ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ವಿರೋಧಿ ಅಲೆ ಎದ್ದಿದೆ, ಇದು ಸುನಾಮಿ ಆಗಲಿದೆ: ಸಿದ್ದರಾಮಯ್ಯ ಸರಣಿ ಟ್ವೀಟ್‌

Last Updated 2 ನವೆಂಬರ್ 2021, 12:02 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತ ವಿರೋಧಿ ಅಲೆ ಎದ್ದಿದೆ, ಮುಂದಿನ ದಿನಗಳಲ್ಲಿ ಇದು ಸುನಾಮಿ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾನಗಲ್‌ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಕುರಿತು ಮಂಗಳವಾರ ಸರಣಿ ಟ್ವೀಟ್‌ ಮಾಡಿದ್ದಾರೆ.

'ಹಾನಗಲ್ ಕ್ಷೇತ್ರದಲ್ಲಿ ನಮ್ಮದು ಪರಿಪೂರ್ಣ ಗೆಲುವು, ಸಿಂದಗಿ ಕ್ಷೇತ್ರದಲ್ಲಿ ನಾವು ಸೋತು ಗೆದ್ದಿದ್ದೇವೆ. ನಮ್ಮ ಪಕ್ಷದ ನೀತಿ, ಕಾರ್ಯಕ್ರಮ ಮತ್ತು ಅಭ್ಯರ್ಥಿಗಳ ಮೇಲೆ ವಿಶ್ವಾಸ ಇಟ್ಟು ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆಡಳಿತ ವಿರೋಧಿ ಅಲೆ ಎದ್ದಿದೆ, ಮುಂದಿನ ದಿನಗಳಲ್ಲಿ ಇದು ಸುನಾಮಿ ಆಗಲಿದೆ' ಎಂದು ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

'ಹಾನಗಲ್ ಚುನಾವಣೆಯಲ್ಲಿ ಬಿಜೆಪಿಯ ನಿಜವಾದ ಅಭ್ಯರ್ಥಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗಿದ್ದರು. ಅವರ ತವರು ಜಿಲ್ಲೆಯಲ್ಲೇ ಬಿಜೆಪಿ ಸೋತಿದೆ. ನಾನು ಈ ಮಣ್ಣಿನ ಮಗ, ಇಲ್ಲಿಯೇ ಮಣ್ಣಾಗುತ್ತೇನೆ. ಅಕ್ಕಿಆಲೂರಿನ ಅಳಿಯ ಎಂದೆಲ್ಲಾ ಭಾವನಾತ್ಮಕವಾಗಿ ಮಾತನಾಡಿದರೂ ಜನ ತಿರಸ್ಕರಿಸಿದ್ದಾರೆ ಎನ್ನುವುದು ಸತ್ಯ' ಎಂದು ಕಾಂಗ್ರೆಸ್‌ ನಾಯಕ ಟೀಕಿಸಿದ್ದಾರೆ.

'ಸಿಂದಗಿಯಲ್ಲಿ ಸೋತು ಗೆದ್ದಿದ್ದೇವೆ. ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಬಂದಿದೆ. ನಮ್ಮ ಪಕ್ಷದ ಅಭ್ಯರ್ಥಿ ಕಳೆದ ಬಾರಿಗಿಂತ 40 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಜೆಡಿಎಸ್‌ನಿಂದ ಬಂದ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಹೊಂದಾಣಿಕೆ ಸಮಸ್ಯೆಯಿಂದಾಗಿ ಸ್ವಲ್ಪ ಹಿನ್ನಡೆಯಾಗಿದೆ' ಎಂದು ಮಾಜಿ ಸಿಎಂ ಹೇಳಿದ್ದಾರೆ.

'ಸಿಂದಗಿ ಅಭ್ಯರ್ಥಿ ಜೆಡಿಎಸ್‌ನಿಂದ ಬಂದವರಾಗಿದ್ದ ಕಾರಣಕ್ಕೆ ನಮಗೆ ಹಿನ್ನಡೆಯಾಯಿತು ಎನ್ನುವ ಅಭಿಪ್ರಾಯ ಸರಿ ಅಲ್ಲ. ಜೆಡಿಎಸ್‌ನಿಂದ ಬಂದ ಜಮೀರ್‌, ಅಖಂಡಾ ಶ್ರೀನಿವಾಸಮೂರ್ತಿ, ಭೀಮಾ ನಾಯ್ಕ ಗೆದ್ದಿಲ್ಲವೇ? ನಾನು ಕೂಡ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿ ಗೆದ್ದಿದ್ದೇನೆ' ಎಂದೂ ಸಿದ್ದರಾಮಯ್ಯ ತಿಳಿಸಿದ್ದಾರೆ.

'ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದೆ. ಅಧಿಕಾರದ ದುರುಪಯೋಗ ಮಾಡಿದೆ. ಜಾತಿ ಕಾರ್ಡ್ ಬಳಸಿದೆ. ಮುಖ್ಯಮಂತ್ರಿಯಾದಿಯಾಗಿ ಸಂಪುಟ ಸಚಿವರು ವಾರಗಟ್ಟಲೆ ಬೀಡುಬಿಟ್ಟು ಪ್ರಚಾರ ನಡೆಸಿದ್ದಾರೆ. ಹೀಗಿದ್ದೂ ಹಾನಗಲ್ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ, ಸಿಂದಗಿಯಲ್ಲಿ ಸೋತು ಗೆದ್ದಿದ್ದೇವೆ' ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.

'ಯಡಿಯೂರಪ್ಪ ಮತ್ತು ಅವರ ಮಗ ಎರಡೂ ಕಡೆಗಳಲ್ಲಿ ಪ್ರಚಾರ ಮಾಡಿದರು. ಮುಖ್ಯಮಂತ್ರಿಗಳು, ಸಚಿವರು ಚುನಾವಣೆ ನಡೆಯುವ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು. ಇಷ್ಟೆಲ್ಲದರ ಹೊರತಾಗಿಯೂ ಜನ ಬಿಜೆಪಿಗೆ ಮತ ನೀಡದೆ, ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಬದಲಾವಣೆಯ ಕಡೆ ಒಲವು ತೋರಿದ್ದಾರೆ' ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

'ಹಾನಗಲ್, ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದ್ದಾರೆ. ದೇವೇಗೌಡ ಅವರು 10 ದಿನ ಬಂದು ಪ್ರಚಾರ ಮಾಡಿದ್ದರೂ ಹೀನಾಯ ಸೋಲು ಕಂಡಿದೆ. ಅವರ ಪಕ್ಷದ ಸ್ಥಾನ ಏನೆಂಬುದನ್ನು ಎರಡೂ ಕ್ಷೇತ್ರಗಳ ಮತದಾರರೇ ತೋರಿಸಿದ್ದಾರೆ, ನಾನು ಟಿಪ್ಪಣಿ ಮಾಡುವುದಿಲ್ಲ' ಎಂದು ಅವರು ಹೇಳಿದ್ದಾರೆ.

'ಅಲ್ಪಸಂಖ್ಯಾತ ಬಂಧುಗಳು ಹಿಂದೆಯೂ ಜೆಡಿಎಸ್ ಪಕ್ಷವನ್ನು ನಂಬಿಲ್ಲ, ಮುಂದೆಯೂ ನಂಬಲ್ಲ. ಜೆಡಿಎಸ್ ಒಂದು ಅವಕಾಶವಾದಿ ಪಕ್ಷ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿಯೇ ಬಹುತೇಕ ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದ್ದಾರೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

'ಹಾನಗಲ್ ಮತ್ತು ಸಿಂದಗಿ ಉಪಚುನಾವಣಾ ಫಲಿತಾಂಶ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ನಾನು ಹೇಳುವುದಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಅವರ ಹನಿಮೂನ್ ಅವಧಿ ಕೊನೆಗೊಂಡಿದೆ. ಈ ಉಪಚುನಾವಣೆ ಸೆಮಿಫೈನಲ್, 2023ರ ವಿಧಾನಸಭಾ ಚುನಾವಣೆ ಫೈನಲ್, ಅದರಲ್ಲಿಯೂ ನಾವೇ ಗೆಲ್ಲುತ್ತೇವೆ' ಎಂದೂ ಮಾಜಿ ಸಿಎಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT