ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂತೆ ಕಂತೆ ಹಣ: ಪ್ರಭಾವಿಗಳ ಜೊತೆ ‘ಸ್ಯಾಂಟ್ರೊ’ ರವಿ ಪೋಸು

ರವಿಯ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳ ಸ್ಕ್ರೀನ್ ಶಾಟ್‌ಗಳನ್ನೇ ಪೊಲೀಸರಿಗೆ ನೀಡಿದ ಮಹಿಳೆ
Last Updated 14 ಜನವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ವೇಶ್ಯಾವಾಟಿಕೆ ಜಾಲದಲ್ಲಿ ಸಕ್ರಿಯನಾಗಿದ್ದ ಎನ್ನಲಾದ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ (51), ಅಕ್ರಮ ಹಣ ಸಂಪಾದನೆಗಾಗಿ ವರ್ಗಾವಣೆಗೆ ದಂಧೆಗೆ ಇಳಿದಿದ್ದನೆಂಬ ಸಂಗತಿಯನ್ನು ವಾಟ್ಸ್‌ಆ್ಯಪ್‌ ಪುರಾವೆಗಳು ಬಯಲು ಮಾಡುತ್ತಿವೆ.

ಕೆಲ ಪ್ರಭಾವಿಗಳ ಕೈ- ಮೈ ಬಿಸಿ ಮಾಡಿ ವರ್ಗಾವಣೆ ಮಾಡಿಸುತ್ತಿದ್ದ ಎನ್ನಲಾದ ಸ್ಯಾಂಟ್ರೊ, ಕಂತೆ ಕಂತೆ ಹಣದ ನೋಟು ಎಣಿಸುತ್ತಿದ್ದನೆಂಬುದು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಿಂದ ಜಾಹೀರಾಗಿದೆ.

ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಮೈಸೂರು ಕಮಿಷನರೇಟ್ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸ್ಯಾಂಟ್ರೊ ರವಿ, ವಿಚಾರಣೆ ಎದುರಿಸುತ್ತಿದ್ದಾನೆ.

ಸಂತ್ರಸ್ತೆ ನೀಡಿರುವ ದೂರಿನ ಅಂಶಗಳಿಗಷ್ಟೇ ಸೀಮಿತವಾಗಿ ತನಿಖೆ ಮುಂದುವರಿಸಿರುವ ಪೊಲೀಸರು, ವೇಶ್ಯಾವಾಟಿಕೆ ಹಾಗೂ ವರ್ಗಾವಣೆ ದಂಧೆಯ ಮುಖ ಕಳಚುವ ಗೋಜಿಗೆ ಹೋಗುತ್ತಿಲ್ಲ. ಆಕಸ್ಮಾತ್ ಈ ಬಗ್ಗೆ ತನಿಖೆ ನಡೆದರೆ, ಸ್ಯಾಂಟ್ರೊ ಜೊತೆಗಿನ ಪ್ರಭಾವಿಗಳ ಗುಟ್ಟಿನ ವ್ಯವಹಾರಗಳೂ ಬಯಲಾಗಬಹುದು ಎಂದು ಪೊಲೀಸ್ ಅಧಿಕಾರಿಗಳೇ ಮಾತನಾಡುತ್ತಿದ್ದಾರೆ.

ಸ್ಯಾಂಟ್ರೊ ರವಿ ಯಾವುದೇ ಕೆಲಸ ಮಾಡಿದರೆ, ಯಾರನ್ನಾದರೂ ಭೇಟಿಯಾದರೆ ಅಥವಾ ಯಾವುದಾ ದರೂ ವಸ್ತು ಖರೀದಿಸಿದರೆ ಅದನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಳ್ಳುತ್ತಿದ್ದ. ಇಂಥ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳ ಸ್ಕ್ರೀನ್ ಶಾಟ್‌ಗಳನ್ನೇ ಸಂತ್ರಸ್ತೆ ಪೊಲೀಸರಿಗೆ ನೀಡಿದ್ದಾರೆ. ಹಲವು ಪ್ರಭಾವಿಗಳ ಜೊತೆಗಿನ ಫೋಟೊಗಳು ಸ್ಟೇಟಸ್‌ನಲ್ಲಿವೆ. ರವಿಗೂ ಪ್ರಭಾವಿಗಳಿಗೂ ಏನು ಸಂಬಂಧ ಎಂಬುದು ಮಾತ್ರ ನಿಗೂಢ.

ಪ್ರಭಾವಿಗಳ ಫೋಟೊ ಜೊತೆ ಅಡಿಬರಹ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಜೊತೆಗಿನ ಫೋಟೊವನ್ನು ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ರವಿ, ‘ಮೈ ಸ್ವೀಟ್ ಬ್ರದರ್‌ ಭರತ್ ಬೊಮ್ಮಾಯಿ ಹಾಗೂ ನಾನು’ ಎಂದು ಬರೆದುಕೊಂಡಿದ್ದ.

ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆ ಕುಳಿತುಕೊಂಡಿರುವ ಫೋಟೊ ಹಾಕಿದ್ದ ರವಿ, ‘ನನ್ನ ಏಳಿಗೆ ಬಯಸುವ ಗೃಹ ಸಚಿವ ಆರಗ ಜ್ಞಾನೇಂದ್ರ ಸರ್ ಜೊತೆ ಇಂದು ಮಾತುಕತೆ ನಡೆಸಿದೆ’ ಎಂಬುದಾಗಿ ಅಡಿಬರಹವಿಟ್ಟಿದ್ದ.

ಮನೆಯೊಂದರ ಸೋಫಾ ಮೇಲೆ ಕುಳಿತಿದ್ದ ಫೋಟೊ ಹಾಕಿ, ‘ಮಾಜಿ ಸಚಿವ ಹಾಗೂ ರಾಯಚೂರು ಸಂಸದ ಅಮರೇಶ್ವರ ನಾಯ್ಕ ಜೊತೆ ಮಾತನಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದ.

ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್ ಅವರು ಆನ್‌ಲೈನ್ ಸಭೆಯಲ್ಲಿ ಪಾಲ್ಗೊಂಡಿದ್ದ ಫೋಟೊವನ್ನು ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ಸ್ಯಾಂಟ್ರೊ, ‘ನನ್ನ ಏಳಿಗೆ ಬಯಸುವ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಸರ್ ಅವರು ಮುಖ್ಯಮಂತ್ರಿ ಜೊತೆಗೆ ಆನ್‌ಲೈನ್ ಸಭೆ ನಡೆಸುತ್ತಿದ್ದಾರೆ’ ಎಂದು ಅಡಿಬರಹ ಹಾಕಿದ್ದ.

ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ಜೊತೆಗಿನ ಫೋಟೊವನ್ನೂ ಹಾಕಿ, ‘ನನ್ನ ಏಳಿಗೆ ಬಯಸುವ ಸಚಿವ ಎಸ್‌.ಟಿ. ಸೋಮಶೇಖರ್ ಜೊತೆ ಇಂದು ಮಾತುಕತೆ ನಡೆಸಿದೆ’ ಎಂದು ಬರೆದಿದ್ದ.

ಕಂದಾಯ ಸಚಿವ ಆರ್. ಅಶೋಕ ಹಾಗೂ ಅಖಂಡ ಶ್ರೀನಿವಾಸ್‌ ಮೂರ್ತಿ ಜೊತೆಗೆ ಕುಳಿತುಕೊಂಡಿರುವ ಫೋಟೊವನ್ನು ಸ್ಟೇಟಸ್‌ ಹಾಕಿದ್ದ ಸ್ಯಾಂಟ್ರೊ ರವಿ, ‘ಸಚಿವ ಆರ್‌. ಅಶೋಕ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಜೊತೆ ಮಾತುಕತೆ’ ಎಂದು ಬರೆದುಕೊಂಡಿದ್ದ.

ಕಂತೆ ಕಂತೆ ಹಣದ ನೋಟುಗಳ ಫೋಟೊಗಳನ್ನೂ ಸ್ಟೇಟಸ್‌ನಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದ ರವಿ, ‘ಲಕ್ಷ್ಮಿ’ ಹಾಗೂ ‘ಮಹಾಲಕ್ಷ್ಮಿ’ ಎಂಬುದಾಗಿ ಅಡಿಬರಹ ನೀಡಿದ್ದ.

ಬಡ್ತಿ ಪಡೆದ ಐಪಿಎಸ್‌ಗೆ ಶುಭಾಶಯ: ಕರ್ನಾಟಕ ಪೊಲೀಸ್ ಸೇವೆಯಿಂದ ಐಪಿಎಸ್ ಸೇವೆಗೆ ಬಡ್ತಿ ಹೊಂದಿದ್ದ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಡಾ. ಶೇಖರ್ ಅವರಿಗೆ ಶುಭಾಶಯ ಎಂದು ಕೋರಿದ್ದ ಸ್ಯಾಂಟ್ರೊ, ಅವರಿಬ್ಬರ ಫೋಟೊವನ್ನು ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ. ಅವರಿಗೂ ರವಿಗೂ ಇರುವ ಸಂಬಂಧವೇನು ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ.

‘ನಿಮ್ಮ ಆಶೀರ್ವಾದವಿರಲಿ ಅಪ್ಪಾಜಿ’
‘ಬೊಮ್ಮಾಯಿ ಸರ್ ಸಿ.ಎಂ’ ಎಂದು ಮೊಬೈಲ್‌ನಲ್ಲಿ ನಮೂದಿಸಿದ್ದ ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದ ಸ್ಯಾಂಟ್ರೊ ರವಿ, ‘ಮಕರ ಸಂಕ್ರಾಂತಿ ಶುಭಾಶಯಗಳು. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಅಪ್ಪಾಜಿ’ ಎಂದಿದ್ದ. ಅದಕ್ಕೆ ‘ಒಕೆ’ ಎಂದು ಹೆಬ್ಬೆರಳು ಚಿಹ್ನೆಯಿಂದ ಪ್ರತಿಕ್ರಿಯೆ ಬಂದಿತ್ತು.

ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ ಹೊಸ ವರ್ಷದ ಶುಭಾಶಯ ಸಂದೇಶವನ್ನೂ ಸ್ಟೇಟಸ್ ಹಾಕಿಕೊಂಡಿದ್ದ ರವಿ, ‘ನನ್ನ ಏಳಿಗೆ ಬಯಸುವ ಐಪಿಎಸ್ ಶಂಕರ್ ಬಿದರಿ’ ಎಂದು ಸಹ ಬರೆದುಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT