ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆ ಕಡೆಗಣಿಸಿದ ನಾಡು ಶ್ರೀಮಂತವಾಗದು: ಬೊಮ್ಮಾಯಿ

Last Updated 18 ಆಗಸ್ಟ್ 2021, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾತೃ ಭಾಷೆಯನ್ನು ಯಾವುದೇ ಕಾರಣಕ್ಕೂ ಇತರ ಭಾಷೆಗಳಿಗೆ ಹೋಲಿಕೆ ಮಾಡಬಾರದು. ಮಾತೃಭಾಷೆಯನ್ನು ಕಡೆಗಣಿಸಿದ ನಾಡು ಶ್ರೀಮಂತವಾಗಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 2019-20ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.

‘ಮಾತೃಭಾಷೆಯನ್ನು ಇತರ ಭಾಷೆಗೆ ಹೋಲಿಸುವುದರಿಂದ ಭಾಷೆಯ ಬಗೆಗಿನ ಭಾವ ಹಾಗೂ ಭಾವನೆ ಕಡಿಮೆಯಾಗುತ್ತದೆ. ಮಾತೃಭಾಷೆಯ ಮಹತ್ವವನ್ನು ಅರಿತಿರುವ ನಾಡು ಶ್ರೀಮಂತವಾಗುತ್ತದೆ. ಕಲಿಯುಗದಲ್ಲಿ ಎಲ್ಲದಕ್ಕೂ ಬೆಲೆ ಕಟ್ಟಲಾಗುತ್ತಿದೆ. ಕಲೆ, ಸಂಸ್ಕೃತಿಗೂ ಬೆಲೆ ನಿಗದಿ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವರು ಬೆಲೆಗೆ ಮಹತ್ವ ನೀಡದೆಯೇ ಅರ್ಥ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಹಸಿವು, ಅರಿವು, ಮರೆವು ಹಾಗೂ ಸಾವನ್ನು ದೇವರು ನಮಗೆ ವರವಾಗಿ ನೀಡಿದ್ದಾನೆ. ಅದನ್ನು ತಿಳಿದು ಬದುಕಿದರೆ ಜೀವನ ಅರ್ಥಪೂರ್ಣವಾಗುತ್ತದೆ’ ಎಂದರು.

ಪ್ರಶಸ್ತಿ ಪುರಸ್ಕೃತ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಇನ್ನೊಬ್ಬರನ್ನು ಅವಕಾಶ ವಂಚಿತರನ್ನಾಗಿ ಮಾಡಿ, ನಾವು ಅಧಿಕಾರ ಅನುಭವಿಸಬಾರದು. ಮಹಾವೀರನು ಅಣ್ಣ ಭರತನ ವಿರುದ್ಧ ಗೆದ್ದರೂ ಎಲ್ಲವನ್ನು ತ್ಯಜಿಸಿ, ಶಾಂತಿ ಸಂದೇಶ ಸಾರಿದ. ನಾವು ಬದುಕುವುದರ ಜೊತೆಗೆ ಇತರರಿಗೂ ಬದುಕಲು ಅವಕಾಶ ನೀಡಬೇಕು. ಯಶಸ್ಸು ಸಾಧಿಸುವ ಭರದಲ್ಲಿ ಬೇರೆಯವರನ್ನು ಅವಕಾಶ ವಂಚಿತರನ್ನಾಗಿ ಮಾಡಬಾರದು’ ಎಂದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗಪಟ್ಟದೇವರು, ‘ಅನುಭವ ಮಂಟಪವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಆ ಕಾರ್ಯವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ, ವಿಧಾನಸೌಧದ ಮುಂದೆ ಬಸವೇಶ್ವರರ ಪ್ರತಿಮೆಯನ್ನು ಆದಷ್ಟು ಬೇಗ ಅನಾವರಣ ಮಾಡುವ ಮೂಲಕ ಈ ಹಿಂದಿನ ಯೋಜನೆಯನ್ನು ಸಾಕಾರ ಮಾಡಬೇಕು. ಮಹಾರಾಷ್ಟ್ರದಲ್ಲಿ ಶಿವಾಜಿ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಸ್ವೀಕರಿಸಲಾಗಿದೆ. ಕರ್ನಾಟಕದಲ್ಲಿ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು’ ಎಂದು ಮನವಿ ಮಾಡಿದರು.

ವಿವಿಧ ಸಾಧಕರಿಗೆ ಪ್ರಶಸ್ತಿಗಳು ಪ್ರದಾನ

‘ಬಸವ ರಾಷ್ಟ್ರೀಯ ಪ್ರಶಸ್ತಿ’ಯನ್ನು ಬಸವಲಿಂಗಪಟ್ಟದೇವರು, ‘ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪಂ. ನರಸಿಂಹಲು ವಡವಾಟಿ, ‘ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ’ಯನ್ನು ಡಿ.ವೀರೇಂದ್ರ ಹೆಗ್ಗಡೆ, ‘ನಾಟ್ಯರಾಣಿ ಶಾಂತಲಾ ಪ್ರಶಸ್ತಿ’ಯನ್ನು ಬಿ.ಕೆ. ವಸಂತಲಕ್ಷ್ಮಿ, ‘ಜಕಣಾಚಾರಿ ಪ್ರಶಸ್ತಿ’ಯನ್ನು ಬಿ.ಎಸ್. ಯೋಗಿರಾಜ, ‘ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ’ಯನ್ನು ಮದಿರೆ ಮರಿಸ್ವಾಮಿ, ‘ಜಾನಪದಶ್ರೀ ಪ್ರಶಸ್ತಿ’ಯನ್ನು ಬಿ. ಟಾಕಪ್ಪ ಕಣ್ಣೂರು ಅವರಿಗೆ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು.

‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ಯನ್ನು ರಾ.ನಂ. ಚಂದ್ರಶೇಖರ, ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ಯನ್ನು ಚೂಡಾಮಣಿ ನಂದಗೋಪಾಲ್, ‘ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಯನ್ನು ಪ್ರೊ. ಸಿದ್ದಣ್ಣ ಉತ್ನಾಳ, ‘ಅಕ್ಕಮಹಾದೇವಿ ಪ್ರಶಸ್ತಿ’ಯನ್ನು ಜಯಶ್ರೀ ದಂಡೆ, ‘ನಿಜಗುಣ ಪುರಂದರ ಪ್ರಶಸ್ತಿ’ಯನ್ನು ಗೌರಿ ಕುಪ್ಪುಸ್ವಾಮಿ, ‘ಸಂತಶಿಶುನಾಳ ಶರೀಫ ಪ್ರಶಸ್ತಿ’ಯನ್ನು ಪಂ. ವಾದಿರಾಜ ನಿಂಬರಗಿ, ‘ಬಿ.ವಿ. ಕಾರಂತ ಪ್ರಶಸ್ತಿ’ಯನ್ನು ಎಚ್‌.ವಿ.ವೆಂಕಟಸುಬ್ಬಯ್ಯ ಹಾಗೂ ‘ಕುಮಾರವ್ಯಾಸ ಪ್ರಶಸ್ತಿ’ಯನ್ನು ಗಂಗಮ್ಮ ಕೇಶವಮೂರ್ತಿ ಅವರಿಗೆ ಪ್ರದಾನ ಮಾಡಿದರು.

ತಿಂಗಳಲ್ಲಿ 2 ದಿನ ಕನ್ನಡ ಭವನದಲ್ಲಿ ಕೆಲಸ: ಸಚಿವ ಸುನಿಲ್‌ ಕುಮಾರ್‌

‘ಕೋವಿಡ್‌ನಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದಿರುವುದರಿಂದ ಕಲಾವಿದರು ಸಂಕಷ್ಟ ಎದುರಿಸಿದ್ದಾರೆ. ಸರ್ಕಾರದಿಂದ 20 ಸಾವಿರ ಕಲಾವಿದರಿಗೆ ತಲಾ ₹ 3 ಸಾವಿರ ನೀಡಲಾಗಿದೆ. ವಿಧಾನಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಭೇಟಿ ಮಾಡುವುದು ಕಷ್ಟ ಎಂದು ಈ ಹಿಂದೆ ಹಿರಿಯರು ಮತ್ತು ಕಲಾವಿದರು ಅಳಲು ತೋಡಿಕೊಂಡಿದ್ದರು. ನಾನು ತಿಂಗಳಲ್ಲಿ ಎರಡು ದಿನ ಕೆಲವಷ್ಟು ಗಂಟೆಗಳನ್ನು ಕನ್ನಡ ಭವನದಲ್ಲಿ ಕಳೆದು, ಅಹವಾಲು ಆಲಿಸಲು ನಿರ್ಧರಿಸಿದ್ದೇನೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT