ಬುಧವಾರ, ಆಗಸ್ಟ್ 10, 2022
19 °C
ನೀತಿಯ ಶಿಫಾರಸುಗಳು ಕನ್ನಡ ಸಂಸ್ಕೃತಿಗೆ ವಿರುದ್ಧವಾಗಿವೆ ಎಂದು ಕಿಡಿ

ತರಾತುರಿಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಅನುಷ್ಠಾನಗೊಳಿಸಬಾರದು: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯ ಸರ್ಕಾರ ತರಾತುರಿಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)’ ಅನುಷ್ಠಾನಗೊಳಿಸಬಾರದು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಎನ್‍ಇಪಿಯನ್ನು ಸಂಸತ್ತಿನಲ್ಲಿ ಮಂಡಿಸಿಲ್ಲ, ಚರ್ಚೆಯೂ ಆಗಿಲ್ಲ. ರಾಜ್ಯದಲ್ಲೂ ಕರಡು ಅಧಿಸೂಚನೆ ಹೊರಡಿಸಿಲ್ಲ. ವಿಧಾನಸಭೆ, ವಿಧಾನ ಪರಿಷತ್‍ನಲ್ಲಿ ಚರ್ಚೆಯಾಗಿಲ್ಲ. ಸಂವಿಧಾನದ ಪರಿಚ್ಛೇದ 7ರ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ, ಶಿಕ್ಷಣದ ವಿಚಾರದಲ್ಲಿ ರಾಜ್ಯಗಳಿಗೂ ಇರುವ ಸಮಾನ ಹಕ್ಕನ್ನು ಕಿತ್ತುಕೊಂಡು ಕೇಂದ್ರ ಬಲವಂತದಿಂದ ರಾಜ್ಯಗಳಲ್ಲಿ ಜಾರಿ ಮಾಡಲು ಹೊರಟಿದೆ. ಈ ನಡೆ ಹಲವು ಅನುಮಾನಗಳಿಗೂ ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಎನ್‍ಇಪಿ ಜಾರಿ ಮಾಡುತ್ತಿರುವ ರೀತಿ ಪಾರದರ್ಶಕ ಮತ್ತು ಪ್ರಜಾತಾಂತ್ರಿಕವಾಗಿಲ್ಲ. ಸಂವಿಧಾನದ ಆಶಯಗಳನ್ನು ಇಂಚಿಂಚಾಗಿ ಕೊಂದು ಹಾಕುತ್ತಿರುವ ಮತ್ತು ರಾಜ್ಯಗಳ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಬಲವಂತಕ್ಕೆ ರಾಜ್ಯ ಸರ್ಕಾರ ಸಂಚಿನ ರೂಪದಲ್ಲಿ ತರಾತುರಿಯಲ್ಲಿ ಎನ್‍ಇಪಿ ಜಾರಿ ಮಾಡಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

ಅಪಾಯಕಾರಿ ಶಿಫಾರಸುಗಳು: ಒಂದರಿಂದ ಎಂಟನೇ ವಯಸ್ಸಿನ ಶಿಕ್ಷಣಕ್ಕೆ ಕೇಂದ್ರೀಕೃತ ಎನ್‍ಸಿಆರ್‌ಟಿ ಪಠ್ಯಕ್ರಮ ಅಳವಡಿಸಿಕೊಳ್ಳಬೇಕೆಂಬ ನೀತಿಯಲ್ಲಿರುವ ಶಿಫಾರಸು ಕನ್ನಡದಂಥ ಸಂಸ್ಕೃತಿಯ ವಿರುದ್ಧವಾಗಿದೆ. ತ್ರಿ ಭಾಷಾ ಸೂತ್ರ ಕಡ್ಡಾಯಗೊಳಿಸಿ, ಇಂಗ್ಲಿಷ್ ಮತ್ತು ಹಿಂದಿ ಕಲಿಕೆ ಕಡ್ಡಾಯಗೊಳಿಸಿರುವುದು ಭಾಷಾ ಹೇರಿಕೆ, ಮಾತ್ರವಲ್ಲದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದು. ಸಂಸ್ಕೃತ ಭಾಷಾ ಕಲಿಕೆಗೆ ವಿಶೇಷ ಮಹತ್ವ ಕೊಡಬೇಕೆಂದು ಹೇಳಿರುವುದು ಸರಿಯಲ್ಲ’ ಎಂದೂ ಅವರು ಹೇಳಿದ್ದಾರೆ.

‘ಉನ್ನತ ಶಿಕ್ಷಣದಲ್ಲಿ ಪಠ್ಯಕ್ರಮದ ಸುಧಾರಣೆಗೆ ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಕಾರ್ಯಪಡೆ ಉಪಸಮಿತಿ ರಚಿಸಿದೆ. ಈ ಸಮಿತಿ ಏಕಪಕ್ಷೀಯವಾಗಿ ಕರ್ನಾಟಕದ ಉನ್ನತ ಶಿಕ್ಷಣದ ಭವಿಷ್ಯ ನಿರ್ಧರಿಸುವುದು ಸರಿಯೇ? ಈ ಸಮಿತಿ ಸಿದ್ದಪಡಿಸಿದ 33 ಪುಟಗಳ ಕರಡನ್ನು ಉನ್ನತ ಶೀಕ್ಷಣ ಸಚಿವ ಅಶ್ವತ್ಥನಾರಾಯಣ ಬಿಡುಗಡೆಗೊಳಿಸಿದ್ದಾರೆ. ಈ ಕಾರ್ಯಪಡೆ ಸಿಬಿಇಎಸ್ ಪಠ್ಯಕ್ರಮದ ಸ್ವರೂಪ ರಚಿಸಲು ಯಾರೊಂದಿಗೆ ಸಮಾಲೋಚನೆ ನಡೆಸಿದೆ’ ಎಂದು ಪ್ರಶ್ನಿಸಿದ್ದಾರೆ.

‘ಪದವಿ ತರಗತಿಗಳಿಗೆ ಕನ್ನಡದಂಥ ಭಾಷಾ ವಿಷಯಗಳನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಬಹುದು ಎಂದು ಈ ಸಮಿತಿ ಶಿಫಾರಸು ಮಾಡಿತ್ತು. ವಿವಿಧ ವಲಯಗಳ ಗಣ್ಯರು, ವಿರೋಧ ಪಕ್ಷಗಳ ಮುಖಂಡರು ವಿರೋಧಿಸಿದ ಬಳಿಕ ಎರಡು ವರ್ಷಗಳಿಗೆ ಮುಂದುವರೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಪದವಿ ತರಗತಿಗಳನ್ನು 4 ವರ್ಷಗಳಿಗೆ ವಿಸ್ತರಿಸಿದರೆ 3 ವರ್ಷ ಕನ್ನಡ ವಿಷಯ ಮುಖ್ಯ ಪಠ್ಯ  ಕ್ರಮವೆಂದು ಕಲಿಸಬೇಕು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು