ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹೆಸರಿನಲ್ಲಿ ಹಣ ವಸೂಲಿ ಮಾಡಿದರೆ ಶಾಲೆಗಳಿಗೆ ದಂಡ: ಸುರೇಶ್‌ ಕುಮಾರ್‌

ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಎಚ್ಚರಿಕೆ
Last Updated 10 ಸೆಪ್ಟೆಂಬರ್ 2020, 15:40 IST
ಅಕ್ಷರ ಗಾತ್ರ

ಧಾರವಾಡ: ‘ಶಾಲಾ ಶುಲ್ಕ ಭರಿಸಿಕೊಳ್ಳುವುದರ ಜತೆಗೆ ಸ್ಯಾನಿಟೈಸೇಷನ್‌ ನೆಪದಲ್ಲಿ ಕೊರೊನಾ ಶುಲ್ಕವನ್ನು ಪಾಲಕರಿಂದ ವಸೂಲು ಮಾಡಿದ್ದು ಕಂಡುಬಂದರೆ, ಅಂಥ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕೋವಿಡ್ ಕಾನೂನಿನಡಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.

‘ವಿದ್ಯಾಗಮ’ ಅನುಷ್ಠಾನ ಕುರಿತು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲಾ ಶುಲ್ಕ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ ಪರಿಶೀಲನೆ ನಡೆಸಲಿದ್ದಾರೆ. ಜತೆಗೆ ಪಡೆದ ಶುಲ್ಕ ಅಲ್ಲಿನ ಶಿಕ್ಷಕರಿಗೆ ತಲುಪಿದೆಯೇ ಎಂಬುದನ್ನೂ ಖಚಿತಪಡಿಸಿಕೊಂಡು ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ’ ಎಂದರು.

‘ವಿದ್ಯಾಗಮ ಕಾರ್ಯಕ್ರಮದ ಮೂಲಕ ಸುರಕ್ಷಿತ ವಲಯದಲ್ಲಿ ನಿರಂತರ ಕಲಿಕೆ ಮುಂದುವರಿಯುವಂತೆ ಇಲಾಖೆ ಕ್ರಮ ವಹಿಸಿದೆ. ಇದರಿಂದ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನುಸುಳಲು ಅವಕಾಶವಿರದು’ ಎಂದರು.

‘ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಅನುಭವ ಕರ್ನಾಟಕದ್ದು. ಹೀಗಾಗಿ ಈ ಬಾರಿ ಪಾಠ ಮಾಡಲು ಸಿಗುವ ಅವಧಿಯನ್ನು ಲೆಕ್ಕ ಹಾಕಿ ಪಠ್ಯ ಕಡಿತ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ನಡುವೆ ಅನುದಾನ ರಹಿತ ಶಾಲೆಗಳ ಸಿಬ್ಬಂದಿಗೆ ನೆರವಾಗಬೇಕು ಎಂಬ ಉದ್ದೇಶ ಇಲಾಖೆಯದ್ದು. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಲಾಗಿದೆ. ಜತೆಗೆ ಆರ್ಥಿಕ ಇಲಾಖೆಯೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಇಷ್ಟು ವರ್ಷಗಳ ಕಾಲ ಶಿಕ್ಷಕರನ್ನು ದುಡಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳೂ ತಮ್ಮ ಜವಾಬ್ದಾರಿಯನ್ನು ತೋರಬೇಕಾಗಿದೆ’ ಎಂದು ಸುರೇಶ್‌ಕುಮಾರ್ ಹೇಳಿದರು.

ಮೊಬೈಲ್‌ಫೋನ್‌ ಬ್ಯಾಂಕ್‌ಗೆ ಚಿಂತನೆ

ರಾಜ್ಯದ ಬಹುತೇಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಎಲೆಕ್ಟ್ರಾನಿಕ್ ಸಾಧನ ಹಾಗೂ ನೆಟ್‌ವರ್ಕ್ ಸಮಸ್ಯೆಯೂ ಕಾರಣ. ಹೀಗಾಗಿ ಸರ್ಕಾರವೇ ಮೊಬೈಲ್ ಬ್ಯಾಂಕ್ ಸ್ಥಾಪಿಸುವ ಕುರಿತು ಚಿಂತನೆ ನಡೆಸಿದೆ. ಸೌಲಭ್ಯ ವಂಚಿತ ಮಕ್ಕಳಿಗೆ ನೆರವಾಗುವ ಉದ್ದೇಶ ಹೊಂದಿರುವವರಿಂದ ಮೊಬೈಲ್ ಪಡೆದು, ಅದನ್ನು ಅಗತ್ಯ ಇರುವವರಿಗೆ ನೀಡುವ ಉದ್ದೇಶ ಇದರದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT