ಶನಿವಾರ, ಮೇ 15, 2021
25 °C
ಎರಡನೇ ಅಲೆಯ ನಿಯಂತ್ರಣಕ್ಕೆ ಭಾರಿ ಪ್ರಯತ್ನ

ಮೇ ಮೊದಲ ವಾರದಲ್ಲಿ ಗರಿಷ್ಠ ಪ್ರಕರಣ ಸಾಧ್ಯತೆ; ಕೋವಿಡ್‌ ತಡೆಗೆ ಕಠಿಣ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಎರಡನೇ ಅಲೆ ರಾಜ್ಯದಲ್ಲಿ ಮೇ ಮೊದಲ ವಾರದ ವೇಳೆಗೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ರಾಜ್ಯ ಮಟ್ಟದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಮತ್ತು ವಿಷನ್‌ ಗ್ರೂಪ್‌ ತಜ್ಞರು ಅಂದಾಜು ಮಾಡಿದ್ದಾರೆ.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಹಾಗೂ ವಿಷನ್‌ ಗ್ರೂಪ್‌ ಸದಸ್ಯರ ಜತೆ ಭಾನುವಾರ ಸಭೆ ನಡೆಸಿ, ಸೋಂಕು ನಿಯಂತ್ರಣ ಕುರಿತು ಚರ್ಚಿಸಿದರು. ಎರಡನೇ ಅಲೆಯ ಚಲನೆಯ ಕುರಿತ ಅಂದಾಜುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ತಜ್ಞರು ಸಚಿವರೊಂದಿಗೆ ಹಂಚಿಕೊಂಡರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸುಧಾಕರ್‌, ‘ಕೋವಿಡ್‌ನ ಪ್ರತಿ ಅಲೆ 180 ದಿನಗಳ ಕಾಲ ಇರುತ್ತದೆ. ರಾಜ್ಯದಲ್ಲಿ ಎರಡನೇ ಅಲೆ ಮೇ ಮೊದಲ ವಾರದ ವೇಳೆಗೆ ಗರಿಷ್ಠ ಮಟ್ಟ ತಲುಪಿ, ಮೇ ಕೊನೆಯವಾರದ ವೇಳೆಗೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಎರಡನೇ ಅಲೆಯು ಗರಿಷ್ಠ ಹಂತವನ್ನು ತಲುಪಿದಾಗ ಅನುಸರಿಸಬೇಕಾದ ಕ್ರಮಗಳ ಕುರಿತೂ ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದೆ’ ಎಂದರು.

ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾದರೆ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಾಸಿಗೆಗಳನ್ನು ಕಾಯ್ದಿರಿಸಬೇಕಾಗುತ್ತದೆ. ಮನೆಗಳಲ್ಲಿ ಪ್ರತ್ಯೇಕ ವಾಸದಲ್ಲಿರುವವರ ಮೇಲೆ ನಿಗಾ ಇಡುವುದಕ್ಕೂ ವಿಶೇಷ ವ್ಯವಸ್ಥೆ ಅಗತ್ಯ. ನಗರಗಳಿಂದ ಹಳ್ಳಿಗಳಿಗೆ ಹೆಚ್ಚಿನ ಜನರು ಮರಳುತ್ತಿದ್ದು, ಅವರ ಮೂಲಕ ಸೋಂಕು ಪ್ರಸರಣವಾಗುವ ಅಪಾಯವೂ ಇದೆ. ಈ ಬಗ್ಗೆಯೂ ನಿಗಾ ಇಡಬೇಕಿದೆ. ಅಂತರ ರಾಜ್ಯ ಪ್ರಯಾಣಿಕರು ರಾಜ್ಯ ಪ್ರವೇಶಿಸುವ ಸಮಯದಲ್ಲಿ ಕಟ್ಟುನಿಟ್ಟಿನ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಸುಧಾಕರ್‌ ವಿವರಿಸಿದರು.

ಕಠಿಣ ನಿರ್ಬಂಧಕ್ಕೆ ಸಲಹೆ: ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಆಗುತ್ತಿರುವುದರಿಂದ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ಕೋವಿಡ್‌ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಹಾಗೂ ವಿಷನ್‌ ಗ್ರೂಪ್‌ನ ತಜ್ಞರು ಸಲಹೆ ನೀಡಿದ್ದಾರೆ. ಈ ಕುರಿತು ಅಧಿಕೃತವಾಗಿ ವರದಿ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

’ಕೋವಿಡ್‌ ಎರಡನೇ ಅಲೆಯ ಅಪಾಯಗಳನ್ನು ತಪ್ಪಿಸಲು ನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿರುವುದರ ಜತೆಗೆ ಇನ್ನೂ ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಏನೆಲ್ಲಾ ಕ್ರಮಗಳ ಅಗತ್ಯವಿದೆ ಎಂಬುದನ್ನು ಸ್ಪಷ್ಟವಾಗಿ ವರದಿಯ ರೂಪದಲ್ಲಿ ಸಲ್ಲಿಸುವಂತೆ ತಜ್ಞರನ್ನು ಕೋರಿದ್ದೇನೆ’ ಎಂದರು.

ತಾಂತ್ರಿಕ ಸಲಹಾ ಸಮಿತಿ ಮತ್ತು ವಿಷನ್‌ ಗ್ರೂಪ್‌ನ ತಜ್ಞರು ನೀಡುವ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗುವುದು. ಸಂಪುಟದ ಎಲ್ಲ ಸದಸ್ಯರ ಜತೆಗೂ ಚರ್ಚಿಸಿ ಮುಂದಿನ ಕ್ರಮಗಳ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.

ಕಳೆದ ಬಾರಿಯಂತೆ ಕೋವಿಡ್ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದಲೇ ರಿಯಾಯಿತಿ ದರದಲ್ಲಿ ಔಷಧಿ ಒಸಗಿಸಲು ನಿರ್ಧರಿಸಲಾಗಿದೆ. ಟೆಲಿ ತೀವ್ರ ನಿಗಾ ಘಟಕ (ಟೆಲಿ ಐಸಿಯು) ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ತೀರ್ಮಾನಿಸಲಾಗಿದೆ ಎಂದರು.

ಲಾಕ್‌ಡೌನ್‌ಗೆ ಶಿಫಾರಸು?

‘ಆರ್ಥಿಕ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿರ್ಬಂಧಗಳನ್ನು ಜಾರಿಗೊಳಿಸಬೇಕು ಎಂಬುದಾಗಿ ತಜ್ಞರು ಸಲಹೆ ನೀಡಿದ್ದಾರೆ. ಆದರೆ, ಗುಂಪು ಸೇರುವುದಕ್ಕೆ ಕಡಿವಾಣ ಹಾಕದಿದ್ದರೆ ಪರಿಸ್ಥಿತಿ ಹದಗೆಡುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ’ ಎಂದು ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು. ‘ಲಾಕ್‌ಡೌನ್‌ಗೆ ಶಿಫಾರಸು ಮಾಡಲಾಗಿದೆಯೆ?’ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿದ ಅವರು, ‘ಈಗ ನನ್ನಿಂದ ಏಕೆ ಈ ಮಾತು ಹೇಳಿಸುತ್ತಿದ್ದೀರಿ. ವರದಿ ಬಂದ ಬಳಿಕ ಚರ್ಚಿಸಿ, ತೀರ್ಮಾನಕ್ಕೆ ಬರಲಾಗುವುದು. ಜಾತ್ರೆ, ಸಮಾರಂಭಗಳ ನಿಷೇಧಕ್ಕೆ ತಜ್ಞರು ಸಲಹೆ ಮಾಡಿದ್ದಾರೆ’ ಎಂದರು.

ಲಸಿಕೆ: ಮಹಿಳೆಯರೇ ಮುಂದು

ರಾಜ್ಯದಲ್ಲಿ ಈವರೆಗೆ 61 ಲಕ್ಷ ಡೋಸ್‌ ಕೋವಿಡ್ ಲಸಿಕೆ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದ ಮಹಿಳೆಯರೇ ಮಾದರಿಯಾಗಿದ್ದಾರೆ ಎಂದು ಡಾ.ಕೆ.ಸುಧಾಕರ್ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಲಸಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವರು, ರಾಜ್ಯಕ್ಕೆ 72 ಲಕ್ಷಕ್ಕೂ ಹೆಚ್ಚು ಲಸಿಕೆ ಬಂದಿದೆ. ಶೇ 53 ರಷ್ಟು ಡೋಸ್‌ಗಳನ್ನು ಮಹಿಳೆಯರಿಗೆ ನೀಡಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು