ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮನೆ ಮನೆ' ಸಮೀಕ್ಷೆ: ಶಾಲೆ ಬಿಟ್ಟವರು 56,605, ಮೆಟ್ಟಿಲನ್ನೇ ತುಳಿಯದವರು 14,561

ಹಳ್ಳಿಗಳಲ್ಲಿ ಶೇ 90ರಷ್ಟು, ನಗರಗಳಲ್ಲಿ ಶೇ 75ರಷ್ಟು ‘ಮನೆ ಮನೆ’ ಸಮೀಕ್ಷೆ ಪೂರ್ಣ
Last Updated 25 ಜೂನ್ 2021, 21:41 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ (ಬಿಬಿಎಂಪಿ ಹೊರತುಪಡಿಸಿ) ನಡೆದ ಮನೆ ಮನೆ ಸಮೀಕ್ಷೆ ಪ್ರಕಾರ, 6ರಿಂದ 14 ವರ್ಷ ವಯೋಮಾನದ 56,605 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ, 14,561 ಮಕ್ಕಳು ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲ!

ಗ್ರಾಮೀಣ ಭಾಗಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹಾಗೂ ಮಹಾನಗರಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಗ್ರಾಮೀಣ ಭಾಗಗಳಲ್ಲಿ ಶೇ 90ರಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಶೇ 75ರಷ್ಟು ಸಮೀಕ್ಷೆ ಪೂರ್ತಿ ಆಗಿದೆ. ಬಿಬಿಎಂ‍ಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭವೇ ಆಗಿಲ್ಲ.

ಗ್ರಾಮೀಣ ಭಾಗದಲ್ಲಿ 80,35,913 ಕುಟುಂಬಗಳ ಸಮೀಕ್ಷೆ ನಡೆಸಲಾಗಿದ್ದು, 33,329 ಮಕ್ಕಳು ಅರ್ಧದಿಂದಲೇ ಶಾಲೆ ಬಿಟ್ಟಿರುವ ಮಾಹಿತಿ ಸಿಕ್ಕಿದೆ. 9,719 ಮಕ್ಕಳು ಶಾಲೆಗೇ ಸೇರಿಲ್ಲ ಎನ್ನುವುದು ಗೊತ್ತಾಗಿದೆ. ನಗರ ಪ್ರದೇಶಗಳಲ್ಲಿ 25,47,228 ಕುಟುಂಬಗಳ ಸಮೀಕ್ಷೆಯಲ್ಲಿ 8,715 ಮಕ್ಕಳು ಅರ್ಧದಲ್ಲೇ ಶಾಲೆ ಬಿಟ್ಟಿರುವುದು ಮತ್ತು 4,842 ಮಕ್ಕಳು ಶಾಲೆಗೇ ಹೋಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇ–ಆಡಳಿತ ಇಲಾಖೆ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್‌ ‘ಕರ್ನಾಟಕ ಎಚ್2ಎಚ್ ಮಕ್ಕಳ ಸರ್ವರ್ ಆ್ಯಪ್’ ಮೂಲಕ ಪಡಿತರ ಚೀಟಿ ಆಧರಿಸಿ ಮತ್ತು ಹೊಸ ಕುಟುಂಬಗಳನ್ನು ಗುರುತಿಸಿ ಸಮೀಕ್ಷೆ ನಡೆಸಲಾಗಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ, ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಕಾರಣಗಳಿಂದ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಶೇ 75ರಷ್ಟು ಪೂರ್ಣ:
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಯಮ 6ರ ಪ್ರಕಾರ ಸ್ಥಳೀಯ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ 0–14 ವಯಸ್ಸಿನ ಮಕ್ಕಳ ದಾಖಲೆಯನ್ನು ನಿರ್ವಹಿಸಬೇಕು. 2013ರಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಕಳೆದ ವರ್ಷ (2020) ಏಪ್ರಿಲ್‌ 30ರೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಹೈಕೋರ್ಟ್‌ ಪೀಠ ಆದೇಶ ನೀಡಿತ್ತು.

ಅದರಂತೆ, ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ (ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ) 2020–21ನೇ ಸಾಲಿನಲ್ಲಿ ಶಾಲೆ ಬಿಟ್ಟ ಮತ್ತು ಶಾಲೆಗೆ ಸೇರದ ಮಕ್ಕಳನ್ನು ಗುರುತಿಸಿ ಶಾಲೆಗೆ ಹಾಜರಾಗಲು ನಗರ ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ 2020ರ ಫೆ. 24ರಂದೇ ಸುತ್ತೋಲೆ ಹೊರಡಿಸಲಾಗಿತ್ತು. ಅಲ್ಲದೆ, 2020ರ ಮೇ 31ರ ಒಳಗೇ ಈ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ, ಕೋವಿಡ್‌ ಕಾರಣದಿಂದ ವೇಳಾಪಟ್ಟಿಯಂತೆ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ ಎಂದುನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಹೀಗಾಗಿ, ಸಮೀಕ್ಷೆ ನಡೆಸುವಂತೆ 2020ರ ಡಿ. 14ರಂದು ಪರಿಷ್ಕೃತ ಸುತ್ತೋಲೆ ಹೊರಡಿಸಲಾಗಿದೆ. ಅದರಂತೆ, ಡಿ. 21ರಿಂದ 2021ರ ಜ. 20ರ ಒಳಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಹಾಗೂ ಫೆ. 14ರ ಒಳಗೆ 10 ಮಹಾನಗರಪಾಲಿಕೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಮತ್ತೆ ಕೋವಿಡ್‌ ಹೆಚ್ಚಿದ್ದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮೀಕ್ಷೆ ಇನ್ನೂ ಪ್ರಗತಿಯಲ್ಲಿದೆ ಎಂದೂ ಮೂಲಗಳು ತಿಳಿಸಿವೆ.

‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ನಗರ ಸ್ಥಳೀಯ ಸಂಸ್ಥೆಗಳು ಗುರುತಿಸಿ ಶಿಕ್ಷಣ ಇಲಾಖೆಯ ಗಮನಕ್ಕೆ ತರಬೇಕು. ಶಿಕ್ಷಣ ಇಲಾಖೆಯವರು ಮಕ್ಕಳನ್ನು ಮನವೊಲಿಸಿ ಶಾಲೆಗೆ ಸೇರಿಸಬೇಕು’ ಎಂದೂ ಮೂಲಗಳು ಹೇಳಿವೆ.

0–18 ವಯೋಮಾನದ ಮಕ್ಕಳ ಸಮೀಕ್ಷೆ:

‘ಶಾಲೆಯಿಂದ ಹೊರಗುಳಿದ ಮಕ್ಕಳ (6ರಿಂದ 14 ವಯೋಮಾನ) ಮಾಹಿತಿ ಮಾತ್ರ ಸಂಗ್ರಹಿಸಲು ಮನೆ ಮನೆ ಸಮೀಕ್ಷೆಗೆ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಇದೀಗ 0–18ರ ವರೆಗಿನ ವಯೋಮಾನದ ಮಕ್ಕಳ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.ಈ ಸಮೀಕ್ಷೆಗೆ ಪೂರಕ ಆಗುವಂತೆ ಮೊಬೈಲ್‌ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ಪಡಿತರ ಚೀಟಿ ಹೊಂದಿದ ಮತ್ತು ಹೊಂದಿಲ್ಲದ ಕುಟುಂಬಗಳ ಸಮೀಕ್ಷೆಗೂ ಅವಕಾಶ ನೀಡಲಾಗಿದೆ. ಅದರಂತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷ ನಡೆಸಲಾಗಿದೆ’ ಎಂದು ಪೌರಾಡಳಿತ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT