ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿವಾದಿತ ಹೇಳಿಕೆ ನೀಡದಿರಲೆಂದು ದೇವಿಗೆ ಪ್ರಾರ್ಥನೆ: ಸಚಿವ ಸೋಮಶೇಖರ್

Last Updated 18 ಆಗಸ್ಟ್ 2022, 12:16 IST
ಅಕ್ಷರ ಗಾತ್ರ

ಮೈಸೂರು: ‘ಮುಸ್ಲಿಮರ ಪ್ರದೇಶದಲ್ಲಿ ಸಾವರ್ಕರ್‌ ಫೋಟೊ ಹಾಕಲು ಹೋಗಿದ್ದೇಕೆ?’ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ ತಿರುಗೇಟು ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಇತ್ತೀಚಿಗೆ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಮುಂದೆಯಾದರೂ ಅಂತಹ ಹೇಳಿಕೆ ನೀಡದಿರಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

‘ಮುಖ್ಯಮಂತ್ರಿ ಆಗಿದ್ದಾಗ ಅವರ ಮಾತಿಗೆ ತೂಕವಿತ್ತು. ಇತ್ತೀಚಿಗೆ ಏನು ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಟೀಕಿಸಿದರು.

‘ಅತಿವೃಷ್ಟಿಯಿಂದ ಹಾನಿಯಾಗಿ ಹಲವು ದಿನಗಳೇ ಆಗಿವೆ. ಈಗ ಪರಿಶೀಲನೆಗೆ ಅವರು ಹೋಗಿದ್ದಾರೆ. 15 ದಿನಗಳಿಂದ ವೀಕ್ಷಣೆಗೆ ಹೋಗಿರಲಿಲ್ಲ. ಸರ್ಕಾರಿ ಕಾರು ಸೇರಿದಂತೆ ಎಲ್ಲಾ ಸವಲತ್ತುಗಳೂ ಅವರಿಗೆ ಸಿಗುತ್ತವೆ. ಮೊದಲೇ ಹೋಗಿ ಸರ್ಕಾರದ ಗಮನ ಸೆಳೆಯಬೇಕಿತ್ತು. ಎಲ್ಲ ಪರಿಹಾರ ಕೊಟ್ಟ ಮೇಲೆ ಈಗೇಕೆ ಪ್ರವಾಸ ಮಾಡುತ್ತಿದ್ದಾರೆ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಗೆ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸೇರಿಸಿಕೊಂಡಿರುವುದು ಸ್ವಾಗತಾರ್ಹ. ಅವರ ಹಿರಿತನ, ಶ್ರಮ ಗಮನಿಸಿ ದೊಡ್ಡ ಸ್ಥಾನ ನೀಡಲಾಗಿದೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದರಿಂದ ಹಿಡಿದು ಎಲ್ಲವನ್ನೂ ಆ ಸಮಿತಿ ತೀರ್ಮಾನಿಸುತ್ತದೆ. ಭವಿಷ್ಯದ ಚುನಾವಣೆ ದೃಷ್ಟಿಯಿಂದ ಪಕ್ಷವು ಒಳ್ಳೆಯ ನಿರ್ಧಾರ ಮಾಡಿದೆ’ ಎಂದು ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪ ಅವರನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್‌ನವರು ಸುಮ್ಮನೆ ಹೇಳುತ್ತಿದ್ದರು. ರಾಜಕಾರಣಕ್ಕಾಗಿ ಅವರ ಹೆಸರನ್ನು ಪದೇ ಪದೇ ಬಳಸಿಕೊಳ್ಳುತ್ತಿದ್ದರು. ಈಗ ಅವರಿಗೆ ಉತ್ತರ ಸಿಕ್ಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT