆ ರಜೆ ಘೋಷಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮತ್ತು ಪೋಷಕ ಸಮುದಾಯ ಶಿಕ್ಷಣ ಇಲಾಖೆಗೆ ಬೇಡಿಕೆ ಇಟ್ಟಿವೆ.

ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ.

ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಗೂ ಮೌಲ್ಯಮಾಪನ ನಡೆಸಲು ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳು ಕೂಡ ಈ ಹಂತದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಪೂರ್ವ ತಯಾರಿ ಮಾಡಿಕೊಂಡಿವೆ. ಶಾಲಾ ಮಟ್ಟದಲ್ಲಿ ಆಯಾ ತರಗತಿಗಳ ಕೊಠಡಿಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಿವೆ.

ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ 1 ರಿಂದ 8ನೇ ತರಗತಿವರೆಗಿನ ಮಕ್ಕಳನ್ನು ಅನುತ್ತೀರ್ಣಗೊಳಿಸುವಂತಿಲ್ಲ. ಹೀಗಾಗಿ, ಪರೀಕ್ಷೆ ನಡೆಸಿ, ಫಲಿತಾಂಶ ನೀಡಿದರೂ ತೇರ್ಗಡೆ ಮಾಡಬೇಕು. ಒಂದೇ ತರಗತಿಯಲ್ಲಿ ಎರಡು ವರ್ಷ ಕುಳ್ಳಿರಿಸುವ ಅಥವಾ ಶಾಲೆಯಿಂದ ಹೊರಹಾಕಲು ಅವಕಾಶ ಇಲ್ಲ ಎಂದಿವೆ.

‘ಡಿಎಸ್‌ಇಆರ್‌ಟಿ ಮಾರ್ಗಸೂಚಿಯಂತೆ ಹೆಚ್ಚಿನ ಶಾಲೆಗಳು 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತಿರುವುದರಿಂದ 10 ಅಂಕಗಳ ರೂಪಣಾತ್ಮಕ ಮೌಲ್ಯಮಾಪನ ಪೂರ್ಣಗೊಂಡಿದೆ. ಹತ್ತು ಅಂಕಗಳ ರೂಪಣಾತ್ಮಕ ಮೌಲ್ಯಮಾಪನ ಏಪ್ರಿಲ್‌ನಲ್ಲಿ ನಡೆಯಲಿದೆ. 30 ಅಂಕದ ಸಂಕಲನಾತ್ಮಕ ಮೌಲ್ಯಮಾಪನ (ವಾರ್ಷಿಕ ಪರೀಕ್ಷೆ) ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ನಡೆಯಲಿದೆ. ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ವಿವಿಧ ಖಾಸಗಿ ಶಾಲಾ ಆಡಳಿತ ಮಂಡಳಿಗಳು ರೂಢಿಯಲ್ಲಿರುವ ಪದ್ಧತಿಯ ಅನುಸಾರವೇ ಪರೀಕ್ಷೆ ಅಥವಾ ಮೌಲ್ಯಮಾಪನ ನಡೆಸಲಿವೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು