ಮಂಗಳವಾರ, ಏಪ್ರಿಲ್ 13, 2021
28 °C

ಸಾರಿಗೆ ನೌಕರರ ಮುಷ್ಕರ: ರಾಜ್ಯದಾದ್ಯಂತ ಏಪ್ರಿಲ್ 7ರಿಂದ ಬಸ್ ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಾರಿಗೆ ನೌಕರರಿಗೆ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸದ ಕಾರಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಏಪ್ರಿಲ್ 7ರಿಂದ ರಾಜ್ಯದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದೆ ಎಂದು ಕೂಟದ ಗೌರವಾಧ್ಯಕ್ಷ ಪಿ.ಎಚ್.‌ ನೀರಲಕೇರಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನೌಕರರು ಮುಷ್ಕರ ನಡೆಸಿದಾಗ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಅದಾಗಿ ಮೂರು ತಿಂಗಳು ಕಳೆದರೂ ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಒಗ್ಗಟ್ಟಿನಿಂದ ಮುಷ್ಕರ ನಡೆಸಲು ಮುಂದಾಗಿದ್ದಾರೆ ಎಂದರು.

ಈಗಾಗಲೇ ವಿವಿಧ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಏ. 6ರಂದು ನೌಕರರು ಕುಟುಂಬ ಸದಸ್ಯರೊಂದಿಗೆ ಜಿಲ್ಲೆಯ ಪ್ರಮುಖ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಏ .1ರಂದು ಕಚೇರಿಯಲ್ಲಿ ನೌಕರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಕಾನೂನ ಅಡಿಯಲ್ಲಿಯೇ ಪ್ರತಿಭಟನೆ ನಡೆಸುತ್ತೇವೆ.‌ ಸಾರ್ವಜನಿಕರಿಗೆ ಅನಾನುಕೂಲ ಮಾಡಬೇಕೆನ್ನುವ ಉದ್ದೇಶ ನಮ್ಮದಲ್ಲ. ನಮ್ಮ ಬೇಡಿಕೆಗಳನ್ನು‌ ಸರ್ಕಾರ ಈಡೇರಿಸಬೇಕೆನ್ನುವುದು ಇದರ ಉದ್ದೇಶ ಎಂದು ಹೇಳಿದರು.

ಆರನೇ ವೇತನ ಆಯೋಗ, ಅಂತರ್ ನಿಗಮ ವರ್ಗಾವಣೆ ಜಾರಿಯಾಗಬೇಕು. ಮೇಲಾಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಕೋವಿಡ್'ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ ನೀಡಬೇಕು. ಎರಡು ವರ್ಷದ ತರಬೇತಿಯನ್ನು ಒಂದು ವರ್ಷಕ್ಕೆ ಕಡಿತಗೊಳಿಸಬೇಕು ಎಂದು‌ ಆಗ್ರಹಿಸಿದರು.

ಹಿಂದೆ ಪ್ರತಿಭಟನೆ, ಮುಷ್ಕರ ನಡೆದಾಗ ನಮ್ಮಲ್ಲಿ ಸಂಘಟನೆ ಇರಲಿಲ್ಲ. ಈಗ ನಾವೆಲ್ಲರೂ ಒಂದಾಗಿ ಸಾರಿಗೆ ನೌಕರರ ಒಕ್ಕೂಟ ರಚಿಸಿಕೊಂಡಿದ್ದೇವೆ. ಒಮ್ಮತದ ಅಭಿಪ್ರಾಯದ ಮೇರೆಗೆ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದರು.

ನೌಕರರ ಒಕ್ಕೂಟದ ಧಾರವಾಡ ವಿಭಾಗದ ಪದಾಧಿಕಾರಿಗಳಾದ ಬಿ.ಎಸ್. ಕಮ್ಮಾರ, ಬಾಳು ಟಿ., ಚನ್ನಬಸವ ತರ್ಲಘಟ್ಟ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು