ಪುನೀತ್ ಅಕ್ಷರ ಸೇವೆ ಮುಂದುವರಿಕೆ: ನಟ ವಿಶಾಲ್ ಘೋಷಣೆ

ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸಾಮಾಜಿಕ ಕಾಳಜಿಯ ಯೋಜನೆಗಳನ್ನು ಮುಂದುವರಿಸುವ ಪ್ರಯತ್ನ ಸಾಗಿದೆ.
ಪುನೀತ್ ರಾಜ್‌ಕುಮಾರ್ ಅವರು ಶಿಕ್ಷಣದ ವೆಚ್ಚ ಭರಿಸುತ್ತಿದ್ದ 1,800 ಮಕ್ಕಳ ಮುಂದಿನ ವಿದ್ಯಾಭ್ಯಾಸದ ಹೊಣೆಯನ್ನು ತಮಿಳು ಚಿತ್ರರಂಗದ ನಾಯಕ ನಟ ವಿಶಾಲ್ ವಹಿಸಿಕೊಂಡಿದ್ದಾರೆ.
ತಮ್ಮ ನಟನೆಯ ‘ಎನಿಮಿ’ ಚಿತ್ರದ ಬಿಡುಗಡೆ ಪೂರ್ವ ಸಮಾರಂಭದಲ್ಲಿ ಪುನೀತ್‌ಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
‘ಮುಂದಿನ ವರ್ಷದಿಂದ ಆ ಬಡ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಹೊಣೆಯನ್ನು ನಾನು ವಹಿಸಿಕೊಳ್ಳುತ್ತೇನೆ. ಇದು ನನ್ನ (ವಿಶಾಲ್) ಮತ್ತು ಪುನೀತ್ ನಡುವಿನ ಸ್ನೇಹ ಸಂಬಂಧಕ್ಕೆ ಕೊಡುತ್ತಿರುವ ಗೌರವ’ ಎಂದಿದ್ದಾರೆ.
ವಿಶಾಲ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಶೀಘ್ರ ತೆರೆಯಲ್ಲಿ ಪುನೀತ್!: ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ಅಭಿನಯದ ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದೆ. ಒಂದು ಹಾಡು ಮಾತ್ರ ಬಾಕಿ ಇತ್ತು. ಕೆಲ ದಿನಗಳಲ್ಲಿ ಅಭಿಮಾನಿಗಳು ತಮ್ಮ ‘ದೇವರನ್ನು’ (ಪುನೀತ್) ತೆರೆಯ ಮೇಲೆ ನೋಡಬಹುದು ಎಂದು ಚಿತ್ರದ ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.
ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಗೌರವ
ಚಿತ್ರನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಗೌರವ ನೀಡಬೇಕೆಂದು ಅವರ ಅಭಿಮಾನಿಗಳು ಆಗ್ರಹಿಸುತ್ತಿರುವ ಕುರಿತು ಪ್ರಮುಖರ ಜತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪುನೀತ್ ಅವರಿಗೆ ಕರ್ನಾಟಕ ರತ್ನ ಗೌರವ ನೀಡಬೇಕೆಂದು ಅಭಿಮಾನಿಗಳಿಂದ ಒತ್ತಾಯ ಹೆಚ್ಚುತ್ತಿರುವ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಈ ಬೇಡಿಕೆ ಕುರಿತು ತಕ್ಷಣದಲ್ಲೇ ಏನನ್ನೂ ಹೇಳಲಾಗದು. ಪ್ರಮುಖರ ಜತೆ ಚರ್ಚಿಸುತ್ತೇನೆ’ ಎಂದರು.
ಸಿಂದಗಿ ಮತ್ತು ಹಾನಗಲ್ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪೊಲೀಸರು ಕನ್ನಡದಲ್ಲೇ ಕವಾಯತು ನಡೆಸುವುದಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗುವುದು. ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಬೆಳಗಾವಿಯಲ್ಲಿದ್ದಾಗ ಕನ್ನಡ ಕವಾಯತು ವ್ಯವಸ್ಥೆ ಮಾಡಿದ್ದರು. ಈಗ ಅದನ್ನು ರಾಜ್ಯದಾದ್ಯಂತ ಜಾರಿಗೆ ತರಲು ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.