ಭಾನುವಾರ, ನವೆಂಬರ್ 28, 2021
20 °C

ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ: ಸಚಿವ ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಕಾರಣದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಶೇ 30 ರಷ್ಟು ಶುಲ್ಕ ಹೆಚ್ಚಿಸಬೇಕೆಂಬ ಆಡಳಿತ ಮಂಡಳಿಗಳ ಬೇಡಿಕೆಗೂ ಒಪ್ಪಿಗೆ ನೀಡಿಲ್ಲ.

ಅಲ್ಲದೆ, ವಿಶ್ವವಿದ್ಯಾಲಯ ಶುಲ್ಕ, ಇತರ ಶುಲ್ಕ, ಬೋಧನಾ ಶುಲ್ಕ ಸೇರಿದಂತೆ ಕೆಲವು ಬಗೆಯ ಶುಲ್ಕಗಳನ್ನು ಆಯಾ ಕಾಲೇಜುಗಳಲ್ಲಿ ಪಾವತಿಸಲು ಅವಕಾಶ ಇತ್ತು. ಇನ್ನು ಮುಂದೆ ಎಲ್ಲ ಶುಲ್ಕಗಳನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕವೇ ಪಾವತಿಸಬೇಕು. ಕಾಲೇಜುಗಳಲ್ಲಿ ಹಾಸ್ಟೆಲ್‌ ಮತ್ತು ಸಾರಿಗೆ ವ್ಯವಸ್ಥೆಯ ಶುಲ್ಕವನ್ನು ಮಾತ್ರ ನೇರವಾಗಿ ಪಡೆಯಲು ಅವಕಾಶ ನೀಡಲಾಗಿದೆ.

ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ (ಕುಪೇಕಾ) ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘದ (ಕೆಆರ್‌ಎಲ್‌ಎಂಪಿಸಿಎ) ಪ್ರತಿನಿಧಿಗಳ ಜತೆ ಬುಧವಾರ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

‘ಎಂಜಿನಿಯರಿಂಗ್‌ ಕೋರ್ಸ್‌ಗಳ ಶುಲ್ಕವನ್ನು ಶೇ 30ರಷ್ಟು ಹೆಚ್ಚಿಸುವಂತೆ ಖಾಸಗಿ ಕಾಲೇಜುಗಳು ಬೇಡಿಕೆ ಇಟ್ಟಿದ್ದವು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಪ್ರೊ.ಕರಿಸಿದ್ದಪ್ಪ ನೇತೃತ್ವದ ಸಮಿತಿ ಶೇ 15 ರಿಂದ ಶೇ 20ರವರೆಗೆ ಶುಲ್ಕ ಹೆಚ್ಚಳ ಮಾಡಬಹುದು ಎಂಬ ಶಿಫಾರಸು ನೀಡಿತ್ತು. ಆದರೆ, ಕೋವಿಡ್‌ ಕಾರಣದಿಂದ ಉಂಟಾಗಿರುವ ಪರಿಸ್ಥಿತಿಯ ಆಧಾರದಲ್ಲಿ ಶುಲ್ಕ ಹೆಚ್ಚಳ ಬೇಡ ಎಂಬ ನಿರ್ಧಾರ ಕೈಗೊಳ್ಳಲಾಯಿತು. ಈ ಕುರಿತು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒಕ್ಕೂಟದ ಪ್ರತಿನಿಧಿಗಳನ್ನು ಮನವೊಲಿಸಲಾಯಿತು’ ಎಂದು ಹೇಳಿದರು.

ಇತರ ಶುಲ್ಕಗಳಿಗೂ ಕಡಿವಾಣ: ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ‘ಇತರ ಶುಲ್ಕ’ದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ತಲಾ ₹ 70,000 ದವರೆಗೂ ಪಡೆಯುತ್ತಿವೆ ಎಂಬ ದೂರುಗಳು ಬಂದಿದ್ದವು. ಈ ಕಾರಣದಿಂದ ‘ಇತರ ಶುಲ್ಕ’ದ ಗರಿಷ್ಠ ಮೊತ್ತವನ್ನು ₹ 20,000 ಕ್ಕೆ ನಿಗದಿಪಡಿಸಲಾಗಿದೆ. ಖಾಸಗಿ ಕಾಲೇಜುಗಳ ಸಂಘದ ಪ್ರತಿನಿಧಿಗಳೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಬೋಧನಾ ಶುಲ್ಕ ಮತ್ತು ಇತರ ಶುಲ್ಕವನ್ನು ಯಾವ ಉದ್ದೇಶಗಳಿಗಾಗಿ ಪಡೆಯಲಾಗುತ್ತಿದೆ ಎಂಬುದರ ಕುರಿತು ಎಲ್ಲ ಕಾಲೇಜುಗಳೂ ಕೆಇಎ, ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ವಿಟಿಯುಗೆ ಮಾಹಿತಿ ನೀಡಬೇಕು. ಆಯಾ ಕಾಲೇಜಿನ ವೆಬ್‌ಸೈಟ್‌ನಲ್ಲೂ ಪ್ರಕಟಿಸಬೇಕು. ಕೆಇಎ ಮೂಲಕ ಶುಲ್ಕ ಪಾವತಿಸುವ ಕುರಿತೂ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಬೇಕು. ಶುಲ್ಕ ಪಾವತಿಯಲ್ಲಿನ ಗೊಂದಲ ನಿವಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೌಶಲ ಅಭಿವೃದ್ಧಿ ಶುಲ್ಕಕ್ಕೂ ಮಿತಿ: ಕೆಲವು ಕಾಲೇಜುಗಳಲ್ಲಿ ಉದ್ಯಮಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಕೌಶಲ ಅಭಿವೃದ್ಧಿ ಶುಲ್ಕ ಪಡೆಯಲಾಗುತ್ತಿದೆ. ಒಂದೊಂದು ಕಾಲೇಜಿನಲ್ಲಿ ಒಂದೊಂದು ದರದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ. ಕೌಶಲ ಅಭಿವೃದ್ಧಿ ಶುಲ್ಕದ ಗರಿಷ್ಠ ಮಿತಿಯನ್ನು ₹ 20,000 ನಿಗದಿಪಡಿಸಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಅತ್ಯಾಧುನಿಕ ಪ್ರಯೋಗಾಲಯ, ವಿಶೇಷ ಕೋರ್ಸ್‌ಗಳು ಸೇರಿದಂತೆ ಕೌಶಲ ಅಭಿವೃದ್ಧಿಗಾಗಿ ಇರುವ ಸೌಲಭ್ಯಗಳ ಕುರಿತು ವಿಟಿಯು ತಂಡವು ಪರಿಶೀಲನೆ ನಡೆಸಲಿದೆ. ಬಳಿಕ ಶುಲ್ಕ ನಿಗದಿಪಡಿಸಲಾಗುವುದು. ಈ ಶುಲ್ಕವನ್ನೂ ಕೆಇಎ ಮೂಲಕವೇ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

‘ಕುಪೇಕಾ’ದ ತಾಂತ್ರಿಕ ಸಮಿತಿ ಅಧ್ಯಕ್ಷ ಮಂಜುನಾಥ ಭಂಡಾರಿ, ಸದಸ್ಯರಾದ ಚಂದ್ರಶೇಖರ್ ರಾಜು, ರಮೇಶ್ ರಾಜು, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಬಿಜೆಪಿ ಮುಖಂಡ ಗಣೇಶ್ ಕಾರ್ಣಿಕ್ ಇದ್ದರು.

4 ಕಾಲೇಜುಗಳಲ್ಲಿ ಕನ್ನಡದಲ್ಲಿ ಎಂಜಿನಿಯರಿಂಗ್‌

ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್‌), ಚಿಕ್ಕಬಳ್ಳಾಪುರದ ಎಸ್‌.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್‌), ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ (ಮೆಕ್ಯಾನಿಕಲ್‌) ಮತ್ತು ವಿಜಯಪುರದ ಬಿ.ಎಲ್‌.ಡಿ.ಇ. ಎ.ವಿ.ಪಿ. ಡಾ.ಪಿ.ಜಿ. ಹಳಕಟ್ಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (ಮೆಕ್ಯಾನಿಕಲ್‌) ಕನ್ನಡದಲ್ಲಿ ಎಂಜಿನಿಯರಿಂಗ್‌ ಬೋಧನೆಗೆ ತಯಾರಿ ನಡೆದಿದೆ. ಈ ಕೋರ್ಸ್‌ಗಳಿಗೆ ತಲಾ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು