ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊಡಿ ಬಿಎಸ್‌ವೈ: ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಾಗ್ದಾಳಿ

Last Updated 2 ನವೆಂಬರ್ 2020, 10:18 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಹ ಪೀಡಿತ ರೈತರಿಗೆ ಪರಿಹಾರ ನೀಡಲು ದುಡ್ಡಿಲ್ಲ, ಕೊರೊನಾ ಚಿಕಿತ್ಸೆಗೆ ದುಡ್ಡಿಲ್ಲ, ಬೊಕ್ಕಸ ಖಾಲಿಯಾಗಿದೆ ಎಂದು ರಾಜ್ಯ ಸರ್ಕಾರ ₹ 90,000 ಕೋಟಿ ಸಾಲ ಮಾಡಲು ಹೊರಟಿದೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಮುಖ್ಯಮಂತ್ರಿಗಳು ಮತ್ತು ಸಚಿವರ ಜೇಬಿಗೆ ಹೋಯಿತಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ಉತ್ತರ ಕೊಡಿ ಬಿಎಸ್‌ವೈ ಎಂದಿರುವ ಅವರು, ಕಳೆದ ವರ್ಷ ಸರ್ಕಾರ ನಡೆಸಿದ್ದ ಸಮೀಕ್ಷೆಯಂತೆ ನೆರೆಯಿಂದಾಗಿ ಹಾನಿಗೀಡಾದ ಮನೆಗಳು 2,24,000. ಪರಿಹಾರ ನೀಡಿರುವುದು 1,24,000 ಮನೆಗಳಿಗೆ ಮಾತ್ರ ಎಂದು ಕೇಂದ್ರಕ್ಕೆ ವರದಿ ಕಳಿಸಲಾಗಿದೆ. ಇನ್ನು ಈ ವರ್ಷದ ಮಳೆಗೆ ಹಾನಿಗೀಡಾಗಿರುವ ಮನೆಗಳಿಗೆ ಸರ್ಕಾರ ಪರಿಹಾರ ನೀಡುವುದು ಯಾವಾಗ? ಎಂದಿದ್ದಾರೆ.

ಕಳೆದ ವರ್ಷ ಬೆಳೆ-ಮನೆ ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ, ಈ ವರ್ಷ ಸಮೀಕ್ಷೆಯನ್ನೇ ಮಾಡಿಲ್ಲ. ಮುಖ್ಯಮಂತ್ರಿಗಳು, ಸಚಿವರು ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಅಧಿಕಾರಿಗಳು ಮನೆಯಲ್ಲಿ ಹಾಯಾಗಿದ್ದಾರೆ, ಸಂತ್ರಸ್ತರು ಬೀದಿಯಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಳೆದ ವರ್ಷದ ಅತಿವೃಷ್ಟಿ ಹಾನಿಗೆ ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ಕೇಳಿದ್ದು ₹ 35,000 ಕೋಟಿ, ಅವರು ನೀಡಿದ್ದು ₹ 1654 ಕೋಟಿ. ಈ ಬಾರಿ ರಾಜ್ಯ ಸರ್ಕಾರ ಈ ವರೆಗೆ ಕೇಳಿದ್ದು ₹ 4000 ಕೋಟಿ. ಕೇಂದ್ರದಿಂದ ಸಮರ್ಪಕ ಪರಿಹಾರ ಕೇಳಲೂ ನಿಮಗೆ ಭಯನಾ?. ಆಗಸ್ಟ್‌ನಿಂದ ಮೂರು ತಿಂಗಳು ಸುರಿದ ಮಳೆಯಿಂದಾಗಿ 23 ಜಿಲ್ಲೆಗಳ 130 ತಾಲ್ಲೂಕುಗಳು ಬಾಧಿತವಾಗಿವೆ. ಕಳೆದ ವರ್ಷ ಹತ್ತು ಲಕ್ಷ ಹೆಕ್ಟೇರ್ ಕೃಷಿಭೂಮಿ ಹಾನಿಗೀಡಾಗಿದ್ದರೆ, ಈ ವರ್ಷ 11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಈ ದುಪ್ಪಟ್ಟು ನಷ್ಟದಿಂದ ರೈತರು ನೆಲಹಿಡಿದಿದ್ದಾರೆ ಎಂದು ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT