ಭಾನುವಾರ, ಜುಲೈ 3, 2022
24 °C
ನೂರಾರು ಮಂದಿ ಟ್ರೈನಿ ನೌಕರರ ವಜಾ

ಸಾರಿಗೆ ಮುಷ್ಕರ: ಕಠಿಣ ನಿಲುವು ತಳೆದ ಸರ್ಕಾರ, ನಿವೃತ್ತರ ಮರು ನೇಮಕಾತಿಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ನೌಕರರು ವೇತನ ಪರಿಷ್ಕರಣೆಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಎರಡನೇ ದಿನ ಪೂರೈಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕಠಿಣ ನಿಲುವು ತಾಳಿದೆ. ನೂರಾರು ಮಂದಿ ಟ್ರೈನಿ ಸಿಬ್ಬಂದಿ ವಜಾ, ಕಾಯಂ ನೌಕರರಿಗೆ ನೋಟಿಸ್‌ ಜಾರಿ ಮಾಡಿದೆ. ನಿವೃತ್ತ ನೌಕರರ ಸೇವೆ ಬಳಕೆಗೂ ಹೆಜ್ಜೆ ಇರಿಸಿದೆ.

ರಾಜ್ಯದಾದ್ಯಂತ ಸಾರಿಗೆ ನಿಗಮಗಳ ಬಹುತೇಕ ನೌಕರರು ಗುರುವಾರವೂ ಮುಷ್ಕರದಲ್ಲಿ ಭಾಗಿಯಾದರು. ಅತ್ಯಲ್ಪ ಪ್ರಮಾಣದ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, ಕೆಲವೇ ಬಸ್‌ಗಳ ಸಂಚಾರ ಸಾಧ್ಯವಾಗಿದೆ. ಇದರಿಂದಾಗಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಮುಷ್ಕರನಿರತ ನೌಕರರನ್ನು ಮಣಿಸಲು ದಂಡನೆಯ ಅಸ್ತ್ರ ಬಳಸಲು ಸಾರಿಗೆ ಇಲಾಖೆ ಮುಂದಾಗಿದೆ.

130 ಮಂದಿ ವಜಾ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸಾವಿರಾರು ಮಂದಿ ಟ್ರೈನಿ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಬುಧವಾರ ರಾತ್ರಿ ನೋಟಿಸ್‌ ಜಾರಿ ಮಾಡಲಾಗಿತ್ತು.

ಈ ಪೈಕಿ ದೀರ್ಘ ಕಾಲದಿಂದ ಶಿಸ್ತು ಕ್ರಮಕ್ಕೆ ಶಿಫಾರಸುಗೊಂಡಿದ್ದ 130 ಜನರನ್ನು ಗುರುವಾರ ಸೇವೆಯಿಂದ ವಜಾಗೊಳಿಸಲಾಗಿದೆ.

ಕೆಎಸ್‌ಆರ್‌ಟಿಸಿಯ 96, ಬಿಎಂಟಿಸಿಯ 32 ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ 12 ಟ್ರೈನಿ ನೌಕರರ ನೇಮಕಾತಿ ಆದೇಶವನ್ನು ರದ್ದುಗೊಳಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ನೌಕರರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದ ಪ್ರಸ್ತಾವಗಳು ದೀರ್ಘ ಕಾಲದಿಂದ ಬಾಕಿ ಇದ್ದವು. ಮುಷ್ಕರ ಬೆಂಬಲಿಸಿ ಕರ್ತವ್ಯಕ್ಕೆ ಗೈರಾಗುತ್ತಿರುವ ನೌಕರರಿಗೆ ಕಠಿಣ ಸಂದೇಶ ರವಾನಿಸುವ ಉದ್ದೇಶದಿಂದ ಗುರುವಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಕಾಯಂ ಸಿಬ್ಬಂದಿಗೂ ನೋಟಿಸ್‌: ನಾಲ್ಕೂ ನಿಗಮಗಳ ಕಾಯಂ ನೌಕರರಿಗೂ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯುಳ್ಳ ನೋಟಿಸ್‌ ಜಾರಿಮಾಡುವ ಪ್ರಕ್ರಿಯೆ ಆರಂಭವಾಗಿದೆ. ಗುರುವಾರ ಸಂಜೆ ನೂರಾರು ನೌಕರರ ಮನೆಗಳಿಗೆ ನೋಟಿಸ್‌ ತಲುಪಿಸಲಾಗಿದೆ.

ಬೆಳಿಗ್ಗೆ ನೌಕರರ ಮೊಬೈಲ್‌ ಸಂಖ್ಯೆಗೆ ಅಧಿಕೃತವಾಗಿ ಎಸ್‌ಎಂಎಸ್‌ ಕಳುಹಿಸಿದ್ದ ನಿಗಮದ ಅಧಿಕಾರಿಗಳು, ಸಂಜೆಯೊಳಕ್ಕೆ ಕರ್ತವ್ಯಕ್ಕೆ ಮರಳುವಂತೆ ಸೂಚಿಸಿದ್ದರು. ಸಂಜೆ ನೋಟಿಸ್‌ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಶುಕ್ರವಾರ ಮುಷ್ಕರದಲ್ಲಿ ಭಾಗಿಯಾಗಿರುವ ಬಹುತೇಕ ಎಲ್ಲ ನೌಕರರಿಗೂ ನೋಟಿಸ್‌ ತಲುಪಿಸಲು ಸಾರಿಗೆ ನಿಗಮಗಳು ಸಿದ್ಧತೆ ಮಾಡಿಕೊಂಡಿವೆ.

ವಸತಿ ಗೃಹ ತೆರವಿಗೆ ಸೂಚನೆ: ಮುಷ್ಕರನಿರತ ಸಾರಿಗೆ ನಿಗಮಗಳ ನೌಕರರ ಕುಟುಂಬಗಳನ್ನು ಸರ್ಕಾರಿ ವಸತಿ ಗೃಹಗಳಿಂದ ತೆರವು ಮಾಡುವುದಕ್ಕೂ ಸರ್ಕಾರ ಮುಂದಾಗಿದೆ. ಸಾರಿಗೆ ಇಲಾಖೆಯ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ನೌಕರರ ಕುಟುಂಬಗಳನ್ನು ಖುದ್ದಾಗಿ ಭೇಟಿ ಮಾಡಿರುವ ನಿಗಮಗಳ ಭದ್ರತಾ ಸಿಬ್ಬಂದಿ, ವಸತಿ ಗೃಹ ಖಾಲಿ ಮಾಡಬೇಕೆಂಬ ಸೂಚನೆಯುಳ್ಳ ನೋಟಿಸ್‌ ತಲುಪಿಸಿದ್ದಾರೆ.

ನಿವೃತ್ತರ ನೇಮಕಕ್ಕೆ ನಿರ್ಧಾರ: ಎರಡು ವರ್ಷದಿಂದ ಈಚೆಗೆ ನಿವೃತ್ತರಾಗಿದ್ದು, 62 ವರ್ಷ ಮೀರದ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಬಸ್‌ಗಳನ್ನು ಓಡಿಸುವ ನಿರ್ಧಾರವನ್ನೂ ಸಾರಿಗೆ ಇಲಾಖೆ ಕೈಗೊಂಡಿದೆ. ನಿವೃತ್ತ ನೌಕರರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ನಾಲ್ಕೂ ನಿಗಮಗಳು ಗುರುವಾರವೇ ಪ್ರಕಟಣೆ ಹೊರಡಿಸಿವೆ.

ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಸಂಜೆ ಉನ್ನತಮಟ್ಟದ ಸಭೆ ನಿಗದಿಯಾಗಿತ್ತು. ಆದರೆ, ದೀಢೀರ್‌ ಸಭೆಯನ್ನು ರದ್ದುಪಡಿಸಲಾಯಿತು.

ಖಾಸಗಿ ಬಸ್‌ಗಳ ಅಬ್ಬರ: ಎರಡನೇ ದಿನವೂ ರಾಜ್ಯದಾದ್ಯಂತ ಖಾಸಗಿ ಬಸ್‌ಗಳ ಸಂಚಾರದ ಅಬ್ಬರ ಜೋರಾಗಿತ್ತು. ಬಹುತೇಕ ಕಡೆಗಳಲ್ಲಿ ಸರ್ಕಾರಿ ಬಸ್‌ ನಿಲ್ದಾಣಗಳಿಂದಲೇ ಖಾಸಗಿ ಬಸ್‌ಗಳ ಸಂಚಾರ ಮುಂದುವರಿದಿದೆ. ಸರ್ಕಾರಿ ಬಸ್‌ಗಳ ದರ ಪಟ್ಟಿಯನ್ನೇ ಪಾಲಿಸುವಂತೆ ನಿರ್ದೇಶನ ನೀಡಿದ್ದರೂ, ಹಲವು ಕಡೆಗಳಲ್ಲಿ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ದೂರುಗಳು ಮುಂದುವರಿದಿವೆ.

‘ಮಾರ್ಚ್‌ 29ಕ್ಕೆ ಬಳಕೆಗೆ ಯೋಗ್ಯವಲ್ಲದ ಕಾರಣಕ್ಕೆ ಅನುಪಯುಕ್ತ ವಾಹನಗಳ ಪಟ್ಟಿಯಲ್ಲಿದ್ದ ಖಾಸಗಿ ಬಸ್‌ಗಳಿಗೂ ತೆರಿಗೆ ವಿನಾಯಿತಿಯೊಂದಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಪ್ರಯಾಣಿಕ ವಾಹನಗಳಿಗೆ ತುರ್ತಾಗಿ ರಹದಾರಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ 100 ರಹದಾರಿಗಳನ್ನು ವಿತರಿಸಲಾಗಿದೆ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಹಾಸನ, ಕಲಬುರ್ಗಿ, ಕೋಲಾರ, ಬೆಂಗಳೂರಿನ ಹೊರವಲಯ ಸೇರಿದಂತೆ ಕೆಲವು ಕಡೆಗಳಲ್ಲಿ ಮುಷ್ಕರದ ನಡುವೆಯೂ ಸಂಚರಿಸಿದ ಸಾರಿಗೆ ನಿಗಮಗಳ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲವು ಬಸ್‌ಗಳ ಗಾಜುಗಳಿಗೆ ಹಾನಿಯಾಗಿದೆ.

18 ವಿಶೇಷ ರೈಲು: ರಾಜ್ಯ ಸರ್ಕಾರದ ಕೋರಿಕೆಯಂತೆ ನೈರುತ್ಯ ರೈಲ್ವೆಯಿಂದ ಏಪ್ರಿಲ್‌ 8ರಿಂದ ಏ.14ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ 18 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ದಟ್ಟಣೆಯ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೆ ಬದಲಾಗಿ ಪ್ರತಿ 4 ನಿಮಿಷ 50 ಸೆಕೆಂಡ್‌ಗಳಿಗೆ ಹಾಗೂ ದಟ್ಟಣೆ ಇಲ್ಲದ ಅವಧಿಯಲ್ಲಿ ಪ್ರತಿ ಪ್ರತಿ 7 ನಿಮಿಷಗಳಿಗೆ ಒಂದರಂತೆ ಮೆಟ್ರೊ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

‘ಸರ್ಕಾರ ನಡೆಸುವುದು ಗೊತ್ತಿದೆ’: ಹುಬ್ಬಳ್ಳಿ: ‘ಸರ್ಕಾರ ಹೇಗೆ ನಡೆಸಬೇಕೆನ್ನುವುದು ನಮಗೆ ಗೊತ್ತಿದೆ, ನೀವು ತಲೆಕೆಡಿಸಿಕೊಳ್ಳಬೇಡಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಮಾಧ್ಯಮದವರಿಗೆ ಹರಿಹಾಯ್ದರು.

ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ‘ಮುಷ್ಕರ ನಡೆಯುತ್ತಿರುವುದರಿಂದ ವಿಮೆ ಹಾಗೂ ಪರ್ಮಿಟ್ ಅವಧಿ ಮುಗಿದ ಖಾಸಗಿ ವಾಹನಗಳನ್ನು‌ ಓಡಿಸಲಾಗುತ್ತಿದೆಯಲ್ಲ’ ಎನ್ನುವ ಪ್ರಶ್ನೆಗೆ ಅವರು ಸಿಟ್ಟಿನಿಂದ ಪ್ರತಿಕ್ರಿಯಿಸಿದರು.

‘ಖಾಸಗಿ ವಾಹನಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ, ಒಂದು ವೇಳೆ ದುಪ್ಪಟ್ಟು ಹಣ ವಸೂಲಿ‌ ಮಾಡಿದರೆ ಕ್ರಮ ಜರುಗಿಸುತ್ತೇವೆ. ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ. ಜನರು ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ’ ಎಂದರು.

‘ಹಠ ಬಿಟ್ಟು ಮಾತುಕತೆಗೆ ಬನ್ನಿ’: ‘ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ವರದಿಯಂತೆ ವೇತನ ನೀಡಲು ಸಾಧ್ಯವಿಲ್ಲವೆಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಮಾತುಕತೆಗೆ ಸಿದ್ಧ. ಅವರು ಹಠ ಬಿಟ್ಟು ಬರಲಿ’ ಎಂದು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ‌ ಪರ್ವೇಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಪ್ರತಿಭಟನೆ ನಿರತರು ಮತ್ತು ಅದಕ್ಕೆ ಪ್ರಚೋದನೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಎಸ್ಮಾ ಜಾರಿಗೆ ಅವಕಾಶವಿದೆ. ಜೂನ್‌ವರೆಗೆ ಎಸ್ಮಾ ಜಾರಿಯ ಅವಕಾಶವನ್ನು ಕಾರ್ಮಿಕ ಇಲಾಖೆ ನೀಡಿದೆ. ಪರಿಸ್ಥಿತಿ ಬಂದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ನೌಕರರಿಗೆ ತಕ್ಷಣ ಮಧ್ಯಂತರ ಪರಿಹಾರವಾಗಿ ಶೇ 10ರಷ್ಟು ವೇತನ ಪರಿಷ್ಕರಣೆಗೆ ನಾವು ಸಿದ್ಧ. ಮೊದಲಿಗೆ ಶೇ 8 ಉಳಿದ ಶೇ 2ರಷ್ಟು ನಂತರದ ದಿನಗಳಲ್ಲಿ ಹೆಚ್ಚಿಸಬಹುದು. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವೇತನ ಪರಿಷ್ಕರಿಸುವುದಾಗಿ ಮಾತು ಕೊಟ್ಟಿದ್ದೇವೆ‌’ ಎಂದರು.

ನೆರೆ ರಾಜ್ಯಗಳ ನೆರವು ಯಾಚನೆ: ‘ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದ ಜನರಿಗೆ ತೊಂದರೆ ಆಗುವುದನ್ನು ತಪ್ಪಿಸಲು ನೆರೆಯ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳಿಗೆ ಪತ್ರ ಬರೆದು ಕರ್ನಾಟಕಕ್ಕೆ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಕೋರಲಾಗಿದೆ. ಎಲ್ಲ ಸರ್ಕಾರಗಳೂ ಸಕಾರಾತ್ಮಕವಾಗಿ ಸ್ಪಂದಿಸಿವೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ನೆರೆಯ ರಾಜ್ಯದ ಖಾಸಗಿ ಬಸ್‌ಗಳ ಮಾಲೀಕರು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಬಸ್‌ ಓಡಿಸಲು ಆಸಕ್ತಿ ತೋರಿದರೆ ಅಂತಹ ವಾಹನಗಳ ಸೇವೆ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು