ಭಾನುವಾರ, ಜನವರಿ 24, 2021
17 °C
ವಿಶೇಷ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯ

ಶ್ರವಣದೋಷವುಳ್ಳ ಮಕ್ಕಳಿಗೆ ಸವಾಲಾದ ‘ಮಾಸ್ಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿನ ಶ್ರವಣದೋಷವುಳ್ಳ ಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಈ ಮಕ್ಕಳ ನೆರವಿಗೆ ಸರ್ಕಾರ ನಿಲ್ಲಬೇಕೆಂಬ ಆಗ್ರಹ ವ್ಯಕ್ತವಾಗಿದೆ.

‘ಶ್ರವಣದೋಷ ಹೊಂದಿರುವ ಮಕ್ಕಳ ಮಾತು, ಭಾಷೆ ಬೆಳೆಯಬೇಕಾದರೆ ಅವರಿಗೆ ಯಾವಾಗಲೂ ಸಂಪರ್ಕ ಮತ್ತು ಸಂವಹನದ ಅವಶ್ಯಕತೆಯಿದೆ. ಈಗ ಪ್ರತಿಯೊಬ್ಬರೂ ಮಾಸ್ಕ್ ಬಳಸುವುದು ಕಡ್ಡಾಯವಾಗಿರುವುದರಿಂದ ತುಟಿಚಲನೆ ಮೂಲಕ ಮಾತು ಅರ್ಥಮಾಡಿಕೊಳ್ಳುವ ಮಕ್ಕಳ ಭಾಷೆ, ಮಾತು ಮತ್ತು ಕಲಿಕೆಗೆ ಅಡ್ಡಿ ಉಂಟಾಗುತ್ತಿದೆ’ ಎಂದು ವಿಶೇಷ ಮಕ್ಕಳಿಗೆ ಶಿಕ್ಷಣ ಒದಗಿಸುವ ಎಸ್‌ಜಿಎಸ್‌ ವಾಗ್ದೇವಿ ಸಂಸ್ಥೆಯ ನಿರ್ದೇಶಕಿ ಡಾ. ಶಾಂತಾ ರಾಧಾಕೃಷ್ಣ ಹೇಳಿದರು.

‘ಈ ಮಕ್ಕಳಿಗೆ ಹಲವು ವಿಶೇಷ ಶಾಲೆಗಳು ಶಿಕ್ಷಣ ನೀಡುತ್ತಿವೆ. ಆದರೆ, ಕೋವಿಡ್‌ನಿಂದ ಈ ಶಾಲೆಗಳೂ ಸ್ಥಗಿತಗೊಂಡಿವೆ. ಮಧ್ಯಮ ಹಾಗೂ ಮೇಲ್ವರ್ಗದ ಪೋಷಕರು ತಮ್ಮ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಮತ್ತು ವೈಯಕ್ತಿಕ ತರಬೇತಿ ಕೊಡಿಸಲು ಪ್ರಯತ್ನಸುತ್ತಿದ್ದಾರೆ. ಆದರೆ ಆರ್ಥಿಕವಾಗಿ ಹಿಂದುಳಿದಿರುವ ಪೋಷಕರಿಗೆ ಈ ಸೌಲಭ್ಯ ಕಲ್ಪಿಸಲು ಕಷ್ಟವಾಗುತ್ತಿದೆ’ ಎಂದು ಪ್ರತಿಪಾದಿಸಿದರು.

‘ರಾಜ್ಯದ ಪ್ರತಿ 100 ಮಕ್ಕಳಲ್ಲಿ ಮೂರು ಮಕ್ಕಳು ಈ ರೀತಿಯ ಶ್ರವಣದೋಷ ಹೊಂದಿದ್ದಾರೆ. ತಂದೆ–ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಮಕ್ಕಳಿಗೆ ಮನೆಯಲ್ಲಿಯೂ ಶಿಕ್ಷಣ ದೊರೆಯುತ್ತಿಲ್ಲ. ಬಹುತೇಕರು ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನ್‌ ಕೊಳ್ಳಲು ಶಕ್ತರಾಗಿಲ್ಲ. ಈ ಹಿಂದೆ ಶಾಲೆಯಲ್ಲಿ ಕಲಿತ ಮಾತು–ಭಾಷೆ ಉಪಯೋಗಿಸುವುದಕ್ಕೂ ಸಾಧ್ಯವಾಗದೆ ಈ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಅವರ ನಡವಳಿಕೆಯಲ್ಲಿಯೂ ಬದಲಾವಣೆಯಾಗುತ್ತಿದೆ’ ಎಂದರು.

‘ವಿಶೇಷ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುತ್ತದೆ. ಅಂತರ ಪಾಲನೆ ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬಹುದು. ಸಾಧ್ಯವಿರುವ ಸಂಸ್ಥೆಗಳಿಗೆ ವಿಶೇಷ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಅವಕಾಶ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಆರ್ಥಿಕ ನೆರವು: ‘ಸಾಮಾನ್ಯ ಮಕ್ಕಳಿಗೆ ಚಂದನ ವಾಹಿನಿಯ ಮೂಲಕ ಪಾಠಗಳನ್ನು ಪ್ರಸಾರ ಮಾಡಲಾಗುತ್ತಿದೆ. ವಿಶೇಷ ಮಕ್ಕಳಿಗೂ ಈ ರೀತಿಯ ವ್ಯವಸ್ಥೆ ಮಾಡಬೇಕು. ಪಾಠದ ಜೊತೆಗೆ ಅಡಿಬರಹಗಳನ್ನೂ ನೀಡಬೇಕು’ ಎಂದು ಕೋರುತ್ತಾರೆ ನಗರದ ಚಂದ್ರಶೇಖರ್ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್ ಅಂಡ ಹಿಯರಿಂಗ್‌ನ ಸಂಚಾಲಕಿ ರತ್ನಾ ಶೆಟ್ಟಿ.

‘ವಿಶೇಷ ಮಕ್ಕಳಿಗೆ ಪಡಿತರ ನೀಡುವುದಾಗಲಿ ಅಥವಾ ಅವರ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆಯನ್ನಾಗಲಿ ಸರ್ಕಾರ ಮಾಡುತ್ತಿಲ್ಲ. ಶ್ರವಣ ಸಾಧನಗಳನ್ನು ಸರಿ ಮಾಡಿಸುವುದಕ್ಕೂ ಎಷ್ಟೋ ಪೋಷಕರಿಗೆ ಆಗುತ್ತಿಲ್ಲ. ಇಂತಹ ಮಕ್ಕಳ ಪೋಷಕರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು