ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಪಿಎಸ್‌ಐ ಅಕ್ರಮ| ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದ ತನಿಖೆಯಾಗಲಿ: ಸಿದ್ದರಾಮಯ್ಯ

ವಿಜಯೇಂದ್ರ, ಅಶ್ವತ್ಥನಾರಾಯಣ ಭಾಗಿ: ಸಿದ್ದರಾಮಯ್ಯ, ಡಿಕೆಶಿ ಆರೋಪ
Last Updated 5 ಜುಲೈ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಮತ್ತು ಸಚಿವ ಅಶ್ವತ್ಥನಾರಾಯಣ ಭಾಗಿಯಾಗಿದ್ದಾರೆಂಬ ಆರೋಪವಿದೆ. ಅವರಿಗೆ ರಕ್ಷಣೆ ನೀಡುತ್ತಿರುವ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಗರಣವನ್ನು ಹೈಕೋರ್ಟ್‌ ನ್ಯಾಯಮೂರ್ತಿ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಎಂದರು.

‘ಹಗರಣ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ, ಗೃಹ ಸಚಿವರು ನಮ್ಮ ಮೈಮೇಲೆ ಬಂದರು. ಯಾವುದೇ ಭ್ರಷ್ಟಾಚಾರ, ಅವ್ಯವಹಾರ ನಡೆದಿಲ್ಲವೆಂದು ಆರಗ ಜ್ಞಾನೇಂದ್ರ ವೀರಾವೇಶದಿಂದ ಉತ್ತರಿಸಿದ್ದರು. ಈಗ ಎಡಿಜಿಪಿಯನ್ನು ಬಂಧಿಸಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವ ಗೃಹ ಸಚಿವರು ಏನೆಂದು ಉತ್ತರಿಸುತ್ತಾರೆ’ ಎಂದು ಪ್ರಶ್ನಿಸಿದರು.

‘ವಿಧಾನಸಭೆ ಮೂಲಕ ಸುಳ್ಳು ಹೇಳಿದವರು ಮಂತ್ರಿಯಾಗಿ ಮುಂದು ವರಿಯಲು ಅರ್ಹರೇ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇಂಥ ಸಚಿವರನ್ನು ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡು ಅವರ ಮೂಲಕ ಬೇಜವಾಬ್ದಾರಿ, ಅಸಂಬದ್ಧ, ಸುಳ್ಳು ಹೇಳಿಕೆಯನ್ನು ಮುಖ್ಯಮಂತ್ರಿ ಕೊಡಿಸುತ್ತಿದ್ದಾರೆ. ಸರ್ಕಾರದ ಉದ್ದೇಶ ಇಡೀ ಪ್ರಕರಣವನ್ನು ಮುಚ್ಚಿ ಹಾಕುವುದಾಗಿತ್ತು’ ಎಂದು ದೂರಿದರು.

ಸಚಿವ ಅಶ್ವತ್ಥನಾರಾಯಣ ಅವರ ಕಡೆಯ ಐವರು ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಅವರ ಸಂಬಂಧಿಕರೂ ಬಂಧನಕ್ಕೆ ಒಳಗಾಗಿದ್ದಾರೆ. ಸಿಐಡಿಯವರು ಅಶ್ವತ್ಥನಾರಾಯಣ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರಾ? ಒಬ್ಬ ಅಭ್ಯರ್ಥಿಗೆ ₹30 ಲಕ್ಷದಿಂದ ₹1 ಕೋಟಿ‌ವರೆಗೂ ವಸೂಲಿ ಮಾಡಿದ್ದಾರೆ. ಈ ಹಣ ಯಾರ‍್ಯಾರ ಜೇಬಿಗೆ ಹೋಗಿದೆ? ಯಾವ ಮಂತ್ರಿಗೆ ಹೋಗಿದೆ? ಮುಖ್ಯಮಂತ್ರಿಗೆ ಹೋಗಿದೆಯಾ? ಇವೆಲ್ಲ ಗೊತ್ತಾಗಬೇಕಲ್ಲವೇ? ಎಂದರು.

‘ಸರ್ಕಾರದ ನಿರ್ದೇಶನ ಇಲ್ಲದೆ ಎಡಿಜಿಪಿ ಅವರು ಒಎಂಆರ್‌ ಶೀಟ್‌ ಇಷ್ಟು ರಾಜಾರೋಷವಾಗಿ ತಿದ್ದುಪಡಿ ಮಾಡಲು ಸಾಧ್ಯವೇ? ನೂರಾರು ಕೋಟಿ ರೂಪಾಯಿ ಲಂಚ ಪಡೆಯಲು ಸಾಧ್ಯವೇ? ಈ ಹಿಂದೆ ನಡೆದಿರುವ ಎಫ್‌ಡಿಎ, ತೋಟಗಾರಿಕೆ, ಪಶು ಸಂಗೋಪನೆ, ಲೋಕೋಪಯೋಗಿ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನಡೆದ ನೇಮಕಾತಿ ಬಗ್ಗೆಯೂ ತನಿಖೆಯಾಗಬೇಕು’ ಎಂದು ಅವರು ಒತ್ತಾಯಿಸಿದರು.‌

ರಾಜೀನಾಮೆ ನೀಡದಿದ್ದರೆ ವಜಾಗೊಳಿಸಿ– ಡಿಕೆಶಿ

‘ಈ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜೀನಾಮೆ ನೀಡದಿದ್ದರೆ ರಾಜ್ಯಪಾಲರೇ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

‘ಈ ಅಕ್ರಮಕ್ಕಾಗಿ ಸರ್ಕಾರವೇ ಅಂಗಡಿ ತೆರೆದಿತ್ತು. ಪಿಎಸ್‌ಐ ಹುದ್ದೆ ಕೊಳ್ಳಲು ಯುವಕರು ಹೋಗಿದ್ದರು. ಅಂಗಡಿ ತೆಗೆಯದಿದ್ದರೆ ಯುವಕರು ಹೋಗುತ್ತಿದ್ದರೇ? ಈ ಅಂಗಡಿ ಯಾರದ್ದು ಎಂಬ ತನಿಖೆ ಆಗಬೇಕು. ಆದರೆ, ಸರ್ಕಾರ ಈ ಅಕ್ರಮದಲ್ಲಿ ಶಾಮೀಲಾಗಿ ಕೇವಲ ಖರೀದಿ ಮಾಡಿದವರನ್ನು ‌ಬಂಧಿಸಿ, ದೊಡ್ಡವರನ್ನು ಬಿಟ್ಟಿದೆ’ ಎಂದು ಆರೋಪಿಸಿದರು.

‘ಕೋರ್ಟ್ ಹೇಳಿತೆಂದು ಈ ಹಗರಣದಲ್ಲಿ ಎಡಿಜಿಪಿಯನ್ನು ಬಂಧಿಸಲಾಗಿದೆ. ಯಾವುದೇ ವಿಚಾರಣೆ ಮಾಡಬೇಕಾದರೆ, ಅವರ ಹೇಳಿಕೆ, ಅವರ ಕೆಳ ಅಧಿಕಾರಿಗಳ ಹೇಳಿಕೆ, ಸರಿಯಾಗಿದೆಯೇ ಇಲ್ಲವೇ? ಎಂದು ಸುದೀರ್ಘ ಚರ್ಚಿಸಿ, ದಾಖಲಾತಿ ಸಂಗ್ರಹಿಸಿದ ನಂತರ ವೈದ್ಯಕೀಯ ಪರೀಕ್ಷೆಗೆ ಕಳುಹಿಸುವುದು ವಾಡಿಕೆ. ಆದರೆ, ಬಂಧಿಸಿದ ಅರ್ಧ ಗಂಟೆಯಲ್ಲಿ ಎಡಿಜಿಪಿಯನ್ನು ಆರೋಗ್ಯ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ಬಂಧನ ನ್ಯಾಯಾಂಗ ಮತ್ತು ಜನರ ಕಣ್ಣೊರೆಸುವ ತಂತ್ರ’ ಎಂದು ದೂರಿದರು.

‘ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ’

ಬೆಂಗಳೂರು: ‘ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಗೃಹ ಸಚಿವರ ರಾಜೀನಾಮೆ ಕೇಳಲು ಕಾಂಗ್ರೆಸ್ಸಿಗೆ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ಸಿನವರು ಅಧಿಕಾರದಲ್ಲಿ ಇದ್ದಿದ್ದರೆ ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಿದ್ದರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಹಗರಣ ನಡೆದಿರುವುದು ಗಮನಕ್ಕೆ ಬಂದ ತಕ್ಷಣವೇ ಪ್ರಾಥಮಿಕ ತನಿಖೆ ಮಾಡಿಸಿ, ಸಿಐಡಿಗೆ ವಹಿಸಲಾಗಿದೆ. ಪ್ರಾಮಾಣಿಕವಾಗಿ, ದಕ್ಷತೆಯಿಂದ ಗೃಹ ಸಚಿವರು ಕೆಲಸ ಮಾಡಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ದಕ್ಷತೆ ಇರುವುದರಿಂದಲೇ ಅಕ್ರಮ ಹೊರಬಂದಿದೆ’ ಎಂದರು.

‘ಕಾಂಗ್ರೆಸ್‌ನವರ ಅವಧಿಯಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿ ಆರೋಪಿಯಾಗಿದ್ದರು. ಬಂಧನ ದೂರದ ಮಾತು, ಅವರ ವಿಚಾರಣೆಯನ್ನೂ ಮಾಡಲಿಲ್ಲ. ಯಾವುದೇ ಮುಲಾಜಿಗೆ ಒಳಗಾಗದೆ ತನಿಖೆ ನಡೆಸಲು ಮುಕ್ತ ಸ್ವಾತಂತ್ರ್ಯ ನೀಡಿದ್ದರಿಂದಲೇ ಎಡಿಜಿಪಿ ಬಂಧನದಂಥ ದಿಟ್ಟ ಕ್ರಮ‌ವನ್ನು ಪೊಲೀಸ್‌ ಅಧಿಕಾರಿಗಳು ತೆಗೆದುಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT