ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಸಾಧಕರಿಗೆ ಇನ್ಫೊಸಿಸ್ ಪ್ರಶಸ್ತಿ ಪ್ರದಾನ: ತಲಾ ₹75 ಲಕ್ಷ ಬಹುಮಾನ

ಬೆಂಗಳೂರಿನ ಮೂವರಿಗೆ ಗೌರವ
Last Updated 2 ಡಿಸೆಂಬರ್ 2021, 18:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಡಾ.ನೀರಜ್‌ ಕಯಾಲ್‌, ಡಾ.ಚಂದ್ರಶೇಖರ್‌ ನಾಯರ್‌ ಮತ್ತು ಪ್ರೊ. ಮಹೇಶ್‌ ಶಂಕರನ್ ಸೇರಿದಂತೆ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಆರು ಸಾಧಕರಿಗೆ ಗುರುವಾರ ‘ಇನ್ಫೊಸಿಸ್‌ ಪ್ರಶಸ್ತಿ–2021’ ನೀಡಿ ಗೌರವಿಸಲಾಯಿತು.

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್‌ ಸೈನ್ಸ್‌, ಮಾನವೀಯ ಕ್ಷೇತ್ರ, ಜೀವವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿನ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸಲು ‘ಇನ್ಫೊಸಿಸ್‌ ಸೈನ್ಸ್ ಫೌಂಡೇಷನ್’ (ಐಎಸ್‌ಎಫ್‌) ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಪ್ರಶಸ್ತಿಯು ತಲಾ ₹75 ಲಕ್ಷ (1 ಲಕ್ಷ ಅಮೆರಿಕನ್‌ ಡಾಲರ್‌) ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

2016ರ ಇನ್ಫೊಸಿಸ್‌ ಪ್ರಶಸ್ತಿ ಪುರಸ್ಕೃತ, ಸಿಎಂಸಿ ವೆಲ್ಲೂರಿನ ಪ್ರಾಧ್ಯಾಪಕ ಹಾಗೂ ಖ್ಯಾತ ವೈರಾಣು ತಜ್ಞ ಪ್ರೊ.ಗಗನ್‌ದೀಪ್‌ ಕಾಂಗ್‌ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ವರ್ಷ ಸ್ವೀಕರಿಸಿದ 201 ನಾಮನಿರ್ದೇಶನಗಳಲ್ಲಿ ಆರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯು ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ತಜ್ಞರು ಹಾಗೂ ಪ್ರಾಧ್ಯಾಪಕರನ್ನು ಒಳಗೊಂಡಿತ್ತು.

ಪ್ರಶಸ್ತಿ ವಿಜೇತರ ವಿವರ

ಡಾ.ಚಂದ್ರಶೇಖರ್‌ ನಾಯರ್‌

ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಕ್ಷೇತ್ರದಲ್ಲಿನ ಸಾಧನೆಗೆ ಡಾ.ಚಂದ್ರಶೇಖರ್‌ ನಾಯರ್‌ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪಿಸಿಆರ್‌ ಆಧಾರಿತ ವೈದ್ಯಕೀಯ ತಪಾಸಣೆಗೆ ಬೆಂಗಳೂರಿನ ಮೊಲ್ಬಿಯೋ ಡಯಾಗ್ನಿಸ್ಟಿಕ್‌ನನಾಯರ್‌ ಹೊಸ ರೂಪ ನೀಡಿದ್ದಾರೆ. ಕೋವಿಡ್ -19 ಮತ್ತು ಕ್ಷಯರೋಗ ಸೇರಿದಂತೆ ಹಲವು ಸೋಂಕಿತ ಕಾಯಿಲೆಗಳ ತ್ವರಿತ ತಪಾಸಣೆ ಕೈಗೊಳ್ಳುವಲ್ಲಿ ಇದರಿಂದ ಸಹಾಯವಾಗಿದೆ.

ಡಾ. ನಾಯರ್ ಅವರು ಬ್ಯಾಟರಿ-ಚಾಲಿತ, ವೈದ್ಯರು ಬಳಸಬಹುದಾದ ಪಿಸಿಆರ್‌ ಸಾಧನ ತಯಾರಿಸಿದ್ದಾರೆ. ಇದರಿಂದ, ಒಂದು ಗಂಟೆಯಲ್ಲಿ 30ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಬಹುದಾಗಿದೆ.

ಡಾ.ಏಂಜಲಾ ಬ್ಯಾರೆಟೋ ಕ್ಸೇವಿಯರ್‌

ಮಾನವೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಪೋರ್ಚುಗಲ್‌ನ ಲಿಸ್ಬನ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಡಾ. ಏಂಜೆಲಾ ಬ್ಯಾರೆಟೊ ಕ್ಸೇವಿಯರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಭಾರತದಲ್ಲಿ, ವಿಶೇಷವಾಗಿ ಗೋವಾದಲ್ಲಿನ ಮತಾಂತರ ಮತ್ತು ಹಿಂಸಾಚಾರದ ಆಳವಾದ ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಇಂಗ್ಲಿಷ್ ಮತ್ತು ಪೋರ್ಚುಗೀಸ್‌ನಲ್ಲಿ ಅವರ ಬರಹಗಳು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಇತಿಹಾಸದ ಮೇಲೆ ಬೆಳಕು ಚೆಲ್ಲಿವೆ.

ಪ್ರೊ. ಮಹೇಶ್‌ ಶಂಕರನ್‌

ಜೀವ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ (ಎನ್‌ಸಿಬಿಎಸ್‌) ಪ್ರೊ. ಮಹೇಶ್ ಶಂಕರನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉಷ್ಣವಲಯದ ಸವನ್ನಾ ಪರಿಸರ ವಿಜ್ಞಾನದ ಕುರಿತು ಇವರು ಕೈಗೊಂಡ ಅತ್ಯುತ್ತಮ ಸಂಶೋಧನಾ ಕಾರ್ಯಗಳು, ಪಶ್ಚಿಮ ಘಟ್ಟ ಪರಿಸರ ವ್ಯವಸ್ಥೆಗಳು ಮತ್ತು ಭಾರತೀಯ ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅವರು ನೀಡಿದ ಕೊಡುಗೆ ಮತ್ತು ಅಧ್ಯಯನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಡಾ. ನೀರಜ್‌ ಕಯಾಲ್:

ಗಣಿತ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ಮೈಕ್ರೋಸಾಫ್ಟ್‌ ಸಂಶೋಧನಾ ಪ್ರಯೋಗಾಲಯದ ಡಾ.ನೀರಜ್‌ ಕಯಾಲ್‌ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಕಂಪ್ಯೂಟೇಷನಲ್‌ ಸಂಕೀರ್ಣತೆ’ಗೆ ನೀಡಿರುವ ಕೊಡುಗೆ ಪರಿಗಣಿಸಿ ಈ ಗೌರವ ನೀಡಲಾಗಿದೆ. ಬೀಜಗಣಿತದ ಕಂಪ್ಯೂಟೇಷನ್‌ನಲ್ಲಿ ಡಾ. ನೀರಜ್‌ ಅವರು ವಿನೂತನ ಕಾರ್ಯಕೈಗೊಂಡಿದ್ದಾರೆ.

ಪ್ರೊ. ಬೆಡಂಗದಾಸ್‌ ಮೊಹಾಂತಿ:

ಭೌತವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗಾಗಿ ಭುವನೇಶ್ವರದಲ್ಲಿರುವ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಯ ಪ್ರೊ. ಬೆಡಂಗದಾಸ್ ಮೊಹಾಂತಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಇವರು ಬ್ರೂಕ್‌ಹೇವನ್‌ನ ರಾಷ್ಟ್ರೀಯ ಪ್ರಯೋಗಾಲಯ ಮತ್ತು ಯುರೋಪಿಯನ್‌ ಪರಮಾಣು ಸಂಶೋಧನೆಯ ಸಂಸ್ಥೆಯಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.

ಡಾ. ಪ್ರತೀಕ್ಷಾ ಬಾಕ್ಸಿ:

ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನವದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕಾನೂನು ಮತ್ತು ಆಡಳಿತದ ಆಧ್ಯಯನ ಕೇಂದ್ರದ ಡಾ. ಪ್ರತೀಕ್ಷಾ ಬಾಕ್ಸಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲೈಂಗಿಕ ಹಿಂಸೆ ಮತ್ತು ನ್ಯಾಯಶಾಸ್ತ್ರದ ಕುರಿತು ಅವರು ವಿಶೇಷ ಅಧ್ಯಯನ ನಡೆಸಿದ್ದಾರೆ. ಜನಾಂಗೀಯ ನೀತಿಗಳು ಕುರಿತು ಸಂಶೋಧನೆ ಕೈಗೊಂಡಿರುವ ಅವರು ಈ ಬಗ್ಗೆ ಅಪಾರ ಅಧ್ಯಯನ ಮತ್ತು ವಿಶ್ಲೇಷಣೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT