ಶನಿವಾರ, ಆಗಸ್ಟ್ 13, 2022
26 °C
ದೂರವಾಣಿ ಕದ್ದಾಲಿಕೆ–ಬೆಲ್ಲದ ಆರೋಪ l ಪ್ರಮುಖರ ಸಮಿತಿ ಸಭೆ ಇಂದು

ನಾಯಕತ್ವ ಬದಲಾವಣೆ ವಿಚಾರ: ಬಿಜೆಪಿಯಲ್ಲಿ ಭಿನ್ನಮತ; 3 ಬಣ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ರಾಜ್ಯ ಘಟಕ ಮತ್ತು ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್, ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುತ್ತಲೇ ಇದ್ದರೂ, ಬಿಜೆಪಿಯ ಮೂರು ಬಣಗಳ ಭಿನ್ನನೆಲೆ ಗುರುವಾರ ಬಯಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಾಯಕತ್ವದ ಪರ ಮತ್ತು ವಿರೋಧ ಬಣಗಳ ಜತೆಗೆ ಪಕ್ಷದ ವರಿಷ್ಠರು (ಹೈಕಮಾಂಡ್) ಹಾಕುವ ‘ಲಕ್ಷ್ಮಣ ರೇಖೆ’ ದಾಟುವುದಿಲ್ಲ ಎಂಬ ತಟಸ್ಥ ಬಣವೂ ಈಗ ಬಹಿರಂಗವಾಗಿ ತೋರಿಸಿಕೊಂಡಿರುವುದು ಬಣ ಜಗಳವನ್ನು ತಾರಕಕ್ಕೆ ಕೊಂಡೊಯ್ಯವ ಲಕ್ಷಣ ಆಡಳಿತ ಪಕ್ಷದಲ್ಲಿ ನಿಚ್ಚಳವಾಗಿ ಕಾಣಿಸತೊಡಗಿದೆ.

ಪಕ್ಷ ಮತ್ತು ಸರ್ಕಾರದ ಬಗ್ಗೆ ಅಹವಾಲುಗಳನ್ನು ಹೇಳಿಕೊಳ್ಳಲು ಶಾಸಕರಿಗೆ  ಅರುಣ್‌ಸಿಂಗ್, ಗುರುವಾರ ನೀಡಿದ್ದ ಅವಕಾಶವನ್ನು ಮೂರು ಬಣಗಳೂ ಬಳಸಿಕೊಂಡಿವೆ. 46 ಕ್ಕೂ ಹೆಚ್ಚು ಶಾಸಕರು ಮತ್ತು 5 ಕ್ಕೂ ಹೆಚ್ಚು ಸಚಿವರು ತಮ್ಮ ದೂರು, ಬೇಡಿಕೆ ಮತ್ತು ಅಹವಾಲುಗಳನ್ನು ದಾಖಲಿಸಿದರು.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ಚಟುವಟಿಕೆ ಗರಿಗೆದರಿತ್ತು. ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಅರುಣ್‌ಸಿಂಗ್‌ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ಬದಲಿಸುವುದು ಸೂಕ್ತ ಎಂದು ಹೇಳಿದ ವಿಷಯ ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಯಿತು. ಮುಖ್ಯಮಂತ್ರಿ ಆಪ್ತ ಬಣದ ಶಾಸಕರು ವಿಶ್ವನಾಥ್‌ ಮೇಲೆ ಹರಿಹಾಯ್ದರು. ಬಳಿಕ ಪಕ್ಷವೂ ವಿಶ್ವನಾಥ್‌ ಅವರಿಗೆ ಎಚ್ಚರಿಕೆ ನೀಡಿತು.

ಮುಖ್ಯಮಂತ್ರಿಯವರ ನಿಷ್ಠ ಶಾಸಕರು ಬೆಳಿಗ್ಗೆ ಎಂ.ಪಿ.ರೇಣುಕಾಚಾರ್ಯ ಮನೆಯಲ್ಲಿ ಸಭೆ ಸೇರಿ ಸಿಂಗ್‌ ಅವರಿಗೆ ಏನು ಹೇಳಬೇಕು ಎಂಬ ವಿಷಯದ ಬಗ್ಗೆ ಚರ್ಚಿಸಿ, ನಂತರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು.

ಕೆಲವು ಶಾಸಕರಿಗೆ ಕಚೇರಿಗೆ ಬಂದು ಅಭಿಪ್ರಾಯ ಹೇಳುವಂತೆ ಸೂಚಿಸಲಾಗಿತ್ತು. ಆದರೆ, ಸ್ಪಷ್ಟನೆ ಕೇಳಿ ಪಕ್ಷದಿಂದ ನೋಟಿಸ್‌ ಪಡೆದಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬರಲು ಹೇಳಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ, ‘ನಾನು ಅರುಣ್‌ಸಿಂಗ್ ಅವರ ಭೇಟಿಗೆ ಅವಕಾಶ ಕೇಳಿಯೇ ಇಲ್ಲ’ ಎಂದಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ‘ನಾನು ಹೇಳಬೇಕಾಗಿದ್ದನ್ನು ಹೇಳಿದ್ದೇನೆ. ಮಾಧ್ಯಮಗಳ ಜತೆ ಚರ್ಚಿಸುವುದಿಲ್ಲ’ ಎಂದರು.

ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಅವರ ಮನೆಯಿಂದಲೇ ಒಟ್ಟಾಗಿ ಪಕ್ಷದ ಕಚೇರಿಗೆ ಬಂದರು. ತಮ್ಮ ಸರದಿ ಬಂದಾಗ ಒಬ್ಬೊಬ್ಬರೇ ಹೋಗಿ ಮಾತನಾಡಿದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ, ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಭಿನ್ನಮತೀಯ ಶಾಸಕ ಎಂದೇ ಗುರುತಿಸಿಕೊಂಡಿರುವ ಅರವಿಂದ ಬೆಲ್ಲದ್ ಹೇಳಿರುವುದಲ್ಲದೇ, ದೂರಿನ ದಾಖಲೆಗಳನ್ನು ಪ್ರದರ್ಶಿಸಿರುವುದು, ರಾಜಕೀಯ ಕ್ಷೋಭೆಯ ಚಟುವಟಿಕೆಗೆ ಮತ್ತೊಂದು ಆಯಾಮವನ್ನೂ ನೀಡಿದೆ.  ಈ ಬಗ್ಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.

ಏತನ್ಮಧ್ಯೆ, ಈ ಎಲ್ಲ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಪಕ್ಷದ ಪ್ರಮುಖರ ಸಮಿತಿಯ ಸಭೆ ಶುಕ್ರವಾರ ಸಂಜೆ ಪಕ್ಷದ ಕಚೇರಿಯಲ್ಲಿ ನಡೆಯಲಿದ್ದು, ಅಲ್ಲಿನ ಚರ್ಚೆಗಳ ಮೇಲೆ ಎಲ್ಲರ ಕುತೂಹಲ ಕೇಂದ್ರೀಕೃತವಾಗಿದೆ.

1.‘ಬಿಎಸ್‌ವೈ ನಾಯಕತ್ವ ಕೊನೆಗೊಳ್ಳಲಿ’:

ಯಡಿಯೂರಪ್ಪ ವಿರೋಧಿ ಬಣದ ಮುಂಚೂಣಿಯಲ್ಲಿರುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಅವರು, ನಾಯಕತ್ವದ ಬದಲಾವಣೆಗೆ ಬಹಿರಂಗವಾಗಿ ಒತ್ತಾಯಿಸಿದ್ದಾರೆ. ಸಚಿವ ಸಿ.ಪಿ.ಯೋಗೇಶ್ವರ ಈ ಗುಂಪಿನಲ್ಲಿದ್ದರೂ, ಬಹಿರಂಗವಾಗಿ ಮಾತನಾಡಿಲ್ಲ. ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಅವರು ಇವರೆಲ್ಲರ ಪರವಾಗಿ ಅರುಣ್‌ಸಿಂಗ್‌ ಮುಂದೆ ಮುಖ್ಯಮಂತ್ರಿ ಬದಲಾವಣೆಗೆ ಬೇಡಿಕೆ ಇಟ್ಟಿದ್ದಾರೆ. ಕೆಲವರು ತೆರೆಮರೆಯಲ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಈ ಬಣದ ಬೇಡಿಕೆ:

*ತಕ್ಷಣವೇ ನಾಯಕತ್ವ ಬದಲಿಸಬೇಕು. ಹೊಸಬರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು.

* ಬಿ.ವೈ.ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಕುಟುಂಬವರು ಆಡಳಿತದಲ್ಲಿ ನಡೆಸುತ್ತಿರುವ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು.

2.‘ಬಿಎಸ್‌ವೈ ನಾಯಕತ್ವವೇ ಮುಂದುವರಿಯಲಿ’:

ಯಡಿಯೂರಪ್ಪ ಅವರ ಆಪ್ತ ಬಣದ ಶಾಸಕರು ಮತ್ತು ಸಚಿವರು, ‘ಯಾವುದೇ ಕಾರಣಕ್ಕೂ ನಾಯಕತ್ವ ಬದಲಿಸಬಾರದು, ಮುಖ್ಯಮಂತ್ರಿಯಾಗಿ ಅವಧಿಪೂರ್ಣಗೊಳಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಗುಂಪಿನಲ್ಲಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಎಸ್‌.ಆರ್‌.ವಿಶ್ವನಾಥ್‌, ಹರತಾಳು ಹಾಲಪ್ಪ, ಮಾಡಾಳು ವಿರೂಪಾಕ್ಷಪ್ಪ 
ಮುಂಚೂಣಿಯಲ್ಲಿದ್ದಾರೆ.

ಯಡಿಯೂರಪ್ಪ ಅವರ ಪರ ಇರುವ ಶಾಸಕರ ಸಹಿ ಸಂಗ್ರಹಿಸಿಟ್ಟುಕೊಂಡಿರುವ ಈ ಬಣ ಅವಶ್ಯ ಇದ್ದಾಗ ವರಿಷ್ಠರ ಮುಂದೆ ಮಂಡಿಸಲು ಸಿದ್ಧವಾಗಿದೆ.

ಈ ಬಣದ ಬೇಡಿಕೆ:

* ಯಡಿಯೂರಪ್ಪ ಅವರು ಎರಡು ವರ್ಷಗಳು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಕೊಡಿ.

*ನಾಯಕತ್ವದ ವಿರುದ್ಧ ಟೀಕೆ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಂಡು, ಯತ್ನಾಳ್‌, ಯೋಗೇಶ್ವರ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು.

3.‘ವರಿಷ್ಠರ ಲಕ್ಷ್ಮಣ ರೇಖೆಗೆ ಬದ್ಧ’:

‘ನಾವು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ಪಕ್ಷ ಮತ್ತು ಸಂಘದ ನಿಷ್ಠರು’ಎಂದು ಹೇಳುವ ದೊಡ್ಡ ಗುಂಪೇ ಇದೆ. ಸರ್ಕಾರದ ಮುಖ್ಯ ಸಚೇತಕ ವಿ.ಸುನಿಲ್‌ ಕುಮಾರ್ ಈ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಮುಖ್ಯ ಎಂಬುದು ಇವರ ವಾದ. ಇವರಲ್ಲಿ ಆರ್‌ಎಸ್‌ಎಸ್‌ ಸಂಪರ್ಕದ ಶಾಸಕರೇ ಹೆಚ್ಚಿನವರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದನ್ನು ಬಹಿರಂಗವಾಗಿ ಹೇಳಿದ್ದಾರೆ.

ಇವರ ಮುಖ್ಯ ಬೇಡಿಕೆ:

* ಮೋದಿ ಮಾದರಿಯ ಆಡಳಿತ ಇರಬೇಕು, ಭ್ರಷ್ಟಾಚಾರ, ಪಕ್ಷಪಾತ ಮತ್ತು ಕುಟುಂಬದ ಮಧ್ಯ ಪ್ರವೇಶಕ್ಕೆ ಅವಕಾಶ ಇರಬಾರದು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು