ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಿಕ್ಷಕರ ನೆರವಿಗೆ ರಾಜ್ಯ ಸರ್ಕಾರ ತಕ್ಷಣ ಧಾವಿಸಬೇಕು: ಎಚ್‌.ಡಿ. ದೇವೇಗೌಡ

ಸ್ಪಂದಿಸದಿದ್ದರೆ ನಾನೇ ಹೋರಾಟಕ್ಕಿಳಿಯುತ್ತೇನೆ– ಜೆಡಿಎಸ್‌ ವರಿಷ್ಠರ ಎಚ್ಚರಿಕೆ
Last Updated 26 ಆಗಸ್ಟ್ 2020, 9:38 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರ ಸಹಾಯಕ್ಕೆ ತಕ್ಷಣ ಧಾವಿಸಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಆಗ್ರಹಿಸಿದರು.

ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಸೇವಾಭದ್ರತೆ, ಆರೋಗ್ಯ ವಿಮೆ ಒದಗಿಸಬೇಕು, ಖಾಸಗಿ ಶಾಲೆಗಳ ಆರ್‌ಟಿಇ ಬಾಕಿ ಹಣ ಬಿಡುಗಡೆ ಮಾಡಬೇಕು ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ವಿವಿಧ ಸಂಘಟನೆಗಳ ಜೊತೆ ವಿಧಾನಪರಿಷತ್ ಜೆಡಿಎಸ್‌ ಸದಸ್ಯರು ಮೌರ್ಯ ವೃತ್ತದಲ್ಲಿ ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಖಾಸಗಿ ಶಿಕ್ಷಕರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಮತ್ತೊಂದು ಪತ್ರ ಬರೆದು ಒತ್ತಾಯಿಸುತ್ತೇನೆ’. ‘ಶಿಕ್ಷಕರ ಸಮಸ್ಯೆ ಪರಿಹರಿಸದಿದ್ದರೆ ನಾನೇ ಹೋರಾಟಕ್ಕೆ ಇಳಿಯುತ್ತೇನೆ. ಇದು ಮೊದಲ ಹಂತದ ಹೋರಾಟ. ಸರ್ಕಾರ ಸ್ಪಂದಿಸದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಇಂಥ ಸಮಯದಲ್ಲಿ ಸರ್ಕಾರ ಮಾನವೀಯತೆ ಪ್ರದರ್ಶನ ಮಾಡಬೇಕು. ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಈ ವಿಷಯವನ್ನು ಮುಂದಿನ ಸಂಸತ್ ಅಧಿವೇಶನಲ್ಲಿ ಕೇಂದ್ರ ಸರ್ಕಾರದ ಗಮನಕ್ಕೂ ತರುತ್ತೇನೆ. ಅವಶ್ಯ ಬಿದ್ದರೆ ಅಧಿವೇಶನದಲ್ಲಿ ಚರ್ಚೆ ವೇಳೆ ಮಾತನಾಡುತ್ತೇನೆ’ ಎಂದರು.

‘ಕೇಂದ್ರ ಸರ್ಕಾರ ಏಕರೂಪ ಶಿಕ್ಷಣ ಜಾರಿಗೆ ತರಲು ಹೊರಟಿದೆ. ಇದಕ್ಕೆ ನಮ್ಮ ವಿರೋಧವಿದೆ. ಇದರಿಂದ ಅನೇಕ ಸಮಸ್ಯೆಗಳು ಆಗಲಿವೆ, ಯಾರಿಗೂ ಇದರಿಂದ ಉಪಯೋಗ ಇಲ್ಲ. ಸಂಸತ್ ಅಧಿವೇಶನದಲ್ಲಿ ಈ ಬಗ್ಗೆಯೂ ನಾನು ಚರ್ಚೆ ಮಾಡುತ್ತೇನೆ. ಅಂಕಿ- ಅಂಶದ ಸಮೇತ ಧ್ವನಿ ಎತ್ತುತ್ತೇನೆ’ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಪರಿಷತ್ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಬೋಜೇಗೌಡ, ಕೆ.ಟಿ. ಶ್ರೀಕಂಠೇಗೌಡ, ತಿಪ್ಪೇಸ್ವಾಮಿ, ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ, ಶಿಕ್ಷಣ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT