ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಹುದ್ದೆಯನ್ನೇ ಮಾರಾಟಕ್ಕಿಟ್ಟ ಅಮಿತ್ ಶಾ ಆರೋಪ ತಮಾಷೆಯಾಗಿದೆ: ಸಿದ್ದರಾಮಯ್ಯ

Last Updated 31 ಡಿಸೆಂಬರ್ 2022, 1:43 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಅಮಿತ್‌ ಶಾ ಅವರು ಮುಖ್ಯಮಂತ್ರಿ ಹುದ್ದೆಯನ್ನೇ ₹ 2000 ಕೋಟಿಗೆ ಮಾರಾಟಕ್ಕೆ ಇಟ್ಟಿರುವ ರಾಜಕೀಯ ವ್ಯಾಪಾರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಶುಕ್ರವಾರ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ‘ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕ ದೆಹಲಿಯ ಎಟಿಎಂ ಆಗಲಿದೆ’ ಎಂದು ಹೇಳಿದ್ದರು. ಅಲ್ಲದೆ, ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರದ ಹಲವು ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಅಮಿತ್‌ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮುಖ್ಯಮಂತ್ರಿ ಹುದ್ದೆಯನ್ನೇ ₹ 2000 ಕೋಟಿಗೆ ಮಾರಾಟಕ್ಕೆ ಇಟ್ಟಿರುವ ರಾಜಕೀಯ ವ್ಯಾಪಾರಿ ಗೃಹಸಚಿವ ಅಮಿತ್‌ ಶಾ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ‌ ಮಾಡುತ್ತಿರುವುದು ತಮಾಷೆಯಾಗಿದೆ’ ಎಂದಿದ್ದಾರೆ.

‘ನೇಮಕಾತಿ, ವರ್ಗಾವಣೆ, ಬಡ್ತಿ, ಅನುದಾನ ಹಂಚಿಕೆ, ಕಾಮಗಾರಿ ಅನುಷ್ಠಾನ, ಬಿಲ್ ಪಾವತಿ ಹೀಗೆ ಅಡಿಯಿಂದ ಮುಡಿವರೆಗೆ 40 ಪರ್ಸೆಂಟ್‌ ಕಮಿಷನ್ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ನಾಯಕರನ್ನು ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರದ ಬಗೆಗೆ ಮಾತನಾಡುವ ಅಮಿತ್‌ ಶಾ ಅವರ ಭಂಡತನಕ್ಕೆ ಶಹಭಾಸ್ ಅನ್ನಲೇಬೇಕು. ರಾಜ್ಯದಲ್ಲಿ ಆಪರೇಷನ್ ಕಮಲದ ಅನೈತಿಕದ ಕೂಸು ಬಿಜೆಪಿ ಸರ್ಕಾರ ಹುಟ್ಟಿಕೊಂಡ ದಿನದಿಂದ ಬಡಜನರಿಗೆ ಸಾವಿನ ಭಾಗ್ಯ, ಭ್ರಷ್ಟರಿಗೆ ಸಂಪತ್ತಿನ ಭಾಗ್ಯ ಬಂದು, ವಿಧಾನಸೌಧವೇ ಕಮಿಷನ್ ಅಡ್ಡೆಯಾಗಿ ಬದಲಾಗಿದೆ. ಈ 40 ಪರ್ಸೆಂಟ್‌ ಕಮಿಷನ್‌ನಲ್ಲಿ ನಿಮ್ಮ‌ ಪಾಲೆಷ್ಟು ಮಿಸ್ಟರ್ ಅಮಿತ್‌ ಶಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಬೆಳಗಾವಿಯ ಸಂತೋಷ್ ಪಾಟೀಲ್ ಅವರಿಂದ ಹಿಡಿದು ದೇವರಾಯನದುರ್ಗದ ಟಿ.ಎನ್ ಪ್ರಸಾದ್ ವರೆಗೆ ರಾಜ್ಯದ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಕಮಿಷನ್ ಕಿರುಕುಳಕ್ಕೆ ಬಲಿಯಾದ ಗುತ್ತಿಗೆದಾರರ ಸರಣಿ‌ ಆತ್ಮಹತ್ಯೆಗಳು ನಿಂತಿಲ್ಲ. ಈ ಸಾವುಗಳಿಗೆ ನ್ಯಾಯ ಕೊಡ್ತೀರಾ ಮಿಸ್ಟರ್ ಅಮಿತ್‌ ಶಾ? ಕರ್ನಾಟಕದ ಪಾಲಿನ ಜಿಎಸ್‌ಟಿ ಪರಿಹಾರ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ, ಅತಿವೃಷ್ಟಿ, ಅನಾವೃಷ್ಟಿ, ಬೆಳೆಹಾನಿ ಪರಿಹಾರ ರೈತರಿಗೆ ಸಿಕ್ಕಿಲ್ಲ. ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌‌ನಲ್ಲಿ ನಿಮ್ಮ ಪಾಲು ತಪ್ಪದೆ ಸಂದಾಯ ಆಗುತ್ತಿದೆಯೇ ಅಮಿತ್‌ ಶಾ ಅವರೇ’ ಎಂದು ಅವರು ಕೇಳಿದ್ದಾರೆ.

‘ಕೊರೊನಾ ಕಾಲದಲ್ಲಿ ನಿಮ್ಮ ಬಿಜೆಪಿ ಸರ್ಕಾರದ ಸಚಿವರು ಕಮಿಷನ್ ಮುಕ್ಕಿ ತೇಗಿದರು. ನಿರಪರಾಧಿ ಜನ ಆಮ್ಲಜನಕ, ಬೆಡ್, ವೆಂಟಿಲೇಟರ್ ಸಿಗದೆ ಹಾದಿಬೀದಿಯಲ್ಲಿ ಪ್ರಾಣ ಬಿಟ್ಟರು. ನೀವು ತಟ್ಟೆ ಬಾರಿಸಲು ಹೇಳಿ ಜನರನ್ನು ಮಂಗ ಮಾಡಿದಿರಿ. ಇದನ್ನು ರಾಜ್ಯದ ಜನ ಮರೆತಿಲ್ಲ ಮಿಸ್ಟರ್ ಅಮಿತ್‌ ಶಾ’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT