ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಗಲಭೆ: ಆರೋಪಿಗಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ತೀವ್ರ ವಿರೋಧ

ಶಾಸಕ ಜಮೀರ್‌ ಅಹಮ್ಮದ್‌ ಅವರ ಸಹಾಯ ಆರೋಪ
Last Updated 30 ಏಪ್ರಿಲ್ 2022, 4:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಕುಟುಂಬಕ್ಕೆ ಶಾಸಕ ಜಮೀರ್‌ ಅಹಮ್ಮದ್‌ ಅವರ ನೆರವಿನಿಂದ ಧನ ಸಹಾಯ ಮತ್ತು ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಜಮೀರ್‌ ಬೆಂಬಲಿಗರು ಕಾರ್ಯಕ್ರಮ ರದ್ದು ಪಡಿಸಿದರು.

ಶುಕ್ರವಾರ ಶಾಸಕ ಜಮೀರ್‌ ಅವರು ಕರೆ ಮಾಡಿ ‘ಗಲಭೆಯಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ರಂಜಾನ್‌ ಇರುವುದರಿಂದ ಪ್ರಕರಣದಲ್ಲಿ ಬಂಧಿತರಾಗಿರುವವರ ಕುಟುಂಬದವರಿಗೆ ಆಹಾರದ ಕಿಟ್‌ ಹಾಗೂ ₹5 ಸಾವಿರ ನೆರವು ನೀಡುತ್ತಿದ್ದೇನೆ. ಇದಕ್ಕೆ ಬೇರೆ ಅರ್ಥ ಕೊಡುವುದು ಬೇಡ’ ಎಂದು ಬೆಂಬಲಿಗರಿಗೆ ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿಯ ಶಾದಿ ಮಹಲ್ ಕಲ್ಯಾಣ ಮಂಟಪದಲ್ಲಿ ಕಿಟ್‌ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನು ಖಂಡಿಸಿ ಹು–ಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕ ಪೊಲೀಸ್‌ ಕಮಿಷನರ್‌ಗೆ ಹಾಗೂ ಶಹರ ಠಾಣೆ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿತ್ತು. ಕಿಟ್‌ ವಿತರಣೆ ನಡೆಯುತ್ತದೆ ಎಂಬ ಮಾಹಿತಿ ಹಿನ್ನೆಲೆ ಯಲ್ಲಿ ಶ್ರೀರಾಮ ಸೇನೆಯ ಕೆಲವರು ಪ್ರತಿಭಟನೆ ನಡೆಸಲು ಯೋಜಿಸಿದ್ದರು.

‘ಜಮೀರ್‌ ಅವರು ಆಹಾರದ ಕಿಟ್‌ ವಿತರಿಸುವಂತೆ ಹೇಳಿದ್ದರು. ಆರೋಪಿಗಳ ಕುಟುಂಬದವರಿಗೆ ನೀಡುತ್ತಿದ್ದಾರೆ ಎಂದು ವಿರೋಧ ವ್ಯಕ್ತವಾಗಿದ್ದರಿಂದ ಕಾರ್ಯಕ್ರಮ ರದ್ದುಗೊಳಿಸಲಾಯಿತು’ ಎಂದು ಕಾಂಗ್ರೆಸ್‌ ಮುಖಂಡ ಅಲ್ತಾಫ್‌ ಕಿತ್ತೂರು ಹೇಳಿದರು.

‘ಓಟ್‌ ಬ್ಯಾಂಕ್‌ ಗಟ್ಟಿಗೊಳಿಸಲು ಇವರು ಯಾವುದೇ ಮಟ್ಟಕ್ಕೆ ಇಳಿಯು ತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಗಲಭೆಯಲ್ಲಿ ಬಂಧಿತರಾದವರಿಗೆ ಹಣದ ನೆರವು, ಉಡುಗೊರೆ ನೀಡಲು ಮುಂದಾಗಿರುವುದು ನಾಚಿಕೆಗೇಡು ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್‌ ಮಾಡಿದ್ದಾರೆ.

ಗಲಭೆ ಆರೋಪಿ ಆತ್ಮಹತ್ಯೆಗೆ ಯತ್ನ
ಹುಬ್ಬಳ್ಳಿ:
ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ ಮೊಹಮ್ಮದ್‌ ಆರೀಫ್ ನಾಗರಾಳ ಗುರುವಾರ ಮಧ್ಯರಾತ್ರಿ ಟರ್ಪಂಟೈಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹಳೇಹುಬ್ಬಳ್ಳಿ ಪೊಲೀಸರ ಕಸ್ಟಡಿಯಲ್ಲಿದ್ದ ಆರೀಫ್, ಅಲ್ಲಿದ್ದ ಸಿಬ್ಬಂದಿಗೆ ಟರ್ಪಂಟೈಲ್ ನೀಡುವಂತೆ ವಿನಂತಿಸಿದ್ದಾನೆ. ಗಾಯಕ್ಕೆ ಹಚ್ಚಲು ಕೇಳಿರಬಹುದು ಎಂದು ಸಿಬ್ಬಂದಿ ಬಾಟಲ್ ನೀಡಿದ್ದು, ಅದನ್ನು ತಕ್ಷಣವೇ ಕುಡಿದಿದ್ದಾನೆ. ಅಲ್ಲಿಯೇ ಇದ್ದ ಮತ್ತೊಬ್ಬ ಆರೋಪಿ ಮಹಾನಗರ ಪಾಲಿಕೆಯ ಎಐಎಂಐಎಂ ಸದಸ್ಯ ನಸೀರ್ ಅಹ್ಮದ್ ಹೊನ್ಯಾಳ ಅದನ್ನು ನೋಡಿ ಬಾಟಲಿ ಕಿತ್ತುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೀಫ್‌ ಚೇತರಿಸಿ ಕೊಂಡಿದ್ದು, ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT