ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ‘ನೀರಿಗಾಗಿ ನಡಿಗೆ’: ಕಾಂಗ್ರೆಸ್‌ ಪಾದಯಾತ್ರೆಗೆ ಹರಿದುಬಂದ ಜನಸಾಗರ

* ಕಾಂಗ್ರೆಸ್‌ ಪಾದಯಾತ್ರೆಗೆ ಹರಿದುಬಂದ ಜನಸಾಗರ * ಹತ್ತಾರು ಸಾವಿರ ಮಂದಿಯೊಂದಿಗೆ ಹೆಜ್ಜೆ ಹಾಕಿದ ಕೈ ನಾಯಕರು
Last Updated 1 ಮಾರ್ಚ್ 2022, 15:57 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಯ ಮೂರನೇ ದಿನವಾದ ಮಂಗಳವಾರ ‘ನೀರಿಗಾಗಿ ನಡಿಗೆ’ಯಲ್ಲಿ ಹತ್ತಾರು ಸಾವಿರ ಜನ ಹೆಜ್ಜೆ ಹಾಕಿದರು. ಬೆಂಗಳೂರಿನ ಹಲವು ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪಾದಯಾತ್ರೆಗೆ ಜನಸಾಗರವೇ ಹರಿದುಬಂದಿತ್ತು.

ರಾಜರಾಜೇಶ್ವರಿ ನಗರ, ವಿಜಯನಗರ, ಗೋವಿಂದರಾಜನಗರ, ಬಸವನಗುಡಿ, ಪದ್ಮನಾಭನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ನಾಯಕರು ಹೋರಾಟದ ಕಹಳೆ ಮೊಳಗಿಸಿದರು. ಬಿಸಿಲ ಝಳವನ್ನೂ ಲೆಕ್ಕಿಸದೆ ಹೆಜ್ಜೆಹಾಕಿದ ಕೈ ಪಡೆ, ಮೇಕೆದಾಟು ಯೋಜನೆ ಅನುಷ್ಠಾನದ ವಿಚಾರದಲ್ಲಿ ಬಿಜೆಪಿ ಸರ್ಕಾರ ನಿರಾಸಕ್ತಿ ಹೊಂದಿದೆ ಎಂಬ ಸಂದೇಶವನ್ನು ರಾಜಧಾನಿಯ ನಾಗರಿಕರಿಗೆ ತಲುಪಿಸಲು ಯತ್ನಿಸಿದರು.

ಪಟ್ಟಣಗೆರೆಯ ಪೂರ್ಣಿಮಾ ಕನ್ವೆನ್ಷನ್‌ ಹಾಲ್‌ನಿಂದ ಬೆಳಿಗ್ಗೆ ಪಾದಯಾತ್ರೆ ಆರಂಭವಾಯಿತು. ಹೊರಟ ಪಾದಯಾತ್ರೆ ನಾಯಂಡನಹಳ್ಳಿ, ನಾಯಂಡನಹಳ್ಳಿ ಜಂಕ್ಷನ್‌, ಪಿಇಎಸ್‌ ಕಾಲೇಜು ಜಂಕ್ಷನ್‌, ಕತ್ರಿಗುಪ್ಪೆ ಮುಖ್ಯ ರಸ್ತೆ ಜಂಕ್ಷನ್‌ ಮಾರ್ಗವಾಗಿ ಕಾಮಾಕ್ಯ ಜಂಕ್ಷನ್‌ನ ವೆಂಕಟಾದ್ರಿ ಕಲ್ಯಾಣ ಮಂಟಪ ತಲುಪಿತು. ಅಲ್ಲಿ ಊಟ, ವಿಶ್ರಾಂತಿ ಬಳಿಕ ಮತ್ತೆ ಆರಂಭವಾದ ನಡಿಗೆ ಕದಿರೇನಹಳ್ಳಿ ಜಂಕ್ಷನ್‌, ಬನಶಂಕರಿ ದೇವಾಲಯ, ಜಯದೇವ ಆಸ್ಪತ್ರೆ ಮಾರ್ಗವಾಗಿ ಅದ್ವೈತ್‌ ಪೆಟ್ರೋಲ್‌ ಬಂಕ್‌ ಬಳಿಗೆ ತಲುಪಿತು. ಇದರೊಂದಿಗೆ ಮೂರನೇ ದಿನ 15 ಕಿ.ಮೀ. ಕ್ರಮಿಸಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್‌, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ಸಂಸದ ಡಿ.ಕೆ. ಸುರೇಶ್‌, ಶಾಸಕರಾದ ಎಂ. ಕೃಷ್ಣಪ್ಪ, ಪ್ರಿಯಾಂಕ್‌ ಖರ್ಗೆ, ಮಾಜಿ ಶಾಸಕ ಪ್ರಿಯಕೃಷ್ಣ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ಸೇರಿದಂತೆ ಹಲವು ನಾಯಕರು, ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಪಾದಯಾತ್ರೆ ಸಾಗಿದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜನರಲ್ಲದೇ ಯಶವಂತಪುರ, ನೆಲಮಂಗಲ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಕುಣಿಗಲ್‌ ಸೇರಿದಂತೆ ಇತರ ಕ್ಷೇತ್ರಗಳ ಸಾವಿರಾರು ಜನರು ನಡಿಗೆಯಲ್ಲಿ ಭಾಗಿಯಾಗಿದ್ದರು. ರಾಜರಾಜೇಶ್ವರಿನಗರ, ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ಸಾಗಿ ಬರುತ್ತಿದ್ದಾಗ ಒಮ್ಮೆಲೇ ಹತ್ತಾರು ಸಾವಿರ ಮಂದಿ ಸೇರಿಕೊಂಡು ಕಾಂಗ್ರೆಸ್‌ ನಾಯಕರಿಗೆ ಜೈಕಾರ ಹಾಕಿದರು.

ಅದ್ದೂರಿ ಸ್ವಾಗತ: ಪಾದಯಾತ್ರೆಯ ಸಾಗಿ ಬರುತ್ತಿದ್ದಾಗ ನಾಯಂಡನಹಳ್ಳಿ, ವಿಜಯನಗರ, ಗೋವಿಂದರಾಜನಗರ ಮತ್ತಿತರ ಕಡೆಗಳಲ್ಲಿ ಹಿರಿಯ ನಾಯಕರು ಪಾದಯಾತ್ರೆಯಲ್ಲಿ ಬಂದಾಗ ಸ್ಥಳೀಯ ಮುಖಂಡರು ಜೆಸಿಬಿಗಳಿಂದ ಹೂಮಳೆ ಸುರಿಸಿ ಸ್ವಾಗತಿಸಿದರು. ಕೆಲವೆಡೆ ಬೃಹತ್‌ ಹೂವಿನ ಹಾರ, ಸೇಬು ಹಣ್ಣುಗಳ ಹಾರ ಹಾಕಿ ನಾಯಕರನ್ನು ಗೌರವಿಸಿದರು.

ಪೂರ್ಣಕುಂಭ ಹೊತ್ತ ಮಹಿಳೆಯರು ಪಾದಯಾತ್ರೆಯುದ್ದಕ್ಕೂ ಹೆಜ್ಜೆ ಹಾಕಿದರು. ತಮಟೆ, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಬಗೆಯ ಕಲಾ ತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿದ್ದವು.

ದಾರಿಯುದ್ದಕ್ಕೂ ಆತಿಥ್ಯ

ಬಿಸಿಲ ಝಳ ಹೆಚ್ಚಾಗಿದ್ದರೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಬಳಲದಂತೆ ಆತಿಥ್ಯದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ಅರವಟಿಗೆಗಳನ್ನು ಸ್ಥಾಪಿಸಿ ಕಬ್ಬಿನ ಹಾಲು, ಎಳನೀರು, ನೀರು, ನಂದಿನಿ ತಂಪು ಪಾನೀಯಗಳ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಸೇಬು, ದ್ರಾಕ್ಷಿ, ಕಿತ್ತಳೆ, ಕಲ್ಲಂಗಡಿ, ಕರಬೂಜ, ಬಾಳೆಹಣ್ಣು ಸೇರಿದಂತೆ ನಾನಾ ಬಗೆಯ ಹಣ್ಣುಗಳನ್ನು ಯಥೇಚ್ಚವಾಗಿ ಪೂರೈಸಲಾಗಿತ್ತು. ಮಹಿಳೆಯರು ಮತ್ತು ಮಕ್ಕಳು ಹೊಟ್ಟೆ ಭರ್ತಿಯಾಗುವಷ್ಟು ಹಣ್ಣುಗಳನ್ನು ತಿಂದ ಬಳಿಕ ಚೀಲಗಳಲ್ಲಿ ಕೊಂಡೊಯ್ಯುತ್ತಿದ್ದ ದೃಶ್ಯ ಕಂಡುಬಂತು.

ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಎಲ್ಲಿಯೂ ಆಹಾರದ ಕೊರತೆ ಆಗದಂತೆ ಕಾಂಗ್ರೆಸ್‌ ನಾಯಕರು ಎಚ್ಚರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT