ಗುರುವಾರ , ಆಗಸ್ಟ್ 18, 2022
25 °C

ಎನ್‌ಡಿಆರ್‌ಎಫ್ ನಿಯಮ ತಕ್ಷಣ ತಿದ್ದುಪಡಿ ಮಾಡಬೇಕು– ಸಿದ್ದರಾಮಯ್ಯ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ನಿಯಮಗಳನ್ನು ತಕ್ಷಣ ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕು' ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಪ್ರತಿ 5 ವರ್ಷಗಳಿಗೊಮ್ಮೆ ಎನ್‍ಡಿಆರ್‌ಎಫ್ ನಿಯಮಗಳನ್ನು ತಿದ್ದುಪಡಿ ಮಾಡಿ, ಬೆಳೆಗಳಿಗೆ ಇನ್‍ಫುಟ್ ಸಬ್ಸಿಡಿಯ ಮೊತ್ತ, ಮೀನುಗಾರರ ದೋಣಿಗಳಿಗೆ ಆದ ಹಾನಿ, ಜನ ಜಾನುವಾರುಗಳಿಗೆ ಉಂಟಾದ ತೊಂದರೆ, ಮನೆ ಹಾನಿ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಆದ ನಷ್ಟಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗುತ್ತದೆ. ಆದರೆ,  2015-20ಕ್ಕೆ ಅನ್ವಯವಾಗುವಂತೆ ರೂಪಿಸಿದ ನಿಯಮಗಳನ್ನು 2015ರಲ್ಲಿ ಪರಿಷ್ಕರಿಸಲಾಗಿತ್ತು. 2020ರಲ್ಲಿ ಮತ್ತೆ ಪರಿಷ್ಕರಿಸಬೇಕಾಗಿತ್ತು. ಇದುವರೆಗೂ ಪರಿಷ್ಕರಿಸಿಲ್ಲ’ ಎಂದಿದ್ದಾರೆ.

‘ಎರಡು ವರ್ಷಗಳಿಂದ ಎಲ್ಲ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಿವೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಎನ್‍ಡಿಆರ್‍ಎಫ್ ನಿಯಮಗಳನ್ನು ಪರಿಷ್ಕರಿಸಿಲ್ಲ. ಪ್ರಸ್ತುತ ಒಂದು ಎಕರೆ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ ಶೇ 33ಕ್ಕಿಂತ ಹೆಚ್ಚು ಹಾನಿಯಾದರೆ ಸಿಗುವ ಪರಿಹಾರ ಕೇವಲ ₹ 2,720. ಅದರಲ್ಲೂ ಗರಿಷ್ಠ 2.5 ಹೆಕ್ಟೇರ್‌ಗೆ ಅಂದರೆ ₹ 6,800 ಮಾತ್ರ. ಪ್ರತಿ ಗುಂಟೆಗೆ ಕೇವಲ ₹ 68. ಆದರೆ, ಒಂದು ಎಕರೆ ರಾಗಿ, ಜೋಳ ಬೆಳೆಯಲು ಕನಿಷ್ಠ ₹ 25 ಸಾವಿರ ಖರ್ಚು ತಗಲುತ್ತದೆ. ಈ ಮೊತ್ತ ಪರಿಷ್ಕರಣೆ ಆಗಲೇಬೇಕಾಗಿದೆ‘ ಎಂದು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ಮೂರು ವರ್ಷಗಳಿಂದ ಸಂಭವಿಸಿರುವ ನಷ್ಟದ ಪ್ರಮಾಣ ಒಂದು ಅಂದಾಜಿನ ಪ್ರಕಾರ ₹ 2 ಲಕ್ಷ ಕೋಟಿಗಳಷ್ಟಾಗಬಹುದು. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಕೇವಲ ₹ 3,965 ಕೋಟಿ ಮಾತ್ರ.  ರಾಜ್ಯದಲ್ಲಿ ಮೇ ತಿಂಗಳಿಂದ ನವೆಂಬರ್‌ವರೆಗೆ ಸಂಭವಿಸಿದ ಪ್ರವಾಹದ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದೇ ಮಾರ್ಚ್‌ನಲ್ಲಿ ಕೇವಲ ₹ 492 ಕೋಟಿ ಬಿಡುಗಡೆ ಮಾಡಿದೆ’ ಎಂದಿದ್ದಾರೆ.

‘ಜನರು ಮತ್ತು ವಿರೋಧ ಪಕ್ಷಗಳು ಪರಿಹಾರಕ್ಕಾಗಿ ಒತ್ತಡಗಳನ್ನು ತಂದಾಗ ರಾಜ್ಯ ಸರ್ಕಾರ ₹ 2,391 ಕೋಟಿ ಪರಿಹಾರ ನೀಡಿತು. ಕೇಂದ್ರ ನೀಡಬೇಕಾದ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕಾಯಿತು. ಮೂರು ವರ್ಷಗಳಿಂದ ರೈತರಿಗೆ, ವಸತಿ ಹಾನಿಯಾದವರಿಗೆ ರಾಜ್ಯ ಸರ್ಕಾರ ₹ 3,890 ಕೋಟಿ ನೀಡಿದೆ. ಇದಿಷ್ಟೂ ಸೇರಿದಂತೆ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕಾಗಿತ್ತು. ಯಾಕೆಂದರೆ ಪರಿಹಾರ ನೀಡುವುದಕ್ಕೋಸ್ಕರವೆ ಕೇಂದ್ರದ ಬಜೆಟ್‍ನಲ್ಲಿ ಹಣ ಮೀಸಲಿರಿಸಲಾಗುತ್ತದೆ. ಆದರೆ, ಕರ್ನಾಟಕಕ್ಕೆ ಕೊಡಬೇಕಾದಷ್ಟು ಪರಿಹಾರ ನೀಡದೆ ಅನ್ಯಾಯ ಮಾಡಿದೆ‘ ಎಂದೂ ಆರೋಪಿಸಿದ್ದಾರೆ.

‘ಹೀಗಾಗಿ ಮೊದಲು ಎನ್‍ಡಿಆರ್‌ಎಫ್ ನಿಯಮಗಳಿಗೆ 2020ರಿಂದಲೇ ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಿ ಬಾಕಿ ಪರಿಹಾರ ಬಿಡುಗಡೆ ಮಾಡಬೇಕು. ರೈತರಿಗೆ ನಷ್ಟವಾದ ಅಷ್ಟೂ ಹಣವನ್ನು ನಷ್ಟವಾದ ಅಷ್ಟೂ ಎಕರೆಗೆ ಪರಿಹಾರ ನೀಡುವ ಹಾಗೆ ತಿದ್ದುಪಡಿ ತರಬೇಕು. ಮನೆ ಕಳೆದುಕೊಂಡವರಿಗೆ, ಮೀನುಗಾರರಿಗೆ ಹಾಗೂ ಇತರೆ ಎಲ್ಲ ಬಾಧಿತರಿಗೆ ವೈಜ್ಞಾನಿಕ ಮಾನದಂಡಗಳ ಆಧಾರದಲ್ಲಿ ಪರಿಹಾರ ನೀಡುವಂತಾಗಬೇಕು‘ ಎಂದು ಆಗ್ರಹಿಸಿದ್ದಾರೆ.

‘ಆದರೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗೇಳುತ್ತಿರುವ ಸರ್ಕಾರಕ್ಕೆ ಇದನ್ನೆಲ್ಲ ಮಾಡಲು ಪುರುಸೊತ್ತು ಇಲ್ಲವಾಗಿದೆ. ಪ್ರವಾಹ, ಬರ ಬಂದು ಜನರು ಸಂಕಷ್ಟದಲ್ಲಿದ್ದಾಗಲೂ ಸರ್ಕಾರ ನಿದ್ರೆಯಲ್ಲಿದ್ದಂತೆ ನಟಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಲ್ಲಿ ಬಹುಪಾಲು ಜನರು ಜಿಲ್ಲೆಗಳಿಗೆ ಭೇಟಿ ಮಾಡದೆ ನಿರ್ಲಕ್ಷ್ಯ ಮಾಡಿದರು. ಹೀಗಾಗಿ ಸರ್ಕಾರ ಜಡತೆಯಿಂದ, ಮನುಷ್ಯರನ್ನು ದ್ವೇಷದಿಂದ ಒಡೆದು ಹಾಕುವ ಕೆಟ್ಟತನದಿಂದ ಹೊರಬಂದು ಬರ ಪ್ರವಾಹಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿಭಾಯಿಸುವಂಥ ವ್ಯವಸ್ಥೆ ರೂಪಿಸಬೇಕು. ಇತ್ತೀಚೆಗೆ ಅಸಾನಿ ಚಂಡಮಾರುತದಿಂದ ತೊಂದರೆಗಳಿಗೆ ಒಳಗಾದವರಿಗೆ ತುರ್ತಾಗಿ ಪರಿಹಾರ ನೀಡಬೇಕು. ಕಳೆದ ಮೂರು ವರ್ಷಗಳಿಂದ ಹಾನಿಯಾಗಿರುವ ಸಾವಿರಾರು ಮನೆಗಳಿಗೆ ಈಗಲೂ ಸಮರ್ಪಕ ಪರಿಹಾರ ನೀಡಿಲ್ಲ. ಶಾಶ್ವತ ನೆಲೆ ಕಲ್ಪಿಸಿಲ್ಲ. ಈ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕು‘ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು