ಸೋಮವಾರ, ಜೂನ್ 14, 2021
22 °C
ಮುಖ್ಯಮಂತ್ರಿ ಮನೆ ಮತ್ತು ವಿಧಾನಸೌಧದ ಮುಂದೆ ಸೋಂಕಿತರ ಕುಟುಂಬ

ವೈಫಲ್ಯಕ್ಕೆ ಕನ್ನಡಿ: ಮನಕಲಕುವ ಘಟನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕ ಸಿಗದೇ ಪರಿಸ್ಥಿತಿ ಬಿಗಡಾಯಿಸಿರುವ ಹೊತ್ತಿನಲ್ಲಿ ರೋಗಿಗಳ ಕುಟುಂಬದ ಆಕ್ರೋಶದ ಬಿಸಿ ನೇರವಾಗಿ ಮುಖ್ಯಮಂತ್ರಿ ಮತ್ತು ಆಡಳಿತದ ‘ಶಕ್ತಿ ಕೇಂದ್ರ’ ವಿಧಾನಸೌಧಕ್ಕೆ ತಟ್ಟುವ ಎರಡು ಘಟನೆಗಳು ಗುರುವಾರ ನಡೆದವು.

‘ಬೆಂಗಳೂರಿನಲ್ಲಿ ಹಾಸಿಗೆ ಬ್ಲಾಕ್ ದಂಧೆ ಬಯಲಿಗೆಳೆದಿದ್ದೇವೆ’ ಎಂದು ಬಿಜೆಪಿಯ ಸಂಸದರು, ಶಾಸಕರೇ ಬೀಗುತ್ತಿದ್ದರೂ ಬಡವರಿಗೆ ಹಾಸಿಗೆ ಸಿಗುತ್ತಿಲ್ಲ ಎಂಬುದಕ್ಕೆ ಇವು ಸಾಕ್ಷಿಯಾದವು. ಸರ್ಕಾರದ ವೈಫಲ್ಯಕ್ಕೆ ಇದು ಕನ್ನಡಿ ಎಂಬ ಟೀಕೆಯೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಯಿತು.

ಹಾಸಿಗೆ ಸಿಕ್ಕಿತು– ಪ್ರಾಣ ಹೋಯಿತು: ರಾಮೋಹಳ್ಳಿಯ ಸತೀಶ್‌ ಅವರು ಎರಡು ದಿನಗಳಿಂದ ಯಾವುದೇ ಆಸ್ಪತ್ರೆಯಲ್ಲಿ ಹಾಸಿಗೆ, ವೆಂಟಿಲೇಟರ್‌ ಸಿಕ್ಕಿರಲಿಲ್ಲ. ಕಂಗಾಲಾದ ಅವರ ಪತ್ನಿ ಆಂಬುಲೆನ್ಸ್‌ ಸಮೇತ ಗುರುವಾರ ಬೆಳಿಗ್ಗೆ 8 ಗಂಟೆಗೇ ಮುಖ್ಯಮಂತ್ರಿಯವರ ನಿವಾಸ ಕಾವೇರಿ ಮುಂದೆ ಬಂದು ಧರಣಿ ಕುಳಿತರು. ಆಂಬುಲೆನ್ಸ್‌ನಲ್ಲಿ ಪತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೆ, ಪತ್ನಿ ಕಣ್ಣೀರು ಹಾಕುತ್ತಿದ್ದರು.

ಆರಂಭದಲ್ಲಿ ಪೊಲೀಸರು ಮಹಿಳೆಯನ್ನು ಸಾಗಹಾಕಲು ಯತ್ನಿಸಿದರು. ಆದರೆ, ಮಾಧ್ಯಮಗಳ ಮಧ್ಯಪ್ರವೇಶದಿಂದ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಬಳಿ ಅಳಲು ತೋಡಿಕೊಳ್ಳಲು ಅವಕಾಶ ಕಲ್ಪಿಸುವ ಸ್ಥಿತಿ ಪೊಲೀಸರದ್ದಾಯಿತು. ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿದರು.

ಇವರು ‘ಕಾವೇರಿ’ಗೆ ಬರುವ ಮೊದಲು ಬಿಜಿಎಸ್‌ ಮತ್ತು ರಾಜರಾಜೇಶ್ವರಿ ಆಸ್ಪತ್ರೆಗಳ ಕದವನ್ನು ತಟ್ಟಿ ಬಂದಿದ್ದರು. ಆದರೆ, ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿತು ಎಂಬ ನೆಮ್ಮದಿ ಹೆಚ್ಚು ಉಳಿಯಲಿಲ್ಲ. ಆಸ್ಪತ್ರೆಗೆ ತಲುಪುವ ಮೊದಲೇ ರೋಗಿ ಮೃತಪಟ್ಟಿದ್ದರು. 

ವಿಧಾನಸೌಧದ ಮುಂದೆಯೇ ಆಂಬುಲೆನ್ಸ್ ನಿಲ್ಲಿಸಿ ಪ್ರತಿಭಟನೆ: ಹೊಸಕೋಟೆಯ ಮಹಿಳೆಯೊಬ್ಬರಿಗೆ ಬೆಂಗಳೂರಿನಲ್ಲಿ ಹಾಸಿಗೆ ಸಿಗದೇ, ಅವರ ಕುಟುಂಬದವರು ಮಹಿಳೆ ಇದ್ದ ಆಂಬುಲೆನ್ಸ್‌ ಅನ್ನು ವಿಧಾನಸೌಧದ ಎದುರು ನಿಲ್ಲಿಸಿ ಪ್ರತಿಭಟನೆಗೆ ಮುಂದಾದರು.

‘ಎರಡು ದಿನ ಅಲೆದಾಡಿದರೂ ಹಾಸಿಗೆ ಸಿಗಲಿಲ್ಲ. ಇಲ್ಲಿಗೆ ತಂದಿದ್ದೇವೆ. ಹಾಸಿಗೆ ಕೊಡಿಸುವ ಜವಾಬ್ದಾರಿ ಸರ್ಕಾರದ್ದು’ ಎಂದು ಸೋಂಕಿತ ಮಹಿಳೆಯ ಸಂಬಂಧಿಕರು ಸುದ್ದಿಗಾರರಿಗೆ ಹೇಳಿದರು. ‘ಇಲ್ಲಿ ನಿಲ್ಲಿಸಿದರೆ ಪ್ರಯೋಜನ ಇಲ್ಲ, ತಕ್ಷಣ ಆಸ್ಪತ್ರೆಗೆ ಒಯ್ಯಿರಿ, ಅಲ್ಲಿ ಆಮ್ಲಜನಕ ನೀಡುತ್ತಾರೆ. ಇಲ್ಲಿ ನಿಲ್ಲಿಸಿಕೊಂಡರೆ ಪ್ರಾಣಕ್ಕೆ ಅಪಾಯವಾಗಬಹುದು’ ಎಂದು ಪೊಲೀಸರು ತಿಳಿಹೇಳಿದರು. ಆದರೆ ಕುಟುಂಬದವರು ಅಲ್ಲಿಂದ ಕದಲಲಿಲ್ಲ.

ಆ ವೇಳೆಗೆ ಅಲ್ಲಿಗೆ ಬಂದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು‌ ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಇಲ್ಲಿ ರೋಗಿಯ ಆಂಬುಲೆನ್ಸ್‌ ನಿಲ್ಲಿಸಿದರೆ ತಪ್ಪೇನು? ನಿಲ್ಲಿಸಬಾರದು ಎಂಬ ಕಾನೂನು ಇದೆಯೇ’ ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದರು.

‘ಆಕ್ಸಿಜನ್‌ ಆಂಬುಲೆನ್ಸ್‌ ಬರುತ್ತಿದೆ, ಅಲ್ಲಿವರೆಗೆ ರೋಗಿ ಇಲ್ಲೇ ಇರಲಿ’ ಎಂದು ಕಾರ್ಯಕರ್ತ ವಾದಿಸಿದರು. ‘ನೋಡಿ ನಮ್ಮನ್ನು ಇಲ್ಲಿಂದ ಸಾಗಹಾಕಲು ನೋಡುತ್ತಿದ್ದಾರೆ’ ಎಂದು ಆ ವ್ಯಕ್ತಿ ಪೊಲೀಸ್ ಅಧಿಕಾರಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ.

ಕೆಲವೇ ನಿಮಿಷಗಳಲ್ಲಿ ‘ಕಾಂಗ್ರೆಸ್‌ ಕೇರ್ಸ್‌’ನ ಆಕ್ಸಿಜನ್‌ ಹೊಂದಿದ ಆಂಬುಲೆನ್ಸ್ ಅಲ್ಲಿಗೆ ಬಂದಿತು. ಮಹಿಳೆಯನ್ನು ಸ್ಥಳಾಂತರಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಒಯ್ಯಲು ಪೊಲೀಸರು ಸೂಚಿಸಿದರು. ‘ಅಲ್ಲಿ ಹಾಸಿಗೆ ಸಿಗದೇ ಮಹಿಳೆ ಸತ್ತರೆ ಸರ್ಕಾರವೇ ಹೊಣೆ’ ಎಂದು ಕಾರ್ಯಕರ್ತ ಹೇಳಿದರು. ಯುವ ಕಾಂಗ್ರೆಸ್‌ ನಾಯಕ ಮೊಹಮ್ಮದ್ ನಳಪಾಡ್ ಭೇಟಿ ನೀಡಿ ಪೊಲೀಸರ ಜತೆ ವಾಗ್ವಾದ
ನಡೆಸಿದರು.

ಸಿ.ಎಂ ಮನೆ ಮುಂದಿನ ರಸ್ತೆ ಬಂದ್‌:

ಕೋವಿಡ್‌ ರೋಗಿಗಳನ್ನು ಆಂಬುಲೆನ್ಸ್‌ ಮೂಲಕ ಮುಖ್ಯಮಂತ್ರಿ ನಿವಾಸ ‘ಕಾವೇರಿ’ ಮತ್ತು ಗೃಹ ಕಚೇರಿ ‘ಕೃಷ್ಣಾ’ದ ಮುಂದೆ ತಂದು ನಿಲ್ಲಿಸಿ ಧರಣಿ ಮತ್ತು ಪ್ರತಿಭಟನೆ ನಡೆಸುವ ಪ್ರಕರಣಗಳು ಹೆಚ್ಚಬಹುದು ಎಂಬ ಕಾರಣಕ್ಕೆ ಎರಡೂ ಕಡೆ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಇನ್ನು ಮುಂದೆ ಈ ರಸ್ತೆಗಳಲ್ಲಿ ವಾಹನಗಳು ಮತ್ತು ಸಾರ್ವಜನಿಕರ ಓಡಾಟಕ್ಕೆ ಅವಕಾಶವಿಲ್ಲ. ಬ್ಯಾರಿಕೇಡ್‌ಗಳನ್ನೂ ಅಳವಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು