ಭಾನುವಾರ, ಜುಲೈ 3, 2022
27 °C
ಸದನದಲ್ಲಿ ಪ್ರತಿಧ್ವನಿಸಿದ ‘ಪ್ರಜಾವಾಣಿ’ ವರದಿಗಳು

ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಭಯವೇ: ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ 40 ರಷ್ಟು ಲಂಚ ಮತ್ತು ಪ್ರಮುಖ ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ‘ಪ್ರಜಾವಾಣಿ’ ಇತ್ತೀಚೆಗೆ ಪ್ರಕಟಿಸಿದ್ದ ವರದಿಗಳು ವಿಧಾನಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿದವು.

ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಕ್ಕೆ ಅನುಮತಿ ನಿರಾಕರಿಸಿದ್ದರಿಂದ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ಮಧ್ಯೆ ಬಿಸಿ ಬಿಸಿ ವಾಗ್ವಾದಕ್ಕೂ ಸದನ ಸಾಕ್ಷಿಯಾಯಿತು.

ಭೋಜನ ವಿರಾಮದ ನಂತರ ಸದನ ಸೇರಿದಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ನಾವು ಮಂಡಿಸಿದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ರೂಲಿಂಗ್‌ ನೀಡಿದ್ದು ಸರಿಯಲ್ಲ. ಅದನ್ನು ಮರುಪರಿಶೀಲಿಸಬೇಕು. ಹಾಗೆಂದು ಸಭಾಧ್ಯಕ್ಷರ ಅಧಿಕಾರ ಪ್ರಶ್ನಿಸುತ್ತಿಲ್ಲ. ರಾಜ್ಯದ ಸಾಮಾನ್ಯ ಪ್ರಜೆಗಳ ಬೆವರಿನ ಹಣ ಭ್ರಷ್ಟಾಚಾರಕ್ಕೆ ಒಳಗಾಗಿರುವುದನ್ನು ಪ್ರಸ್ತಾಪಿಸಲೇಬೇಕಾಗಿದೆ. ಭ್ರಷ್ಟಾಚಾರದ ಬಗ್ಗೆ ಇಲ್ಲಿ ಮಾತನಾಡಬಾರದೇ? ಯಾಕೆ ನಿಮಗೆ ಭಯವಾಗಿದೆಯೆ’ ಎಂದು ಮುಖ್ಯಮಂತ್ರಿಯವರನ್ನು ಕುಟುಕಿದರು.

‘ಭ್ರಷ್ಟಾಚಾರದ ಕುರಿತು ಪ್ರಧಾನಿಯವರಿಗೆ ನೇರವಾಗಿ ಪತ್ರ ಬರೆದು ದೂರು ನೀಡಿರುವುದು ಇದೇ ಮೊದಲು. ಗುತ್ತಿಗೆದಾರರು ಶೇ 40 ರಷ್ಟು ಕಮಿಷನ್‌ ಕೊಟ್ಟು ಉಳಿದ ಹಣದಲ್ಲಿ ಯಾವ ಗುಣಮಟ್ಟದ ಕಾಮಗಾರಿಗಳನ್ನು ಸಾಧ್ಯ? ಈ ಎಲ್ಲ ವಿಚಾರವನ್ನು ಪ್ರಸ್ತಾಪಿಸಬೇಕಾಗಿದೆ. ಇದರ ಬಗ್ಗೆ ಪ್ರಾಥಮಿಕವಾಗಿ ವಿಷಯ ಮಂಡನೆಗೆ ಅವಕಾಶ ಕೊಡಬೇಕು. ನನ್ನ ಮಾತುಗಳು ಸಂತೃಪ್ತಿಯಾದರೆ ಪೂರ್ಣ ಚರ್ಚೆಗೆ ಅವಕಾಶ ನೀಡಿ’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಆಗ ಮಧ್ಯ ಪ್ರವೇಶಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನಿಲುವಳಿ ಸೂಚನೆಯ ವ್ಯಾಪ್ತಿಗೆ ಇದು ಬರುವುದಿಲ್ಲ. ನೀವು ಬೇರೆ ರೂಪದಲ್ಲಿ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡುತ್ತೇನೆ’ ಎಂದರು.

‘ನಮ್ಮ ದೇವ್ರು ಯಾಕೆ ಹೀಗೆ ಆಡ್ತಿದೆ? ಸಿದ್ದರಾಮೇಶ್ವರ ನಮ್ಮ ಮನೆ ದೇವರು’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ತಿಳಿ ಮಾತುಗಳಿಂದ ಕಟ್ಟಿಹಾಕಲು ಯತ್ನಿಸಿದರು. ಅದೇ ಧಾಟಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, ‘ನನ್ನ ತಾತನ ಹೆಸರು ಸಿದ್ದರಾಮ, ನನ್ನ ಹೆಸರು ಸಿದ್ದರಾಮಯ್ಯ ಮತ್ತು ನಮ್ಮ ಮನೆ ದೇವರ ಹೆಸರು ಸಿದ್ದರಾಮೇಶ್ವರ. ನಮ್ಮ ಊರಿನ ಹೆಸರೂ ಸಿದ್ದರಾಮನ ಹುಂಡಿ’ ಎಂದರು. ‘ಈ ವಿಷಯ ಇತ್ತೀಚೆಗೆ ಆಗಿದ್ದಲ್ಲ, ಅತ್ಯಂತ ಜರೂರಿನ ವಿಷಯವೂ ಅಲ್ಲ. ಆದ್ದರಿಂದ ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಲು ಸಾಧ್ಯವಿಲ್ಲ’ ಎಂದು ಮಾಧುಸ್ವಾಮಿ ಹೇಳಿದರು.

ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ‘ಹಾಗಿದ್ರೆ, ನಮಗೆ ಮಾತನಾಡಲು ಅವಕಾಶ ಕೊಡುವುದಿಲ್ಲವೆ? ರಾಜ್ಯದ ಜನರ ತೆರಿಗೆ ಹಣ ಲೂಟಿ ಆಗುವುದನ್ನು ನೋಡಿಕೊಂಡು ಸುಮ್ಮನಿರಬೇಕೆ’ ಎಂದರು.

ಈ ಮಾತುಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಟಿತು, ‘ನೀವು ಈ ರೀತಿ ಮಾತನಾಡುವುದರಲ್ಲಿ ಅರ್ಥ ಇಲ್ಲ. ಯಾರೋ ಪತ್ರ ಬರೆದ ಆಧಾರದಲ್ಲಿ ಇಲ್ಲಿ ಚರ್ಚೆ ಮಾಡಲು ಆಗುತ್ತದೆಯೇ? ಹಾಗೆಂದು ಭ್ರಷ್ಟರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪತ್ರ ಬರೆದಿದ್ದು, ಅದರ ಹಿಂದಿನ ಚಿತಾವಣೆ ಯಾರದ್ದು ಎಂಬುದರ ತನಿಖೆ ಆಗುತ್ತಿದೆ. ಎಲ್ಲ ಕಾಲದಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆಯೂ ಮಾತನಾಡೋಣ’ ಎಂದು ಬೊಮ್ಮಾಯಿ ಏರಿದ ಧ್ವನಿಯಲ್ಲಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬರೆದ ಪತ್ರ ‘ಪ್ರಜಾವಾಣಿ’ಯಲ್ಲಿ ವಿವರವಾಗಿ ವರದಿಯಾಗಿತ್ತು. ಕೆಂಪಣ್ಣನವರು ಪ್ರಧಾನಿಗೆ ಪತ್ರ ಬರೆದಿದ್ದು  ‘ಪ್ರಜಾವಾಣಿ’ಯಲ್ಲಿ ವರದಿ ಆದ ಮೇಲೆ ಈ ಬಗ್ಗೆ ನನಗೆ ಗೊತ್ತಾಗಿದ್ದು. ಇವತ್ತಿನವರೆಗೆ ಯಾವ ಗುತ್ತಿದಾರರ ಸಂಘದವರೂ ಈ ರೀತಿ ಪ್ರಧಾನಿಗೆ ಪತ್ರ ಬರೆದಿರಲಿಲ್ಲ’ ಎಂದರು.

‘ಆ ಪತ್ರದಲ್ಲಿರುವ ಆರೋಪಗಳಿಗೆ ಆಧಾರ ಏನಿದೆ? ಸಾಕ್ಷ್ಯಗಳು ಇದೆಯಾ? ನಾವು ಪ್ರಾಮಾಣಿಕರಿದ್ದೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಪತ್ರ ಬರೆದು ನಾಲ್ಕು ತಿಂಗಳು ಆಯಿತು, ಈಗ ಪ್ರಶ್ನಿಸುವ ಔಚಿತ್ಯ ಏನಿದೆ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.

‘ಶೇ 40 ಲಂಚ ಮಾತ್ರ ಅಲ್ಲ; ಪೊಲೀಸ್, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬ್ರಹ್ಮಾಂಡವೂ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದೆ. ರಾಜ್ಯದ ಹಣ, ಜನರು ಬೆವರು ಹರಿಸಿ ದುಡಿದ ಹಣ ಲೂಟಿ ಮಾಡುತ್ತಿರುವುದನ್ನು ನೋಡಿಕೊಂಡು ಬಾಯಿ ಮುಚ್ಚಿಕೊಂಡು ಇರಬೇಕೆ’  ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಕಂಗೆಟ್ಟ ಸಚಿವ ಸುಧಾಕರ್!
ಆರೋಗ್ಯ ಇಲಾಖೆಯೂ ಸೇರಿ ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾ ಚಾರದ ಕುರಿತು ‘ಪ್ರಜಾವಾಣಿ’ಯ ಸರದಿ ವರದಿಗಳನ್ನು ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾಪಿಸಿದರು. ಸಿದ್ದರಾಮಯ್ಯನವರ ತರಾಟೆಯಿಂದಾಗಿ ಒಂದು ಹಂತದಲ್ಲಿ ಕಂಗೆಟ್ಟ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಬಳಿಕ ಕೋಪೋದ್ರಿಕ್ತ ರಾದರು.

‘ಪ್ರತಿ ಸೋಮವಾರ ಒಂದೊಂದು ಇಲಾಖೆಯ ಬಗ್ಗೆ ಬರೆಯುತ್ತಿದ್ದಾರೆ. ಪತ್ರಿಕೆಗೆ ನೋಟಿಸ್‌ ಕೊಡುತ್ತೇನೆ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಕೂಗಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು