ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ವಿರುದ್ಧ ಪ್ರಕರಣದ ವಿಚಾರಣೆ: ಸಿಬಿಐ–ನ್ಯಾಯಪೀಠದ ಜಟಾಪಟಿ

ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ವಿಚಾರಣೆ
Last Updated 24 ಮಾರ್ಚ್ 2023, 20:44 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಸಿಬಿಐ ನಿಲುವಿಗೆ ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಕೆಂಡಾಮಂಡಲವಾದರೆ, ಅಷ್ಟೇ ಖಡಕ್ಕಾಗಿ ಸಿಬಿಐ ತನ್ನ ನಿಲುವನ್ನು ನ್ಯಾಯಪೀಠಕ್ಕೆ ಅರುಹುವ ಮೂಲಕ ಬಿಸಿ ಬಿಸಿ ವಾದಕ್ಕೆ ಸಾಕ್ಷಿಯಾಯಿತು.

ಸಿಬಿಐ ತನಿಖೆ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿ
ಯನ್ನು, ‘ಶಾಸಕರು–ಸಂಸದರ ವಿರು
ದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆ ನಡೆಸುವ ಹೈಕೋರ್ಟ್‌ನ ವಿಶೇಷ ನ್ಯಾಯ
ಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರಕರಣದ ಈ ಹಿಂದಿನ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ಎಚ್.ಜಾಧವ್‌, ‘ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿರುವ ಆದೇಶವನ್ನು ಪ್ರಶ್ನಿಸಲಾದ ಮತ್ತೊಂದು ಅರ್ಜಿ ಬೇರೆ ನ್ಯಾಯಪೀಠದಲ್ಲಿದೆ. ಅದನ್ನೂ ಇದೇ ಪೀಠಕ್ಕೆ ತರಿಸಿಕೊಂಡು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಕೋರಿದ್ದರು. ಈ ಮನವಿಗೆ ನ್ಯಾಯಮೂರ್ತಿ ನಟರಾಜನ್‌ ಸಹಮತ ವ್ಯಕ್ತಪಡಿಸಿದ್ದರು.

ಶುಕ್ರವಾರದ ವಿಚಾರಣೆ ವೇಳೆ ಬೇರೊಂದು ನ್ಯಾಯಪೀಠದಲ್ಲಿನ ಅರ್ಜಿಯ ಪರವಾಗಿ ಹಿರಿಯ ವಕೀಲ ಉದಯ ಹೊಳ್ಳ ಹಾಜರಾಗಿ, ‘ಇನ್ನೂ ಆ ಪೀಠದಿಂದ ಅರ್ಜಿಯನ್ನು ಇಲ್ಲಿಗೆ ವರ್ಗಾವಣೆ ಮಾಡಿಲ್ಲ’ ಎಂಬ ಅಂಶವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

‘ಯಾಕೆ’ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ, ‘ಸಿಬಿಐ ಅದಕ್ಕೆ ಆಸ್ಪದ ಕೊಡುತ್ತಿಲ್ಲ’ ಎಂದು ಆಕ್ಷೇಪಿಸಿದರು. ಈ ಮಾತಿಗೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು ಪ್ರಶ್ನಿಸಿದ ನ್ಯಾಯ
ಮೂರ್ತಿಗಳು, ‘ಯಾಕೆ ನೀವು ಅದನ್ನು ಇಲ್ಲಿಗೆ ವರ್ಗಾಯಿಸಲು ಮೆಮೊ ಸಲ್ಲಿಸಿಲ್ಲ’ ಎಂದು ಕೇಳಿದರು.

ಇದಕ್ಕೆ ಪ್ರಸನ್ನಕುಮಾರ್, ‘ಅದು ಸಿಬಿಐ ಕೆಲಸವಲ್ಲ. ಅರ್ಜಿದಾರರ ಕೋರಿಕೆ. ಅಷ್ಟಕ್ಕೂ, ಇದೇ ನ್ಯಾಯಪೀಠಕ್ಕೆ ಬರಬೇಕು ಎಂಬ ಬಗ್ಗೆ ಯಾವುದೇ ನ್ಯಾಯಾಂಗದ ಆದೇಶವಿಲ್ಲ. ಅಂತೆಯೇ, ವಿಭಾಗೀಯ ನ್ಯಾಯಪೀಠವು ಅರ್ಜಿದಾರರ ಸಂಬಂಧಿಯೊಬ್ಬರು ಸಲ್ಲಿಸಿದ್ದ ಇದೇ ತಳಹದಿಯ ಮನವಿಯನ್ನು ತಳ್ಳಿ ಹಾಕಿ‌ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿಹಿಡಿದಿತ್ತು. ಹೀಗಿರುವಾಗ ಶಿವಕುಮಾರ್ ಪುನಃ ಇದೇ ಪ್ರಾರ್ಥನೆ ಅಡಿಯಲ್ಲಿ ಸಲ್ಲಿರುವ ಅರ್ಜಿಯು ಇದೇ ನ್ಯಾಯಪೀಠಕ್ಕೆ ಬರಬೇಕು ಎಂದು ತಾವು ಹೇಗೆ ಹೇಳುತ್ತೀರಿ. ಇದನ್ನು ನಿರ್ಧರಿಸುವವರು ರೋಸ್ಟರ್‌ನ ಮಾಸ್ಟರ್ ಚೀಫ್‌ ಜಸ್ಟೀಸ್‌ ಅಲ್ಲವೇ’ ಎಂದು ಅಸಮಾಧಾನ ಹೊರಹಾಕಿದರು.

ಇದಕ್ಕೆ ಗರಂ ಆದ ನ್ಯಾಯಪೀಠ, ‘ಏನು ನೀವು ಹೇಳುತ್ತಿರುವುದು, ನಾನು ಆವತ್ತು ಮೌಖಿಕವಾಗಿ ನೀಡಿದ ನಿರ್ದೇಶನವನ್ನು ನೀವು ಪಾಲಿಸುವುದಿಲ್ಲವೇ, ಅದೇನು ಆದೇಶವಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡಿತು. ಈ ಮಾತಿಗೆ ಅಷ್ಟೇ ಗಟ್ಟಿಯಾದ ನಿಲುವಿನಲ್ಲಿ ಉತ್ತರಿಸಿದ ಪ್ರಸನ್ನಕುಮಾರ್, ‘ಸ್ವಾಮಿ, ಈ ನ್ಯಾಯಪೀಠಕ್ಕೆ ಆ ಅರ್ಜಿ ಬರಬಾರದು ಎಂಬ ಬಗ್ಗೆ ಸಿಬಿಐ ಅಭ್ಯಂತರವೇನೂ ಇಲ್ಲ. ಬೇಕಾದರೆ ತಾವು ಇದೇ ನ್ಯಾಯಪೀಠಕ್ಕೆ ಬರಬೇಕು ಎಂಬ ಬಗ್ಗೆ ಲಿಖಿತ ಆದೇಶ ಮಾಡಿ’ ಎಂದರು.

ನಂತರ ನ್ಯಾಯಪೀಠವು, ಸಮಾ ಧಾನವಾಗಿ ಆದೇಶ ಬರೆಯಿಸಿ, ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿತು. ಅಂತೆಯೇ, ಸಿಬಿಐ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

ಪ್ರಕರಣವೇನು?: ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. ‘ಸಿಬಿಐ ದಾಖಲಿಸಿರುವ ಈ ಎಫ್‌ಐಆರ್‌ ಕಾನೂನು ಬಾಹಿರವಾಗಿದ್ದು ಇದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಶಿವಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಸಿಬಿಐ ತನಿಖೆಗೆ ಹೈಕೋರ್ಟ್‌ 2023ರ ಫೆಬ್ರುವರಿ 10ರಂದು ಮಧ್ಯಂತರ ತಡೆ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT