ಜೂ.15ರಿಂದ ದಾಖಲಾತಿ: ಲಾಕ್ಡೌನ್ ನಡುವೆ ಶಾಲೆಗೆ ಹೋಗುವುದೇ ಶಿಕ್ಷಕರಿಗೆ ಚಿಂತೆ

ದಾವಣಗೆರೆ: ‘ಬಿಸಿಯೂಟದ ಸಾಮಗ್ರಿಯನ್ನು ಮಕ್ಕಳಿಗೆ ವಿತರಿಸಬೇಕು ಎಂದು ಸರ್ಕಾರದ ಆದೇಶ ಇದ್ದಿದ್ದರಿಂದ ವಿತರಣೆ ಮಾಡಲು ಹೋದ ಶಿಕ್ಷಕನಿಗೆ ದಂಡ ವಿಧಿಸಲಾಗಿದೆ. ಇದೀಗ ಜೂನ್ 15ರಿಂದ ಶಾಲೆಗಳಲ್ಲಿ ದಾಖಲಾತಿ ಆರಂಭಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೂನ್ 21ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ. ಇದರಿಂದ ಶಿಕ್ಷಕರು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ’.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ಚಂದ್ರಪ್ಪ ವ್ಯಕ್ತಪಡಿಸಿದ ಆತಂಕ ಇದು.
ಶೈಕ್ಷಣಿಕ ವರ್ಷದ ಪೂರ್ವ ಸಿದ್ಧತೆಗಳಾದ ಮಕ್ಕಳ ಶಾಲಾ ಪ್ರವೇಶ, ದಾಖಲಾತಿ ಆಂದೋಲನ, ವಾರ್ಷಿಕ ಕ್ರಿಯಾ ಯೋಜನೆ
ತಯಾರಿ ಮಾಡಿಕೊಳ್ಳಬೇಕು. ಜುಲೈ 1ರಿಂದ ಶಾಲೆ ಆರಂಭವಾದಾಗ ಸಂದರ್ಭಾನುಸಾರ ತರಗತಿ ಬೋಧನೆಗೆ ಆನ್ಲೈನ್, ಆಫ್ಲೈನ್ ವಿಧಾನಗಳ ಕಾರ್ಯತಂತ್ರ ತಯಾರಿಸಿಟ್ಟುಕೊಳ್ಳಬೇಕು. ಮಕ್ಕಳ ಕಲಿಕೆ, ಮೌಲ್ಯಾಂಕನ ವಿಶ್ಲೇಷಣೆಗೆ ರಾಜ್ಯದಾದ್ಯಂತ ಏಕರೂಪದ ಚಟುವಟಿಕೆ ಮುಂದುವರಿಸಲು ಸಹಾಯವಾಗಲು ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಸಾರ್ವಜನಿಕ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಬಸ್ಗಳಿಲ್ಲ. ದೂರದಿಂದ ಪ್ರಯಾಣಿಸುವವರಿಗೆ ಇದರಿಂದ ತೊಂದರೆಯಾಗಿದೆ. ದ್ವಿಚಕ್ರ ವಾಹನ ಹೊಂದಿದವರು ಶಾಲೆಗೆ ಬರುತ್ತಾರೆ. ಆದರೆ ಲಾಕ್ಡೌನ್ ನಿಯಮ ಎಂದು ದಂಡ ಕಟ್ಟಿಸಿಕೊಳ್ಳುತ್ತಿರುವುದು ಅವರಿಗೂ ಆತಂಕ ಉಂಟು ಮಾಡಿದೆ. ಶಿಕ್ಷಕರಿಗೆ ಅವರದ್ದೇ ಆದ ಗುರುತಿನ ಚೀಟಿ ಕೂಡ ಇಲ್ಲ. ಶಿಕ್ಷಣ ಇಲಾಖೆಯು ಎಲ್ಲ ಶಿಕ್ಷಕರಿಗೆ ಗುರುತಿನ ಚೀಟಿ ನೀಡಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.
132 ದಿನಗಳ ಕಾಲ ಮಕ್ಕಳಿಗೆ ಬಿಸಿಯೂಟ ನೀಡಿರಲಿಲ್ಲ. ಅದಕ್ಕಾಗಿ ಆ ಆಹಾರ ಸಾಮಗ್ರಿಗಳನ್ನು ಮಕ್ಕಳಿಗೆ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಆಯುಕ್ತರೇ ಸೂಚನೆ ನೀಡಿದ್ದರು. ಹೀಗಾಗಿ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಅವರಿಗೆ ಪೊಲೀಸರು ತೊಂದರೆ ನೀಡಬಾರದು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆಗೆ ಮಾತನಾಡುತ್ತೇನೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಅಭಿಪ್ರಾಯಗಳು
ಡಿಡಿಪಿಐ ಜತೆಯೂ ಮಾತನಾಡುತ್ತೇನೆ. ಲಾಕ್ಡೌನ್ ಮಧ್ಯೆ ಕೆಲಸ ಮಾಡಲು ಯಾವುದೇ ಶಿಕ್ಷಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ.
–ಮಂತೇಶ ಬೀಳಗಿ, ಜಿಲ್ಲಾಧಿಕಾರಿ
ಶೇ 50ರಷ್ಟು ಶಿಕ್ಷಕರು ಒಂದು ದಿನ, ಉಳಿದ ಶೇ 50 ಮಂದಿ ಮರುದಿನ ಈ ರೀತಿಯಾದರೂ ಶಾಲೆಗಳಲ್ಲಿ ಕೆಲಸ ಮಾಡಬೇಕು. ಅದಕ್ಕೆ ಶಿಕ್ಷಕರು ತಯಾರಾಗಬೇಕು.
–ಸಿ.ಆರ್. ಪರಮೇಶ್ವರಪ್ಪ, ಡಿಡಿಪಿಐ
ಲಾಕ್ಡೌನ್ ನಿಯಮ ಎಂದು ದಂಡ ಕಟ್ಟಿಸುವುದನ್ನು ಕೈಬಿಟ್ಟು, ತೊಂದರೆಯಾಗದಂತೆ ನೋಡಿಕೊಂಡರೆ ಎಲ್ಲ ಶಿಕ್ಷಕರು ಕೆಲಸ ಮಾಡಲು ತಯಾರಿದ್ದಾರೆ.
–ಎಚ್. ಚಂದ್ರಪ್ಪ, ಹರಿಹರ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.