ಭಾನುವಾರ, ಆಗಸ್ಟ್ 14, 2022
28 °C
‘ಜನ ಒಪ್ಪಿಕೊಂಡ ಬಳಿಕ ಹೈಕಮಾಂಡ್‌ ಕೂಡಾ ಒಪ್ಪಿಕೊಳ್ಳಲೇಬೇಕು‘

ಸಿದ್ದರಾಮಯ್ಯ ಮುಂದಿನ ಸಿ.ಎಂ: ಜಮೀರ್‌ ಜಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಬಣ ರಾಜಕೀಯ ತಾರಕಕ್ಕೇರಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಬಿರುಸಿನ ಚರ್ಚೆ ಆರಂಭವಾಗಿದೆ.

ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಮುಖ್ಯಮಂತ್ರಿ ವಿಚಾರದಲ್ಲಿ ಶಾಸಕ ಜಮೀರ್‌ ಅಹ್ಮದ್‌ಖಾನ್‌ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪರ ಪದೇ ಪದೇ ನೀಡುತ್ತಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಜಮೀರ್‌ ಹೇಳಿಕೆಗೆ ಪಕ್ಷದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮ್ಮ ಕ್ಷೇತ್ರ ಚಾಮರಾಜಪೇಟೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಕ್ಕೂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಜಮೀರ್‌, ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಪದೇ ಪದೇ ಘೋಷಿಸುತ್ತಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಜಮೀರ್‌, ‘ವೈಯಕ್ತಿಕವಾಗಿ ನಾನು ಏನೇ ಹೇಳಿದರೂ, ಅಂತಿಮವಾಗಿ ಹೈಕಮಾಂಡ್‌ ತೀರ್ಮಾನಿಸುತ್ತದೆ. ಆದರೆ, ರಾಜ್ಯದ ಜನ ಒಪ್ಪಿಕೊಂಡ ಬಳಿಕ ಹೈಕಮಾಂಡ್‌  ಕೂಡಾ ಒಪ್ಪಿಕೊಳ್ಳಲೇಬೇಕು’ ಎಂದಿದ್ದಾರೆ.

‘ಸಿದ್ದರಾಮಯ್ಯ ಅವರನ್ನು ಮಾಜಿ ಎಂದು ಕರೆಯಲು ನನ್ನ ಮನಸ್ಸು ಒಪ್ಪಲ್ಲ. ಮಾಜಿ ಎಂದು ಹೇಳಲು ನಾನು ಸಿದ್ಧ ಇಲ್ಲ. ಅವರು ಭಾವಿ ಮುಖ್ಯಮಂತ್ರಿ ಎಂದೇ ನಾನು ಭಾವಿಸುತ್ತೇನೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಜನ ನೆನಪಿಸಿ ಕೊಂಡು ಅವರೇ ಮುಖ್ಯಮಂತ್ರಿ ಆಗಬೇಕು ಎನ್ನುತ್ತಾರೆ’ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: 

ಡಿ.ಕೆ. ತಿರುಗೇಟು: ಜಮೀರ್‌ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಮುಖ್ಯಮಂತ್ರಿಯಾಗಲು ನನಗೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಇನ್ನೂ ಯಾರ‍್ಯಾರಿಗೋ ಆಸೆ ಇರಬಹುದು. ಆದರೆ, ನಮ್ಮ ಕೆಲಸ ಮುಖ್ಯಮಂತ್ರಿ ಆಗುವುದಲ್ಲ, ಪಕ್ಷವನ್ನು ಅಧಿಕಾರಕ್ಕೆ ತರುವುದು. ಕೆಲವರು ವೈಯಕ್ತಿಕ ಅಭಿಪ್ರಾಯ ಹೇಳಿರಬಹುದು. ಈ ವಿಚಾರವಾಗಿ ಕರೆದು ವಿವರಣೆ ಕೇಳಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ, ಸಿದ್ದರಾಮಯ್ಯ ಪರ ಸಂದರ್ಭ ಸಿಕ್ಕಾಗಲೆಲ್ಲ ಜಮೀರ್‌ ನೀಡುತ್ತಿರುವ ಹೇಳಿಕೆ ಕಾಂಗ್ರೆಸ್‌ ನಾಯಕರಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ‘ಮುಖ್ಯಮಂತ್ರಿ ರೇಸ್‌ನಲ್ಲಿ ಸಿದ್ದರಾಮಯ್ಯ ಜೊತೆ ನಾನು, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಕೂಡಾ ಇದ್ದಾರೆ’ ಎಂದು ಶಿವಕುಮಾರ್‌ ಹೇಳಿರುವುದು ಪಕ್ಷದೊಳಗಿನ ಭಿನ್ನ ಧ್ವನಿಗೆ ತುಪ್ಪ ಸುರಿದಂತಾಗಿದೆ ಎಂದೇ ಕಾಂಗ್ರೆಸ್‌ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

‘ಬಹಿರಂಗ ಹೇಳಿಕೆ ಮೂಲಕ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಿದ್ದರೂ ಜಮೀರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಯಾಕೆ ಹಿಂದೇಟು ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ. ಜಮೀರ್ ಜಾಗದಲ್ಲಿ ಬೇರೆ ಯಾರೇ ಇದ್ದರೂ ತಕ್ಷಣವೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಪಕ್ಷದ ಅಧ್ಯಕ್ಷರ ಎಚ್ಚರಿಕೆಯ ಬಳಿಕವೂ ಹೇಳಿಕೆ ನೀಡುವುದನ್ನು ಮುಂದುರಿಸಿರುವ ಜಮೀರ್‌, ಸಿದ್ದರಾಮಯ್ಯ ಅವರ ಬೆಂಬಲಿಗ ಎನ್ನುವುದಕ್ಕಿಂತಲೂ ಮುಸ್ಲಿಂ ಸಮುದಾಯದ ನಾಯಕನಾಗಿ ಬೆಳೆದಿರುವುದು ಕಾರಣ ಇರಬಹುದು. ಕ್ರಮ ತೆಗೆದುಕೊಂಡರೆ ಪಕ್ಷದ ಓಟ್ ಬ್ಯಾಂಕ್ ಆಗಿರುವ ಮುಸ್ಲಿಂ ಸಮುದಾಯ ಮುನಿಸಿಕೊಳ್ಳಬಹುದೆಂಬ ಆತಂಕವೂ ಇರಬಹುದು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು