ಸೋಮವಾರ, ಜುಲೈ 4, 2022
21 °C
ನ್ಯಾಯಯುತ ತನಿಖೆಗೆ ಆಗ್ರಹ

ಎಸ್‌ಐಟಿಯಿಂದ ಸಾಕ್ಷ್ಯ ನಾಶ: ಸಂತ್ರಸ್ತೆ ಆರೋಪ, ಪೊಲೀಸ್ ಕಮಿಷನರ್‌ಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ನ್ಯಾಯಸಮ್ಮತವಾಗಿ ಸಿ.ಡಿ ಪ್ರಕರಣದ ತನಿಖೆ ನಡೆಸುತ್ತಿಲ್ಲ. ಬದಲಾಗಿ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದು, ಯಾವುದೇ ಒತ್ತಡಕ್ಕೆ ಮಣಿಯದೇ ಆರೋಪಿಯನ್ನು ವಿಚಾರಣೆ ನಡೆಸಬೇಕು’ ಎಂದೂ ಮನವಿ ಮಾಡಿದ್ದಾರೆ.

‘ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನೀಡಿರುವ ದೂರಿನಲ್ಲಿ ನನ್ನ ಹೆಸರು ಉಲ್ಲೇಖವಾಗಿಲ್ಲ. ಆದರೂ, ಎಸ್‌ಐಟಿ ಅಧಿಕಾರಿಗಳು ನಾನು ವಾಸವಿದ್ದ ಪಿ.ಜಿ ಮೇಲೆ ದಾಳಿ ಮಾಡಿ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಈ ಮೂಲಕ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರದ ಒತ್ತಡಕ್ಕೆ ಎಸ್‌ಐಟಿ ಮಣಿದಿದೆ’ ಎಂದು ಸಂತ್ರಸ್ತ ಯುವತಿ ಪತ್ರದಲ್ಲಿ ಆರೋಪಿಸಿದ್ದಾರೆ.

ನಾನು ಸಂತ್ರಸ್ತೆಯೋ, ಆರೋಪಿಯೋ?: ‘ಪ್ರಕರಣ ಸಂಬಂಧ ಎಸ್‌ಐಟಿ ತಂಡ ನನ್ನನ್ನು ವಿಚಾರಣೆ ನಡೆಸಿದೆ. ಅಧಿಕಾರಿಗಳ ಮುಂದೆ ಎಲ್ಲ ಮಾಹಿತಿಯನ್ನು ತಿಳಿಸಿದ್ದೇನೆ. ವೈದ್ಯಕೀಯ ಪರೀಕ್ಷೆ, ಹೇಳಿಕೆ ದಾಖಲು, ಆರ್‌.ಟಿ.ನಗರದ ಪಿಜಿ ಹಾಗೂ ಕೃತ್ಯ ನಡೆದಿದ್ದ ರಮೇಶ ಜಾರಕಿಹೊಳಿ ಅವರ ‘ಮಂತ್ರಿ ಗ್ರೀನ್’ ಅಪಾರ್ಟ್‌ಮೆಂಟ್ ಸಮುಚ್ಛಯದಲ್ಲಿ ಸ್ಥಳ ಪಂಚನಾಮೆಯೂ ನಡೆದಿದೆ. ಬಿಡುವಿಲ್ಲದೆ, ನನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಪ್ರಕರಣದ ಆರೋಪಿಯಾಗಿರುವ ರಮೇಶ ಜಾರಕಿಹೊಳಿ ಅವರನ್ನು ಕೇವಲ ಮೂರು ಗಂಟೆಗಳ ವಿಚಾರಣೆ ನಡೆಸಿ, ಮುಕ್ತವಾಗಿ ಓಡಾಡಲು ಎಸ್‌ಐಟಿ ಅವಕಾಶ ಕಲ್ಪಿಸಿದೆ. ಇದೆಲ್ಲವನ್ನೂ ಗಮನಿಸಿದರೆ, ನಾನು ಪ್ರಕರಣದ ಸಂತ್ರಸ್ತೆಯೋ? ಅಥವಾ ಆರೋಪಿಯೋ? ಎಂಬ ಅನುಮಾನ ವ್ಯಕ್ತವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

‘ರಮೇಶ ಜಾರಕಿಹೊಳಿ ಅವರು ನನ್ನ ಚಾರಿತ್ರ್ಯವಧೆ ಮಾಡಲು ಷಡ್ಯಂತ್ರ ನಡೆಸಿದ್ದು , ಇದಕ್ಕಾಗಿ ಎಸ್‌ಐಟಿ ಮೇಲೆ ಸರ್ಕಾರದಿಂದ ಒತ್ತಡ ತರುತ್ತಿದ್ದಾರೆ. ನಾನು ನೀಡಿರುವ ದೂರಿನ ಅನ್ವಯ ಈವರೆಗೆ ಆರೋಪಿಯನ್ನು ಗಂಭೀರವಾಗಿ ವಿಚಾರಣೆ ನಡೆಸಿರುವ ಬಗ್ಗೆ ವಿಶ್ವಾಸವಿಲ್ಲ’.

‘ಗೃಹ ಇಲಾಖೆಯು ನನ್ನ ಸಹಮತ ಪಡೆಯದೆ, ಪ್ರಕರಣಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿರುವುದಕ್ಕೆ ನನ್ನ ಆಕ್ಷೇಪವಿದೆ. ಇದರ ನಡುವೆಯೇ ‘ರಮೇಶ ಅವರು ಆರೋಪಮುಕ್ತರಾಗಿ ಹೊರಬರುತ್ತಾರೆ’ ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯಿಂದ ಆತಂಕಗೊಂಡಿದ್ದೇನೆ. ದಯವಿಟ್ಟು ನನ್ನ ದೂರನ್ನು ಒಬ್ಬ ಸಂತ್ರಸ್ತ, ಅಸಹಾಯಕ ಯುವತಿಯ ದೃಷ್ಟಿಯಿಂದ ಪರಿಗಣಿಸಬೇಕು. ಯಾರ ಒತ್ತಡಕ್ಕೂ ಮಣಿಯದೆ, ಆರೋಪಿಯನ್ನು ನ್ಯಾಯಯುತ ವಿಚಾರಣೆ ನಡೆಸುವ ಮೂಲಕ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು’ ಎಂದೂ ಒತ್ತಾಯಿಸಿದ್ದಾರೆ.

'ಆದರೆ, ಪ್ರಕರಣದ ಆರೋಪಿ ರಮೇಶ ಜಾರಕಿಹೊಳಿ ಅವರನ್ನು ಕೇವಲ ಮೂರು ಗಂಟೆಗಳ ವಿಚಾರಣೆ ನಡೆಸಿ, ಮುಕ್ತವಾಗಿ ಓಡಾಡಲು ಎಸ್‌ಐಟಿ ಅವಕಾಶ ಕಲ್ಪಿಸಿದೆ. ಇದೆಲ್ಲವನ್ನೂ ಗಮನಿಸಿದರೆ, ನಾನು ಪ್ರಕರಣದ ಸಂತ್ರಸ್ತೆಯೋ? ಅಥವಾ ಆರೋಪಿಯೋ? ಎಂಬ ಅನುಮಾನ ವ್ಯಕ್ತವಾಗಿದೆ’ ಎಂದು ಹೇಳಿದ್ದಾರೆ. 

‘ರಮೇಶ ಜಾರಕಿಹೊಳಿ ಅವರು ನನ್ನ ಚಾರಿತ್ರ್ಯವಧೆ ಮಾಡಲು ಷಡ್ಯಂತ್ರ ನಡೆಸಿದ್ದು , ಇದಕ್ಕಾಗಿ ಎಸ್‌ಐಟಿ ಮೇಲೆ ಸರ್ಕಾರದಿಂದ ಒತ್ತಡ ತರುತ್ತಿದ್ದಾರೆ. ನಾನು ನೀಡಿರುವ ದೂರಿನ ಅನ್ವಯ ಈವರೆಗೆ ಆರೋಪಿಯನ್ನು ಗಂಭೀರವಾಗಿ ವಿಚಾರಣೆ ನಡೆಸಿರುವ ಬಗ್ಗೆ ವಿಶ್ವಾಸವಿಲ್ಲ’ ಎಂದಿದ್ದಾರೆ.

‘ಗೃಹ ಇಲಾಖೆಯು ನನ್ನ ಸಹಮತ ಪಡೆಯದೆ, ಪ್ರಕರಣಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿರುವುದಕ್ಕೆ ನನ್ನ ಆಕ್ಷೇಪವಿದೆ. ಇದರ ನಡುವೆಯೇ ‘ರಮೇಶ ಅವರು ಆರೋಪಮುಕ್ತರಾಗಿ ಹೊರಬರುತ್ತಾರೆ’ ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯಿಂದ ಆತಂಕಗೊಂಡಿದ್ದೇನೆ. ದಯವಿಟ್ಟು ನನ್ನ ದೂರನ್ನು ಒಬ್ಬ ಸಂತ್ರಸ್ತ, ಅಸಹಾಯಕ ಯುವತಿಯ ದೃಷ್ಟಿಯಿಂದ ಪರಿಗಣಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

ಸಂತ್ರಸ್ತೆ ಅನುಪಸ್ಥಿತಿಯಲ್ಲಿ ದಾಳಿ: ವಕೀಲ ಜಗದೀಶ್ ಆಕ್ಷೇಪ
‘ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಸಂತ್ರಸ್ತೆಯ ಹೆಸರು ಉಲ್ಲೇಖವಾಗಿಲ್ಲ. ತನಿಖೆ ಕೈಗೆತ್ತಿಕೊಂಡ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತೆ ವಾಸವಿದ್ದ ಪಿ.ಜಿ.ಮೇಲೆ ಆಕೆಯ ಅನುಪಸ್ಥಿತಿಯಲ್ಲಿ ದಾಳಿ ನಡೆಸಿದ್ದಾರೆ’ ಎಂದು ವಕೀಲ ಜಗದೀಶ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಇದು ದುರುದ್ದೇಶದಿಂದ ನಡೆದಿರುವ ದಾಳಿ. ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಸಂತ್ರಸ್ತೆಯ ನಿವಾಸದ ಮೇಲೆ ದಾಳಿ ನಡೆಸಿ, ಅಲ್ಲಿದ್ದ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಇದಕ್ಕೆ ಎಸ್‌ಐಟಿ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

‘ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಇ–ಮೇಲ್ ಮೂಲಕ ದೂರು ಸಲ್ಲಿಸಲಾಗಿದೆ’ ಎಂದು ಹೇಳಿದರು.

ಇಂದು ರಮೇಶ ಜಾರಕಿಹೊಳಿ ವಿಚಾರಣೆ
ಸಿ.ಡಿ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಏ.5ರಂದು ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಬರುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ನಡೆಯಲಿದೆ.

ರಮೇಶ ಅವರನ್ನು ಎಸ್‌ಐಟಿ ಅಧಿಕಾರಿಗಳು ಈ ಹಿಂದೆಯೂ ವಿಚಾರಣೆ ನಡೆಸಿದ್ದರು. ಮತ್ತೆ ವಿಚಾರಣೆಗೆ ಬರುವಂತೆ ಅವರಿಗೆ ನೋಟಿಸ್ ನೀಡಿದ್ದರೂ ಅವರು ಎಸ್‌ಐಟಿ ಎದುರು ಹಾಜರಾಗಿರಲಿಲ್ಲ. ಹಾಗಾಗಿ, ಏ.5ರಂದು ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಮತ್ತೆ ನೋಟಿಸ್ ಜಾರಿ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು