ಭಾನುವಾರ, ಆಗಸ್ಟ್ 14, 2022
19 °C
ಫ್ರಾಂಕಿಂಗ್ ಯಂತ್ರ, ನೋಂದಣಾಧಿಕಾರಿ ಮುದ್ರೆಯೇ ನಕಲು

ಮತ್ತೊಂದು ಛಾಪಾ ಅಕ್ರಮ: ಬೊಕ್ಕಸಕ್ಕೆ ₹150 ಕೋಟಿ ನಷ್ಟ

ವೈ. ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಛಾಪಾ ಕಾಗದ, ಉಬ್ಬಚ್ಚು ಯಂತ್ರ, ಉಪ ನೋಂದಣಾಧಿಕಾರಿಗಳ ಮುದ್ರೆ ಬಳಸಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು ₹150 ಕೋಟಿಗೂ ಹೆಚ್ಚು ರಾಜಸ್ವ ನಷ್ಟ ಉಂಟು ಮಾಡಿರುವುದು ಪತ್ತೆಯಾಗಿದೆ.

‘ಈ ಅಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿರುವ ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರು (ಐಜಿಆರ್), ರಾಜಸ್ವಕ್ಕೆ ಕನ್ನ ಹಾಕುತ್ತಿರುವ ಬಗ್ಗೆ ಉನ್ನತ ತನಿಖೆ ನಡೆಸಬೇಕು ಎಂದು  ಶಿಫಾರಸು ಮಾಡಿದ್ದಾರೆ’ ಎಂದು ಕಂದಾಯ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಅಕ್ರಮ ಕೂಟದ ಬಗ್ಗೆ ತನಿಖೆ ನಡೆಸುವಂತೆ ಐಜಿಆರ್‌ಗೆ ದೂರು ಸಲ್ಲಿಸಿದ್ದ ಎಂ.ಮಂಜುಳ ಎಂಬುವವರು, ಉಬ್ಬಚ್ಚು ಪತ್ರಗಳ (ಫ್ರಾಂಕಿಂಗ್‌) ನೈಜತೆ ಕುರಿತು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಇದನ್ನು ಆಧರಿಸಿ,  ಈ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾ ನೋಂದಣಾಧಿಕಾರಿಗೆ ಐಜಿಆರ್ ಸೂಚಿಸಿದ್ದರು.

ಈ ಕುರಿತು ಬೆಂಗಳೂರು ಜಿಲ್ಲಾ ನೋಂದಣಾಧಿಕಾರಿ ಸಲ್ಲಿಸಿದ ವರದಿಯಲ್ಲಿ ಅಕ್ರಮದ ಎಳೆಯನ್ನು ಬಿಡಿಸಿಡಲಾಗಿದೆ.

‘ಫ್ರಾಂಕಿಂಗ್ ಯಂತ್ರದಿಂದ ಮುದ್ರಿತವಾಗುವ ಪತ್ರಗಳಲ್ಲಿ ಆಯಾ ದಿನ ಉಬ್ಬಚ್ಚು ಮಾಡಿರುವ ಬಗ್ಗೆ ಕ್ರಮ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ನಿರ್ದಿಷ್ಟ ಪುಸ್ತಕದಲ್ಲಿ ಉಬ್ಬಚ್ಚು ಪತ್ರದ ಕ್ರಮ ಸಂಖ್ಯೆ, ಮೊಬಲಗು, ದಿನಾಂಕವನ್ನು ದಾಖಲು ಮಾಡಲಾಗುತ್ತದೆ. ಪರಿಶೀಲನೆಗೆ ಸಲ್ಲಿಸಲಾಗಿರುವ ಉಬ್ಬಚ್ಚು ಪತ್ರ ಹಾಗೂ ಛಾಪಾ ಕಾಗದಗಳನ್ನು ಪರಿಶೀಲಿಸಿದಾಗ ಗಾಂಧಿ ನಗರ ಉಪನೋಂದಣಾಧಿಕಾರಿ (ಪಿಬಿ 6924) ಮುದ್ರಾಂಕ ಉಬ್ಬಚ್ಚು ಯಂತ್ರದಲ್ಲಿ ಮುದ್ರಿತಗೊಂಡಿದೆ ಎಂದು ಅದರ ಮೇಲೆ ಉಲ್ಲೇಖವಿದೆ. ಯಲಹಂಕ, ಕೆಂಗೇರಿ, ಶಿವಾಜಿನಗರದ ಮೊಹರು ಹಾಗೂ ಉಪನೋಂದಣಾಧಿಕಾರಿ ಸಹಿ ಇದೆ. ಈ ಎಲ್ಲ ಪತ್ರಗಳು ನಕಲಿಯಾಗಿರುತ್ತವೆ’ ಎಂದು ಹಿಂಬರಹ ನೀಡಲಾಗಿದೆ.

‘ಇದೇ ರೀತಿ ಯಲಹಂಕ, ಕೆಂಗೇರಿ, ಶಿವಾಜಿನಗರ, ಗಾಂಧಿನಗರಗಳ (ಬೆಂಗಳೂರಿನಲ್ಲಿ ಪ್ರಮುಖವಾಗಿ ಆಸ್ತಿ ನೋಂದಣಿಯಾಗುವ ಕಚೇರಿಗಳು) ಫ್ರಾಂಕಿಂಗ್‌ ಯಂತ್ರ ಬಳಸಿ ಕ್ರಯಪತ್ರ, ಕರಾರು ಪತ್ರ, ತಕರಾರು ದಾವೆಗೆ ದಾಖಲು ಪತ್ರ, ಉಯಿಲು, ಜಿಪಿಎ, ಆಸ್ತಿ ಪರಭಾರೆ ಒಪ್ಪಂದ ಪತ್ರಗಳನ್ನು ನಕಲಿಯಾಗಿ ಸೃಷ್ಟಿ ಮಾಡಲಾಗುತ್ತಿದೆ. ಇದನ್ನು ಬಳಸಿಕೊಂಡು ಬಡವರು, ಮಧ್ಯಮವರ್ಗದವರ ಆಸ್ತಿಯನ್ನು ಕಬಳಿಸಲಾಗುತ್ತಿದೆ. ಆಸ್ತಿ ತಮ್ಮ ಹೆಸರಿಗೆ ಮಾಡಿಕೊಟ್ಟಿದ್ದಾರೆ ಎಂದು ನಾಲ್ಕೈದು ವರ್ಷಗಳ ಹಿಂದಿನ ದಾಖಲೆ ಸೃಷ್ಟಿಸಿ, ಹೆದರಿಸುವ ಕೆಲಸವೂ ನಡೆಯುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬೊಕ್ಕಸಕ್ಕೆ ನಷ್ಟ ಹೇಗೆ?: ‘ನೋಂದಣಿ ರಹಿತವಾಗಿ ಮಾಡಿಕೊಳ್ಳುವ ಒಪ್ಪಂದಗಳಿಗೆ ಸ್ಟಾಂಪ್ ಡ್ಯೂಟಿ ಅಥವಾ ಮುದ್ರಾಂಕ ಶುಲ್ಕ ಪಾವತಿಸಲು ಫ್ರಾಂಕಿಂಗ್‌ ಮಾಡಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಉಪನೋಂದಣಾಧಿಕಾರಿಗೆ  ಪಾವತಿಸಿ ಉಬ್ಬಚ್ಚುಗೊಂಡಿರುವ ಪತ್ರಗಳನ್ನು ಪಡೆಯಲಾಗುತ್ತದೆ. ಇದಕ್ಕಾಗಿ ಆಯಾ ಉಪನೋಂದಣಾಧಿಕಾರಿ ಕಚೇರಿಗೆ ನಿರ್ದಿಷ್ಟ ಸಂಖ್ಯೆಯ
ಫ್ರಾಂಕಿಂಗ್ ಯಂತ್ರ ನೀಡಲಾಗಿದೆ(ಗಾಂಧಿನಗರಕ್ಕೆ ಪಿಬಿ 6924, ಯಲಹಂಕ ಪಿಬಿ 6944 ಹೀಗೆ). ಇಂತಹ ನಕಲಿ ಯಂತ್ರವನ್ನು ಇಟ್ಟುಕೊಂಡಿರುವ ಪ್ರಭಾವಿ ಉದ್ಯಮಿಗಳು, ರಾಜಕಾರಣಿಗಳು, ಇಂತಹ ಕಸುಬನ್ನೇ ಮಾಡುವ ಛೋಟಾ ತೆಲಗಿಯಂತಹವರು ಫ್ರಾಂಕಿಂಗ್‌ ಮಾಡಿ, ಅದರ ಮೇಲೆ ಉಪನೋಂದಣಾಧಿಕಾರಿ ಕಚೇರಿಯ ಸೀಲು ಹಾಗೂ ಸಹಿ ಹಾಕಿ ಕೊಡುತ್ತಾರೆ‘.

’ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಸ್ಟಾಂಪ್ ಡ್ಯೂಟಿ ಕೈತಪ್ಪಿ ಹೋಗುತ್ತಿದೆ. ಇದು ಒಂದು ರೀತಿಯ ನಷ್ಟವಾದರೆ, ತಮ್ಮ ಭೂಮಿಯ ದಾಖಲಾತಿಯ ಬಗ್ಗೆ ಆಗಾಗ ಪರೀಕ್ಷೆ ಮಾಡಿಸದ ಜನರು ಇಂತಹ ಅಕ್ರಮ ಕೂಟದ ವಂಚನೆಗೆ ಸಿಕ್ಕಿ ಆಸ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ದೊಡ್ಡ ಜಾಲವೇ ಹೊರಬರಲಿದೆ’ ಎನ್ನುತ್ತಾರೆ ಅಧಿಕಾರಿಗಳು.

ಕಂದಾಯ, ಕೃಷಿ, ಕೈಗಾರಿಕೆ ಹೀಗೆ ಎಲ್ಲ ಇಲಾಖೆಗಳಲ್ಲಿ ಮುದ್ರಾಂಕ ಅಥವಾ ಸ್ಟಾಂಪ್‌ ಎನ್ನುವುದು ಅಧಿಕೃತ ಕರೆನ್ಸಿಯಂತೆ ಬಳಕೆಯಾಗುತ್ತದೆ. ಸ್ಟಾಂಪ್ ಪೇಪರ್ ಹಾಗೂ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಬಳಕೆಯಲ್ಲಿರುವ ಕಚೇರಿವಾರು ಪ್ರಾಂಕಿಂಗ್‌ ಸಂಖ್ಯೆಯನ್ನು ಒಳಗೊಂಡ ಪತ್ರಗಳನ್ನು (ಉಬ್ಬಚ್ಚುಗೊಂಡಿರುವ) ನಕಲು ಮಾಡುವುದು ದೇಶದ್ರೋಹದ ಪ್ರಕರಣ. ಇದು ಬೆಳಕಿಗೆ ಬಂದು ತಿಂಗಳಾದರೂ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ವರದಿ ಸಲ್ಲಿಕೆ: ಮೋಹನ್ ರಾಜ್‌
‘ನಕಲಿ ಛಾಪಾ ಕಾಗದ ಅಕ್ರಮದ ಕುರಿತು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ’ ಎಂದು ಐಜಿಆರ್‌ ಕೆ.ಪಿ. ಮೋಹನ್ ರಾಜ್ ಹೇಳಿದರು.

ಛಾಪಾ ಕಾಗದ ಅಕ್ರಮ ಕುರಿತು ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಳ ಹಂತದ ಅಧಿಕಾರಿಗಳು ಏನೂ ನಡೆದಿಲ್ಲ ಎಂದು ಹೇಳುತ್ತಿದ್ದರು. ಎಲ್ಲ ಕಚೇರಿಗಳಿಂದ ವರದಿ ತರಿಸಿಕೊಂಡು ವಿಚಾರಣೆ ನಡೆಸಿ ವರದಿ ಸಿದ್ಧಪಡಿಸಿದ್ದೇನೆ. ಅದರಲ್ಲಿರುವ ಮಾಹಿತಿ ಬಹಿರಂಗಪಡಿಸುವಂತಿಲ್ಲ. ಸರ್ಕಾರ ಅಥವಾ ಅಡ್ವೋಕೇಟ್ ಜನರಲ್ ಬಳಿ ವರದಿ ಇದೆ. ಛಾಪಾ ಕಾಗದಗಳೇ ನಕಲಿ ಆಗಿರುವುದರಿಂದ, ರಾಜಸ್ವಕ್ಕೆ ಎಷ್ಟು ನಷ್ಟವಾಗಿದೆ? ಎಷ್ಟು ಆಸ್ತಿಗಳಿಗೆ ಸಂಬಂಧಿಸಿ ಹೀಗಾಗಿದೆ ಎಂಬುದನ್ನು ನಿಖರವಾಗಿ ಹೇಳಲಾಗದು’ ಎಂದರು.

ಕಂದಾಯ ಸಚಿವರಿಗೂ ದೂರು
‘ನಕಲಿ ಛಾಪಾ ಕಾಗದ, ಸರ್ಕಾರಿ ಮುದ್ರೆ ಬಳಸಿ ಅಕ್ರಮ ನಡೆಯುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಕಂದಾಯ ಸಚಿವ ಆರ್. ಅಶೋಕ ಅವರಿಗೆ ನವೆಂಬರ್ 11ರಂದೇ ದೂರು ನೀಡಲಾಗಿದ್ದು, ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಆಗುತ್ತಿರುವ ಅನ್ಯಾಯ ನಿಲ್ಲಿಸಬೇಕು’ ಎಂದು ಈ ಬಗ್ಗೆ ಆರ್‌ಟಿಐ ಅಡಿ ಮಾಹಿತಿ ಪಡೆದ ಕೆ.ಆರ್.ರೋಹಿತ್‌ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು