ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ: ಬಿ.ಸಿ. ಪಾಟೀಲ್ ಎಚ್ಚರಿಕೆ

Last Updated 10 ಆಗಸ್ಟ್ 2020, 12:12 IST
ಅಕ್ಷರ ಗಾತ್ರ

ಬೆಂಗಳೂರು: ರಸಗೊಬ್ಬರ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಯಾವುದೇ ಕಾರಣಕ್ಕೂ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದ್ದಲ್ಲಿ ಅಥವಾ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಎಚ್ಚರಿಸಿದ್ದಾರೆ.

ಇಲಾಖೆಯ ನಿಯಮಾನುಸಾರವೇ ರಸಗೊಬ್ಬರವನ್ನು ರೈತರಿಗೆ ವಿತರಿಸಬೇಕು. ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆಯಾಗದಂತೆ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ. ರಸಗೊಬ್ಬರಕ್ಕೆ ಯಾವುದೇ ಕೊರತೆಯಿರುವುದಿಲ್ಲ. ಅಗತ್ಯಕ್ಕನುಗುಣವಾಗಿ ರಸಗೊಬ್ಬರ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದ್ದು , ರೈತರು ಯಾವುದೇ ಇಲ್ಲಸಲ್ಲದ ವದಂತಿಗಾಗಲೀ ಸುಳ್ಳು ಸುದ್ದಿಗಾಗಲೀ ಗಮನ ನೀಡದೇ ತಾಳ್ಮೆ ವಹಿಸಿ ಅಂತರ ಕಾಯ್ದುಕೊಂಡು ರಸಗೊಬ್ಬರ ಖರೀದಿಸುವಂತೆ ಸಚಿವರು ಮನವಿ ಮಾಡಿದ್ದಾರೆ.

ಕೆಲವೆಡೆ ಕೆಲ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಅಂತಹವರನ್ನು ಗುರುತಿಸಿ ಆರೋಪ ಸಾಬೀತಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇದುವರೆಗೂ 57.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 8.51 ಲಕ್ಷ ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಕಳೆದ 5 ವರ್ಷಗಳ ಸರಾಸರಿ ಬಿತ್ತನೆಯ ಶೇ.14 ರಷ್ಟು ಹೆಚ್ಚಿನ ಬಿತ್ತನೆಯಾಗಿದೆ. ಈ ಬಾರಿ ಹೆಚ್ಚಿನ ಬಿತ್ತನೆಯಾಗಿರುವುದರಿಂದ ಹೆಚ್ಚಿನ ಕೃಷಿ ಪರಿಕರಗಳ ಅವಶ್ಯಕತೆಯಿರುತ್ತದೆ. ಕೇಂದ್ರ ಸರ್ಕಾರದ ಹಂಚಿಕೆಯಂತೆ ರಸಗೊಬ್ಬರಗಳನ್ನು ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಕಳೆದೆರಡು ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚಿನದಾಗಿ ರಸಗೊಬ್ಬರ ಸರಬರಾಜಾಗಿರುತ್ತದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಜುಲೈನಲ್ಲಿ ಮಂಗಳೂರು ಬಂದರಿಗೆ ಆಗಮಿಸಬೇಕಿದ್ದ ಹಡಗು ಸಕಾಲಕ್ಕೆ ಬಾರದಿರುವುದರಿಂದ ಯೂರಿಯಾ ರಸಗೊಬ್ಬರ ಸರಬರಾಜು ಜುಲೈ ತಿಂಗಳಿನಲ್ಲಿ ವ್ಯತ್ಯಾಸವಾಗಿರುತ್ತದೆ. ಆದರೆ ಆಗಸ್ಟ್‌ನಲ್ಲಿ ಯೂರಿಯಾ ರಸಗೊಬ್ಬರಕ್ಕೆ ಅಂದಾಜು 1,77,000 ಟನ್ ಬೇಡಿಕೆಯಿದ್ದು, ಈಗಾಗಲೇ 49,749 ಟನ್ ಸರಬರಾಜಾಗಿರುತ್ತದೆ. 19,305 ಟನ್ ಸರಬರಾಜು ಹಂತದಲ್ಲಿದ್ದು, 1,22,446 ಮೆಟ್ರಿಕ್ ಟನ್ ಸರಬರಾಜಿಗೆ ಸಿದ್ದತೆ ಮಾಡಲಾಗಿದೆ. ಸರಬರಾಜು ಯೋಜನೆಯಂತೆ ಕೇಂದ್ರ ಸರ್ಕಾರದ ಸಹಕಾರದಿಂದ ಯೂರಿಯಾ ರಸಗೊಬ್ಬರ ಸರಬರಾಜಾಗುವ ನಿರೀಕ್ಷೆಯಿದ್ದು, ಯೂರಿಯಾ ಸರಬರಾಜಿನಲ್ಲಿ ತೊಂದರೆಯಾಗುವುದಿಲ್ಲಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರಗಳ ಸರಬರಾಜು ಮತ್ತು ರೇಕ್ ಟ್ರ್ಯಾಕಿಂಗ್ ಮೇಲ್ವಿಚಾರಣೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದು, 2020 ಜುಲೈ ತಿಂಗಳ ಅಂತ್ಯದವರೆಗೆ 5,63,861 ಮೆಟ್ರಿಕ್ ಟನ್ ರಸಗೊಬ್ಬರ ಕೇಂದ್ರ ಸರ್ಕಾರದಿಂದ ಸರಬರಾಜಾಗಿದೆ. ಅಂತೆಯೇ ಡಿಎಪಿ 2,77,499 ಮೆ.ಟನ್, ಕಾಂಪ್ಲೆಕ್ಸ್ ರಸಗೊಬ್ಬರ 5,17,144 ಮೆಟ್ರಿಕ್ ಟನ್ ಸರಬರಾಜಾಗಿದೆ ಹಾಗೂ ಎಂಒಪಿ ರಸಗೊಬ್ಬರ ಜುಲೈ ಅಂತ್ಯದವರೆಗೆ 1,31,533 ಮೆಟ್ರಿಕ್ ಟನ್ ಸರಬರಾಜಾಗಿದ್ದು, ಒಟ್ಟಾರೆ 14, 90,970 ಮೆಟ್ರಿಕ್ ಟನ್ ರಸಗೊಬ್ಬರ ಸರಬರಜಾರಾಗಿರುತ್ತದೆ ಎಂದು ತಿಳಿಸಿದರು.

ಪ್ರಮುಖವಾಗಿ ರೈತರು ಯೂರಿಯಾ ರಸಗೊಬ್ಬರ ಬಳಕೆಯನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬಾರದು. ಬೇಡಿಕೆಗನುಗುಣವಾಗಿ ಬಳಸಬೇಕು. ಯೂರಿಯಾ ರಸಗೊಬ್ಬರದ ಅತಿ ಬಳಕೆಯಿಂದ ಬೆಳೆಗಳಿಗೆ ಕೀಟ ರೋಗಬಾಧೆಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಇಳುವರಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದಾಗಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT