ಡಿಸಿ ನಿವಾಸದಲ್ಲಿ ಈಜುಕೊಳ: ನಿಯಮ ಉಲ್ಲಂಘನೆಯಾಗಿಲ್ಲ ಎಂದ ರೋಹಿಣಿ ಸಿಂಧೂರಿ

ಮೈಸೂರು: ಪಾರಂಪರಿಕ ಕಟ್ಟಡವಾದ ಮೈಸೂರು ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ, ರೋಹಿಣಿ ಸಿಂಧೂರಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ ಪ್ರಕಾಶ್ ಅವರು ತನಿಖೆ ಆರಂಭಿಸಿದ್ದರು.
ಪ್ರಾದೇಶಿಕ ಆಯುಕ್ತರಿಗೆ ಎರಡು ಪುಟಗಳ ಉತ್ತರ ಬರೆದಿರುವರ ರೋಹಿಣಿ ಸಿಂಧೂರಿ, ‘ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ನೆರವಿನಿಂದ ಹೊಸ ತಂತ್ರಜ್ಞಾನ ಬಳಸಿ, ಕಡಿಮೆ ವೆಚ್ಚದಲ್ಲಿ ಈಜುಕೊಳಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರ ಐದು ವರ್ಷಗಳ ಹಿಂದೆ ಯೋಜನೆ ರೂಪಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳ ನಿರ್ಮಾಣವಾಗಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘₹ 28.72 ಲಕ್ಷ ವೆಚ್ಚದ ಯೋಜನೆ ಇದಾಗಿದ್ದು, 2021ರ ಜನವರಿಯಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಪ್ರಾಯೋಗಿಕವಾಗಿ ಈಜುಕೊಳ ನಿರ್ಮಿಸಲು ನಿರ್ಮಿತಿ ಕೇಂದ್ರದ ಕ್ಯಾಂಪಸ್‌ನಲ್ಲಿ ಸ್ಥಳದ ಅಭಾವವಿದೆ. ಆದ್ದರಿಂದ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಅಲ್ಪ ಜಾಗ ಬಳಸಿಕೊಳ್ಳಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳ ಕಿತ್ತಾಟ: ವರ್ಗಾವಣೆ ಬೆನ್ನಲ್ಲೇ ಸಿಎಂ ಭೇಟಿಯಾದ ರೋಹಿಣಿ ಸಿಂಧೂರಿ
‘ಈಜುಕೊಳದಿಂದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗಿಲ್ಲ. ಪಾರಂಪರಿಕ ಕಟ್ಟಡದಿಂದ ಅಲ್ಪ ದೂರದಲ್ಲಿ ನಿರ್ಮಾಣ ಆಗಿದೆ. ಈಜುಕೊಳ ನಿರ್ಮಾಣ ಸಂಬಂಧ ಕೆಲವರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ಹೇಳಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ರಾಜ್ಯ ಸರ್ಕಾರ ಶನಿವಾರ ರಾತ್ರಿ ಎತ್ತಂಗಡಿ ಮಾಡಿದೆ. ರೋಹಿಣಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.