ಶನಿವಾರ, ಜುಲೈ 2, 2022
27 °C

ನವೋದ್ಯಮ ಭಾಗ–2: ಮೌಲ್ಯಮಾಪನದ ‘ನ್ಯಾಯ’

ಪ್ರವೀಣ ಕುಮಾರ್ ಪಿ.ವಿ Updated:

ಅಕ್ಷರ ಗಾತ್ರ : | |

ನವೋದ್ಯಮ

ಬೆಂಗಳೂರು: ನವೋದ್ಯಮಗಳಿಗೆ ಉತ್ತೇಜನ ನೀಡಲು ಹಮ್ಮಿಕೊಳ್ಳುವ ‘ಐಡಿಯ2ಪಿಒಸಿ’ (ಎಲೆವೇಟ್) ಸ್ಪರ್ಧೆಯಲ್ಲಿ ಮೌಲ್ಯಮಾಪಕರನ್ನು ನೇಮಿಸುವಾಗ ಒಬ್ಬೊರಿಗೊಂದು ನ್ಯಾಯ ಅನುಸರಿಸಲಾಗುತ್ತಿದೆ. ಇದು ಪ್ರತಿಭೆಯನ್ನೇ ನೆಚ್ಚಿಕೊಂಡ ನವೋದ್ಯಮಿಗಳ ಉತ್ಸಾಹಕ್ಕೇ ತಣ್ಣೀರೆರಚುತ್ತಿದೆ ಎಂಬ ದೂರು ವ್ಯಾಪಕವಾಗಿದೆ.

ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸಿದ್ದ ‘ಎಲೆವೇಟ್‌ 2019’ರಲ್ಲಿ ನವೋದ್ಯಮವನ್ನು  ಮೂವರು ಮೌಲ್ಯಮಾಪನ ನಡೆಸಿದ್ದರು. ಪ್ರತಿಯೊಬ್ಬ ಮೌಲ್ಯಮಾಪಕ ಗರಿಷ್ಠ 100 ಅಂಕ ನೀಡಬಹುದು. ಅತಿ ಹೆಚ್ಚು ಅಂಕ ಪಡೆಯಲು ನವೋದ್ಯಮಿಗಳು ಈ ಮೂವರು ಮೌಲ್ಯಮಾಪಕರಿಗೆ ಸರಿಯಾದ ವಿವರಣೆ ನೀಡಿ, ಅವರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಮೂವರು ತೀರ್ಪುಗಾರರು ನೀಡಿದ ಅಂಕಗಳ ಮೊತ್ತದ ಆಧಾರದಲ್ಲಿ ನವೋದ್ಯಮಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ.

‘ಕೆಲವು ನವೋದ್ಯಮಗಳು ಮೂವರು ಮೌಲ್ಯಮಾಪಕರಿಗೆ, ಇನ್ನು ಕೆಲವರು ಇಬ್ಬರು ಮೌಲ್ಯಮಾಪಕರಿಗೆ ತಮ್ಮ ಕಾರ್ಯ ಯೋಜನೆ ವಿವರಿಸಬೇಕಾದ ಸ್ಥಿತಿ ಇತ್ತು. ಇನ್ನು ಕೆಲವರು ಒಬ್ಬರಿಗೆ ಮಾತ್ರ ತಮ್ಮ ಕಾರ್ಯಯೋಜನೆಯನ್ನು ಮನವರಿಕೆ ಮಾಡಿಕೊಟ್ಟರೂ ಸಾಕಿತ್ತು. ಇದು ಯಾವ ನ್ಯಾಯ. ಒಂದು ವೇಳೆ ಒಬ್ಬ ಮೌಲ್ಯಮಾಪಕ ಕೆಲವು ಸಮಯ ಲಭ್ಯವಿಲ್ಲವೆಂದಾದರೆ ಅವರ ಬದಲು ಬೇರೆಯವರನ್ನು ನೇಮಿಸಿ ಸಮಾನತೆ ಕಾಯ್ದುಕೊಳ್ಳಬೇಕಲ್ಲವೇ. ಅಥವಾ ಅವರು ಹಿಂದಿರುಗುವವರೆಗೆ ಮೌಲ್ಯಮಾಪನ ಸ್ಥಗಿತಗೊಳಿಸಬೇಕಲ್ಲವೇ’ ಎಂದು ಪ್ರಶ್ನಿಸುತ್ತಾರೆ ಮೈಸೂರಿನ ಪ್ರವೀಣ್‌ ಕುಮಾರ್‌ ಎಂ.ಕೆ.

ಇದನ್ನೂ ಓದಿ: 

ಪ್ರತಿಯೊಬ್ಬ ಮೌಲ್ಯಮಾಪಕರು ನೀಡುವ ಅಂಕವೂ ಮುಖ್ಯ. ಒಬ್ಬರು ಅಥವಾ ಇಬ್ಬರು ತೀರ್ಪುಗಾರರ ಅನುಪಸ್ಥಿತಿಯಲ್ಲಿ ಮೌಲ್ಯಮಾಪನ ನಡೆಸಿದಾಗ ನವೋದ್ಯಮಗಳಿಗೆ ಆಗುವ ಹಾನಿ ಏನು ಎಂಬುದನ್ನು ಅವರು ವಿವರಿಸುವುದು ಹೀಗೆ. 

‘ಸ್ಪರ್ಧೆಯಲ್ಲಿ ಗೆದ್ದ ನಾರ್ಮ್‌ ಹೆಲ್ದಿ ಫುಡ್ಸ್‌ ಆ್ಯಂಡ್‌ ಬಿವರೇಜಸ್‌ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆಯ ಕಾರ್ಯಯೋಜನೆಗೆ ಒಬ್ಬರು ತೀರ್ಪುಗಾರರು 53 ಅಂಕಗಳನ್ನು ಹಾಗೂ ಇನ್ನೊಬ್ಬರು 71 ಅಂಕಗಳನ್ನು ನೀಡಿದ್ದರು. ಮೂರನೇ ತೀರ್ಪುಗಾರರು ಉಪಸ್ಥಿತರಿರಲಿಲ್ಲ ಎಂದು ಸರಾಸರಿ ಆಧಾರದಲ್ಲಿ ಅಂಕಗಳನ್ನು ನೀಡಿದ್ದೇ ಆದರೆ, ಆ ನವೋದ್ಯಮಕ್ಕೆ ಒಟ್ಟು 186 ಅಂಕಗಳು ಸಿಗುತ್ತಿದ್ದವು. ಆಗ ಆ ಕಂಪನಿಯು ಗೆಲುವಿನ ಹತ್ತಿರಕ್ಕೂ ಸುಳಿಯಲೂ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ 208 ಕ್ಕಿಂತ ಕಡಿಮೆ ಅಂಕ ಪಡೆದ ಯಾವ ಕಂಪನಿಯೂ ಗೆದ್ದಿಲ್ಲ. ಆದರೆ ಅಲ್ಲಿ ಉಪಸ್ಥಿತರಿದ್ದ ಮೂರನೆಯ ತೀರ್ಪುಗಾರರು ಆ ಸಂಸ್ಥೆಗೆ 94 ಅಂಕ ನೀಡಿದ್ದರಿಂದಾಗಿ ಅದು ಆರ್ಥಿಕ ನೆರವು ಪಡೆಯಲು ಅರ್ಹತೆ ಗಿಟ್ಟಿಸಿತು’ ಎಂದರು.

‘ಒಂದೋ, ಎರಡೋ ನವೋದ್ಯಮಗಳ ವಿಷಯದಲ್ಲಿ ಮಾತ್ರ ಹೀಗೆ ಆಗಿಲ್ಲ. ಬಹಳಷ್ಟು ನವೋದ್ಯಮಗಳ ಭವಿಷ್ಯವನ್ನು ತೀರ್ಪುಗಾರರ ಅನುಪಸ್ಥಿತಿಯಲ್ಲೇ ನಿರ್ಧರಿಸಲಾಗಿದೆ. ಈ ಎಡವಟ್ಟಿನಿಂದ ಅನೇಕ ನವೋದ್ಯಮಗಳು ಭವಿಷ್ಯವನ್ನೇ ಕಳೆದುಕೊಂಡಿವೆ’ ಎಂದು ಅವರು ಆರೋಪಿಸಿದರು.

‘ಗೆಲ್ಲಬಲ್ಲ ಸ್ಟಾರ್ಟಪ್ ಗಳನ್ನು ಸೋಲಿಸುವ ಹಾಗೂ ಸೋಲ ಬೇಕಾದ ನವೋದ್ಯಮಗಳನ್ನು ಗೆಲ್ಲಿಸುವ ತಂತ್ರ ಆಯೋಜಕರಿಗೆ ಚೆನ್ನಾಗಿ ಗೊತ್ತು. ಮೂವರು ಮೌಲ್ಯಮಾಪಕರನ್ನು ನೇಮಿಸುವ ನಿಯಮ ಮಾಡಿದ ಬಳಿಕ ಅದಕ್ಕೆ ಬದ್ಧವಾಗಿರಬೇಕು’ ಎನ್ನುತ್ತಾರೆ ಧಾರವಾಡ ಪ್ರಭಂಜನ್‌ ಎಂ. 

‘ತಂಡದ ಸಾಮರ್ಥ್ಯ ಅಳೆಯುವುದಕ್ಕೆ ಯಾವ ಮಾನದಂಡ ಬಳಸಲಾಗುತ್ತಿದೋ ತಿಳಿಯದು. ಉದಾಹರಣೆಗೆ ನಾವು ಪ್ರಸ್ತುತ ಪಡಿಸಿದ ನವೋದ್ಯಮದ ಬಗ್ಗೆ 10 ವರ್ಷ ಅನುಭವವಿದ್ದವರು, ಪಿಎಚ್‌ಡಿ ಮಾಡಿದ, ಉತ್ತಮ ತಾಂತ್ರಿಕ ಹಿನ್ನೆಲೆಯವರೆಲ್ಲ ನಮ್ಮ ತಂಡದಲ್ಲಿದ್ದರು. ಆದರೆ ನಮಗೆ 10ರಲ್ಲಿ ಐದೇ ಅಂಕ ಸಿಕ್ಕಿತು. ಅನುಭವ ಹಾಗೂ ಶೈಕ್ಷಣಿಕ ಅರ್ಹತೆ ಇಲ್ಲದ ಕೆಲವು ತಂಡಗಳು ನಮಗಿಂತ ಹೆಚ್ಚು ಅಂಕ ಪಡೆದಿವೆ. ಖಚಿತ ಮಾನದಂಡ ರೂಪಿಸಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದರೆ ಇಂತಹದ್ದಕ್ಕೆಲ್ಲ ಅವಕಾಶ ಇರುವುದಿಲ್ಲವಲ್ಲವೇ’ ಎಂದು ಪ್ರಶ್ನಿಸುತ್ತಾರೆ ಅವರು.

ಯಾವುದಕ್ಕೆ ಎಷ್ಟು ಅಂಕ?

‌ತಂತ್ರಜ್ಞಾನದ ಹೊಸತನ, ಆವಿಷ್ಕಾರ, ಮತ್ತದರ ಉಪಯುಕ್ತತೆ; 30 ಅಂಕ

ತಂತ್ರಜ್ಞಾನದಿಂದ ಆಗುವ ಸಾಮಾಜಿಕ-ಆರ್ಥಿಕ ಪರಿಣಾಮಗಳಿಗೆ; 20 ಅಂಕ

ಉದ್ದಿಮೆಯ ಮಾದರಿಗೆ; 30 ಅಂಕ

ನವೋದ್ಯಮ ತಂಡದ ಸಾಮರ್ಥ್ಯಕ್ಕೆ; 10 ಅಂಕ

ಬಜೆಟ್ ಹಂಚಿಕೆಗೆ; 10 ಅಂಕ

‘ಮೌಲ್ಯಮಾಪಕ ಗೈರಿನಿಂದ ಸ್ಪರ್ಧಿಗೆ ಅನ್ಯಾಯವಾಗಿಲ್ಲ’

‘ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕೆಲವು ಮೌಲ್ಯಮಾಪಕರ ಗೈರಾಗಿದ್ದುದು ನಿಜ. ಆದರೆ, ಅಂತಹ ಪ್ರಕರಣಗಳಲ್ಲಿ ಇಬ್ಬರು ತೀರ್ಪುಗಾರರ ಅಂಕಗಳ ಸರಾಸರಿಯ ಆಧಾರದಲ್ಲಿ ಫಲಿತಾಂಶವನ್ನು ಘೋಷಿಸಿದ್ದೇವೆ. ಹಾಗಾಗಿ ಸ್ಪರ್ಧಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾರೆ ‘ಸ್ಟಾರ್ಟ್ಅಪ್‌ ಕರ್ನಾಟಕ’ ಮುಖ್ಯಸ್ಥೆ ಚಂಪಾ ಇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು