ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿಗೆ ಮರ ಕಡಿತಲೆ: ತನಿಖೆಗೆ ಹೈಕೋರ್ಟ್‌ ನಿರ್ದೇಶನ

Last Updated 9 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್‌) ವತಿಯಿಂದ ಕೈಗೊಂಡಿರುವ ರಸ್ತೆ ಕಾಮಗಾರಿಗಳಿಗಾಗಿ ಮರ ಕಡಿತಲೆ ಮಾಡಿರುವ ವ್ಯಕ್ತಿಗಳು ಅಥವಾ ಪ್ರಾಧಿಕಾರಗಳನ್ನು ಗುರುತಿಸಲು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

‘ಬೆಂಗಳೂರು ಸುತ್ತಲಿನ ರಸ್ತೆ ಯೋಜನೆ’ ಹೆಸರಿನಲ್ಲಿ ಕೈಗೆತ್ತಿಕೊಂಡಿರುವ 155.2 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳಲ್ಲಿ ಕೆಆರ್‌ಡಿಸಿಎಲ್‌ ಅಗತ್ಯ ಕಾನೂನುಬದ್ಧ ಅನುಮತಿಗಳನ್ನು ಪಡೆಯದೇ ಮರಗಳನ್ನು ಕಡಿತಲೆ ಮಾಡುತ್ತಿದೆ ಎಂದು ಆರೋಪಿಸಿ ವಾಯ್ಸ್‌ ಆಫ್‌ ಸರ್ಜಾಪುರ, Jhatkaa.org ಸಂಸ್ಥೆಗಳು ಮತ್ತು ರಜನಿ ಸಂತೋಷ್‌ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.

ಕಾಮಗಾರಿ ಸ್ಥಳದಲ್ಲಿ ಭಾರಿ ಸಂಖ್ಯೆಯ ಮರಗಳನ್ನು ಕತ್ತರಿಸಿರುವುದರ ಫೋಟೊಗಳನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಹಿಂದಿನ ವಿಚಾರಣೆ ವೇಳೆ ಕೆಆರ್‌ಡಿಸಿಲ್‌ಗೆ ಸೂಚಿಸಿತ್ತು. ‘ಯಾವುದೇ ಮರಗಳ ಕಡಿತಲೆಯಲ್ಲಿ ಸಂಸ್ಥೆಯ ಪಾತ್ರ ಇಲ್ಲ’ ಎಂದು ಕೆಆರ್‌ಡಿಸಿಎಲ್‌ ವಕೀಲರು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ, ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತು.

‘ಮರಗಳ ಕಡಿತಲೆಯಲ್ಲಿ ತನ್ನ ಪಾತ್ರ ಇಲ್ಲ ಎಂದು ಮೊದಲ ಪ್ರತಿವಾದಿಯಾಗಿರುವ ಕೆಆರ್‌ಡಿಸಿಎಲ್‌ ಹೇಳಿದೆ. ಮರಗಳ ಕಡಿತಲೆಗೆ ಕಾರಣವಾದ ವ್ಯಕ್ತಿ ಅಥವಾ ಪ್ರಾಧಿಕಾರಗಳನ್ನು ಪತ್ತೆಹಚ್ಚಲು ಸರ್ಕಾರ ತನಿಖೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದ ವಿಭಾಗೀಯ ಪೀಠ, ಜೂನ್‌ 7ಕ್ಕೆ ವಿಚಾರಣೆ ಮುಂದೂಡಿತು.

ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ 2006 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಪ್ರಕಾರ ಸೂಕ್ತ ಅನುಮತಿ ಪಡೆಯದೇ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಶಿಫಾರಸು ಇಲ್ಲದೇ ಮರಗಳನ್ನು ಕಡಿಯಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಕೆಆರ್‌ಡಿಸಿಎಲ್‌ ಜಿಲ್ಲಾ ಮುಖ್ಯ ರಸ್ತೆಗಳು, ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಜೋಡಣೆ ಹೆಸರಿನಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ. ರೈಲ್ವೆ ಮೇಲ್ಸೇತುವೆ, ರೈಲ್ವೆ ಕೆಳ ಸೇತುವೆಗಳು, ಗ್ರೇಡ್‌ ಸಪರೇಟರ್‌ಗಳನ್ನೂ ನಿರ್ಮಿಸಲಾಗುತ್ತಿದೆ. ಕಾನೂನಿನ ಪರಿಧಿಯಿಂದ ತಪ್ಪಿಸಿಕೊಳ್ಳಲು ಯೋಜನೆಯನ್ನು ಹತ್ತು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT