ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷಣಾ ಜಾಮೀನು ಅರ್ಜಿ: ಒಡನಾಡಿ ತಕರಾರು

ನಾಳೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಿದ್ಧತೆ, ಬಾಲಕಿಯರ ಪರ ಹೋರಾಟ
Last Updated 30 ಆಗಸ್ಟ್ 2022, 19:47 IST
ಅಕ್ಷರ ಗಾತ್ರ

ಮೈಸೂರು: ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆನ್ನಲಾದ ಬಾಲಕಿಯರ ಪರ ಕಾನೂನು ಹೋರಾಟ ಮಾಡಲು ಒಡನಾಡಿ ಸಂಸ್ಥೆಯು ನಿರ್ಧರಿಸಿದೆ.

ಆರೋಪಿ, ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ನಿರೀಕ್ಷಣಾ ಜಾಮೀನು ಕೊಡಬಾರದು ಎಂದು ಕೋರಿ, ಸಂಸ್ಥೆಯ ಪರವಾಗಿ ಬೆಂಗಳೂರಿನ ಹೈಕೋರ್ಟ್‌ ವಕೀಲ ಶ್ರೀನಿವಾಸ ಅವರು ಸೆ.1ರಂದು ಚಿತ್ರದುರ್ಗ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಲಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಸ್ವಾಮೀಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ನಡೆದಿದ್ದು, ಗುರುವಾರಕ್ಕೆ (ಸೆ.1) ಮುಂದೂಡಲಾಗಿದೆ. ಪೋಕ್ಸೊ ಕಾಯ್ದೆಯ ಅನ್ವಯ, ಸರ್ಕಾರಿ ಅಭಿಯೋಜಕರಷ್ಟೇ ಅಲ್ಲದೆ, ಸಂತ್ರಸ್ತ ಬಾಲಕಿಯರು ಮತ್ತು ಪೋಷಕರು ಹಾಗೂ ಬಾಲಕಿಯರಿಗೆ ಯಾರ ಮೇಲೆ ವಿಶ್ವಾಸವಿದೆಯೋ ಅವರ ಮೂಲಕವೂ ತಕರಾರು ಅರ್ಜಿ ಸಲ್ಲಿಸಬಹುದು.

‘ಕಿರುಕುಳದ ವಿರುದ್ಧ ಸಂತ್ರಸ್ತ ಬಾಲಕಿಯರಿಂದ ದೂರು ಕೊಡಿಸುವುದರ ಜೊತೆಗೆ, ಅವರಿಗೆ ನ್ಯಾಯ ದೊರಕಿಸಬೇಕು ಎಂಬುದು ಸಂಸ್ಥೆಯ ಉದ್ದೇಶ. ಬಾಲಕಿಯರು ಕೂಡ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟಿರುವುದರಿಂದ, ಸಂಸ್ಥೆಯೂ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿ, ನಿರೀಕ್ಷಣಾ ಜಾಮೀನು ವಿರುದ್ಧ ವಾದ ಮಂಡಿಸಲಾಗುವುದು’ ಎಂದು ವಕೀಲ ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲಕಿಯರಿಗೆ ನ್ಯಾಯಾಲಯದ ನೋಟಿಸ್‌ ತಲುಪಿದ ಕೂಡಲೇ, ತಕರಾರು ಅರ್ಜಿ ಸಲ್ಲಿಸಲಾಗುವುದು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಂಸ್ಥೆ ನಿರ್ಧರಿಸಿದೆ’ ಎಂದು ಹೇಳಿದರು.

‘ಮಕ್ಕಳ ಸಂರಕ್ಷಣೆ ಕುರಿತು ನಿಯಮಿತವಾಗಿ ಪರಿಶೀಲನೆ ನಡೆಸುವುದೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಘಟಕ ವಿಫಲವಾಗಿದೆ. ಅದರ ಮೇಲುಸ್ತುವಾರಿ ವಹಿಸಬೇಕಾಗಿದ್ದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಪತ್ರ ಬರೆಯಲಾಗುವುದು’ ಎಂದು ಸಂಸ್ಥೆಯ ಸಂಚಾಲಕ ಎಂ.ಎಲ್‌.ಪರಶುರಾಂ ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಪತ್ರ
ಬೆಂಗಳೂರು:
ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಶರಣರನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ದಸಂಸ ಒಕ್ಕೂಟದ ರಾಜ್ಯ ಸಮಿತಿ ರಾಜ್ಯಪಾಲರಿಗೆ ಪತ್ರ ಬರೆದು ಒತ್ತಾಯಿಸಿದೆ.

ಪೋಕ್ಸೊ ಕಾಯ್ದೆ ಮತ್ತು ದೌರ್ಜನ್ಯ ತಡೆ ಕಾಯ್ದೆ 1989ರ ಅನ್ವಯ ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಮಹಾನಗರ ಮ್ಯಾಜಿಸ್ಟ್ರೇಟ್‌ ಅಥವಾ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಅವರ ಸಮ್ಮುಖದಲ್ಲಿ ಹಾಜರುಪಡಿಸಬೇಕು.164 (5ಎ) ಸಿಆರ್‌ಪಿಸಿ ಹಾಗೂ ಸರ್ಕಾರಿ ಮಹಿಳಾ ವೈದ್ಯರ ಸಮ್ಮಖದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಯಾರ ವಿರುದ್ಧ ದೂರು ನೀಡಲಾಗಿದೆಯೋ ಆ ಎಲ್ಲರನ್ನು ಕೂಡಲೇ ವಶಕ್ಕೆ ಪಡೆಯಬೇಕು‘ ಎಂದು ಆಗ್ರಹಡಿಸಿದೆ.

ಆದರೆ, ರಾಜ್ಯ ಸರ್ಕಾರ ಬಲಾಢ್ಯರಿಗೆ ಒಂದು ಕಾನೂನು, ಬಡವರಿಗೆ ಒಂದು ಕಾನೂನು ಎಂಬಂತೆ ವರ್ತಿಸುತ್ತಿದೆ. ಪೊಲೀಸ್‌ ಕೂಡ ಕಾನೂನು ಮತ್ತು ಕರ್ತವ್ಯವನ್ನು ಮರೆತಿದೆ. ಈ ಮಧ್ಯೆ ಮುರುಘಾ ಶರಣರು ಬಹಿರಂಗವಾಗಿ ಹೇಳಿಕೆ ನೀಡಿ, ಈ ನೆಲದ ಕಾನೂನು ಗೌರವಿಸುವುದಾಗಿ ಹೇಳಿದ್ದಾರೆ. ದಲಿತ ಹೆಣ್ಣು ಮಕ್ಕಳು ಬಲಾಢ್ಯರ ಸ್ವತ್ತಲ್ಲ. ಈ ಸಂಬಂಧವಾಗಿ ಸರ್ಕಾರ ನಿರ್ಲಕ್ಷ್ಯ ತೋರಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷ ಡಾ.ಆರ್.ಮೋಹನ್‌ರಾಜ್‌, ಎಸ್‌ಸಿ– ಎಸ್‌ಟಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ದಲಿತ ಮಾನವ ಹಕ್ಕು ಸಮಿತಿ ರಾಜ್ಯ ಸಂಚಾಲಕರು ಬಸವರಾಜ್‌ ಕೌತಾಳ್‌, ಡಿಎಎಸ್‌ ಗೋಪಾಲಕೃಷ್ಣ ಹರಳಹಳ್ಳಿ, ಡಿಎಸ್‌ಎಸ್‌ ರಾಜ್ಯ ಅಧ್ಯಕ್ಷ ವೆಂಕಟಗಿರಿಯಯ್ಯ ಮನವಿಗೆ ಸಹಿ ಮಾಡಿದ್ದಾರೆ.

ಬಂಧನಕ್ಕೆ ಮಹಿಳಾ ಸಂಘಟನೆಗಳ ಒತ್ತಾಯ
ಬೆಂಗಳೂರು:
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರನ್ನು ಕೂಡಲೇ ಬಂಧಿಸಬೇಕು ಎಂದು ವಿವಿಧ ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.

ಸ್ತ್ರೀ ಜಾಗೃತಿ ಸಮಿತಿ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಲೈಂಗಿಕ ಕಾರ್ಯಕರ್ತೆಯರ ಸಂಘ, ಕರ್ನಾಟಕ ಜನ ಶಕ್ತಿ ಸೇರಿ ಹಲವು ಮಹಿಳಾ ಸಂಘಟನೆಗಳ ಜಂಟಿ ನಿಯೋಗವು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಪೊಲೀಸ್ ಮಹಾನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಿಗೂ ಮನವಿ ನೀಡಿತು.

‘ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪ ಇದ್ದು, ಮುರುಘಾ ಶರಣರು ಇರುವ ಸ್ಥಳ ಗೊತ್ತಿದ್ದರೂ ಪೊಲೀಸರು ಬಂಧಿಸದಿರುವುದು ಅನ್ಯಾಯ. ಮಕ್ಕಳು ಬಹಳ ಕಾಲ ಆರೋಪಿಗಳ ಅಧೀನದಲ್ಲಿದ್ದು, ಬೆದರಿಕೆಗೆ ಒಳಗಾಗುವ ಸ್ಥಿತಿ ಇದೆ. ಆರೋಪಿ ಪ್ರಭಾವ ಬಳಸಿ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆಯೂ ಇದೆ. ಈ ಎಲ್ಲಾ ಕಾರಣಗಳಿಂದ ಶರಣರನ್ನು ಕೂಡಲೇ ಬಂಧಿಸಬೇಕು’ ಎಂದು ಸಂಘಟನೆಗಳು ಒತ್ತಾಯಿಸಿವೆ.

‘ಸಂತ್ರಸ್ತಳಲ್ಲಿ ಒಬ್ಬಳು ಪರಿಶಿಷ್ಟ ಸಮುಯದಾಯಕ್ಕೆ ಸೇರಿದವಳು ಎಂದು ವರದಿಯಾಗಿದೆ. ಆರೋಪಿಗಳ ವಿರುದ್ಧ ಕೂಡಲೇ ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲೂ ಕ್ರಮ ಜರುಗಿಸಬೇಕು. ಮಕ್ಕಳಿಗೆ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಬೇಕು’ ಎಂದು ಮನವಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT