ಭಾನುವಾರ, ಜುಲೈ 3, 2022
24 °C

ಅಂತರ ನಿಗಮ ವರ್ಗಾವಣೆಗೆ ಸಮ್ಮತಿ: ಮಾರ್ಗಸೂಚಿ ಪ್ರಕಟಿಸಿದ ಸಾರಿಗೆ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಿಗೆ ಇಲಾಖೆಯ ಅಧೀನದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಲ್ಲಿನ ಮೇಲ್ವಿಚಾರಕರನ್ನು ಬಿಟ್ಟು ಮೂರು ಮತ್ತು ನಾಲ್ಕನೇ ಶ್ರೇಣಿಯ ಕಾಯಂ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಿ ಮಂಗಳವಾರ ಮಾರ್ಗಸೂಚಿ ಹೊರಡಿಸಲಾಗಿದೆ.

ಸಾರಿಗೆ ನೌಕರರು ಇತ್ತೀಚೆಗೆ ನಡೆಸಿದ್ದ ಮುಷ್ಕರದ ವೇಳೆ ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ಅಂತರ ನಿಗಮಗಳ ವರ್ಗಾವಣೆ ಪ್ರಮುಖವಾಗಿತ್ತು. ಅನೇಕ ವರ್ಷಗಳಿಂದ ಈ ಬೇಡಿಕೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಈ ಹಿಂದೆ ಆರು ಬೇಡಿಕೆಗಳನ್ನು ಈಡೇರಿಸಿದ್ದ ಇಲಾಖೆ, ಈಗ ಅಂತರ ನಿಗಮ ವರ್ಗಾವಣೆಗೂ ಅವಕಾಶ ಕಲ್ಪಿಸಿದೆ.

ನೂತನ ಮಾರ್ಗಸೂಚಿಗಳ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಅವರ ಕೋರಿಕೆಯ ಮೇರೆಗೆ ಅಂತರ ನಿಗಮಗಳಿಗೆ ವರ್ಗಾವಣೆ ಮಾಡಬಹುದು. ವರ್ಷಕ್ಕೆ ಒಂದು ಬಾರಿ ಮಾತ್ರ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ನಡೆಸಬಹುದು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಇತರ ಮೂರು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸದಸ್ಯರಾಗಿರುವ ಸಮಿತಿ ವರ್ಗಾವಣೆ ಪ್ರಾಧಿಕಾರವಾಗಿರುತ್ತದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದ್ದು, ಸೂಕ್ತ ತಂತ್ರಾಂಶ ಅಭಿವೃದ್ಧಿಪಡಿಸಿ, ಪ್ರತಿ ವರ್ಷ ಏಪ್ರಿಲ್‌ 1ರಿಂದ 30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಕಲ್ಯಾಣ ಕರ್ನಾಟಕ ಸ್ಥಳೀಯ ಅಭ್ಯರ್ಥಿಗಳಿಗೂ ಮೀಸಲಾತಿ ಒದಗಿಸಬೇಕು. ಪ್ರತಿವರ್ಷ ಮೇ ತಿಂಗಳಿನಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

10 ವರ್ಷ ಸೇವಾವಧಿ ಪೂರ್ಣಗೊಳಿಸಿರುವ ಕಾಯಂ ನೌಕರರು ಮಾತ್ರ ವರ್ಗಾವಣೆಗೆ ಅರ್ಹತೆ ಹೊಂದಿರುತ್ತಾರೆ. ಶಿಸ್ತು ಪ್ರಕರಣ ಬಾಕಿ ಇರುವ ನೌಕರರು ವರ್ಗಾವಣೆಗೆ ಅರ್ಹರಲ್ಲ. ಸೇವಾವಧಿಯಲ್ಲಿ ಒಮ್ಮೆ ಮಾತ್ರ ಅಂತರ ನಿಗಮ ವರ್ಗಾವಣೆಗೆ ಅವಕಾಶವಿದೆ. ಆದೇಶ ಹೊರಬಿದ್ದ ಬಳಿಕ ಬದಲಾವಣೆಗೆ ಅವಕಾಶವಿಲ್ಲ ಎಂದು ಇಲಾಖೆ ತಿಳಿಸಿದೆ.

ಕಾರ್ಯನಿರತ ವೃಂದದ ಶೇಕಡ 2ರಷ್ಟು ಸಿಬ್ಬಂದಿಯನ್ನು ಮಾತ್ರ ಇತರ ಸಾರಿಗೆ ನಿಗಮಗಳಿಗೆ ವರ್ಗಾವಣೆ ಮಾಡಬಹುದು. ಪ್ರತಿ ನಿಗಮದಲ್ಲಿ ಮಾಡುವ ಅಂತರ ನಿಗಮ ವರ್ಗಾವಣೆಯಲ್ಲಿ ಶೇ 5ರಷ್ಟನ್ನು ಪತಿ–ಪತ್ನಿ ಪ್ರಕರಣಗಳಿಗೆ ಮೀಸಲಿಡಬೇಕು. ವರ್ಗಾವಣೆ ಅರ್ಜಿಗಳಿಗೆ ಸೇವಾ ಜೇಷ್ಠತೆ ಆಧಾರದಲ್ಲಿ ಆದ್ಯತೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ವರ್ಗಾವಣೆಗೊಂಡ ನೌಕರರು ಮೂಲ ನಿಗಮದಲ್ಲಿ ಪಡೆಯುತ್ತಿದ್ದ ವೇತನವನ್ನು ರಕ್ಷಿಸಲಾಗುತ್ತದೆ. ಆದರೆ,ಇತರ ಸೌಲಭ್ಯಗಳ ವಿಚಾರದಲ್ಲಿ ವರ್ಗಾವಣೆ ಹೊಂದುವ ನಿಗಮದ ನಿಯಮಗಳು ಅನ್ವಯವಾಗುತ್ತದೆ. ವರ್ಗಾವಣೆಗೊಂಡ ನಿಗಮದ ಜೇಷ್ಠತಾ ಪಟ್ಟಿಯ ಕೊನೆಯಲ್ಲಿ ಈ ನೌಕರರ ಹೆಸರನ್ನು ಸೇರಿಸಬೇಕು. ವರ್ಗಾವಣೆ ಭತ್ಯೆಯ ಸೌಲಭ್ಯ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಎರಡು ಬೇಡಿಕೆಗಳು ಬಾಕಿ
ಸಾರಿಗೆ ನೌಕರರ ತರಬೇತಿ ಅವಧಿಯನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸುವುದು ಮತ್ತು ಸಾರಿಗೆ ನಿಗಮಗಳ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆಗಳು ಬಾಕಿ ಉಳಿದಿವೆ.

ತರಬೇತಿ ಅವಧಿ ಕಡಿತಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದೆ. ವೇತನ ಪರಿಷ್ಕರಣೆ ಸಂಬಂಧ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು