ಜಲ ಸಂರಕ್ಷಣೆಗೆ ಉದ್ಯೋಗ ಖಾತರಿ: ಕೆ.ಎಸ್. ಈಶ್ವರಪ್ಪ

ಬೆಂಗಳೂರು: ಪ್ರಸಕ್ತ ವರ್ಷ ಮಳೆ ನೀರು ಸಂಗ್ರಹಿಸುವುದಕ್ಕೆ ಪೂರಕವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿ 1.47 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರಕಟಿಸಿರುವ ‘ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ನೀತಿ, ಕಾರ್ಯತಂತ್ರ ಮತ್ತು ಮಾದರಿ ಉಪ ವಿಧಿಗಳು’ ಹಾಗೂ ‘ಸ್ವಚ್ಛ ಸಂಕೀರ್ಣ ಮತ್ತು ಸ್ವಚ್ಛತೆ’ ಕೈಪಿಡಿಗಳನ್ನು ವಿಧಾನಸೌಧದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಲಶಕ್ತಿ ಅಭಿಯಾನಕ್ಕೆ ಪೂರಕವಾಗಿ ಉದ್ಯೋಗ ಖಾತರಿ ಯೋಜನೆಯನ್ನೂ ಅನುಷ್ಠಾನ ಮಾಡಲಾಗುತ್ತಿದೆ. ಕೆರೆ ಅಭಿವೃದ್ಧಿ, ಕಲ್ಯಾಣಿ ಪುನಶ್ಚೇತನ, ಮಳೆ ನೀರು ಸಂಗ್ರಹ ರಚನೆಗಳು, ಚೆಕ್ ಡ್ಯಾಂ, ಕೊಳವೆ ಬಾವಿಗಳ ಪುನಶ್ಚೇತನ, ಅರಣ್ಯೀಕರಣ, ಕೃಷಿ ಹೊಂಡ, ಬದು ಮತ್ತು ತೆರೆದ ಬಾವಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಏಪ್ರಿಲ್ 1ರಿಂದ ಆರಂಭವಾಗಿರುವ 100 ದಿನಗಳ ಈ ಕಾರ್ಯಕ್ರಮ ಯಶಸ್ಚಿಯಾಗಿ ನಡೆಯುತ್ತಿದೆ. ಪ್ರಸಕ್ತ ವರ್ಷ ಉದ್ಯೋಗ ಖಾತರಿ ಯೋಜನೆಯಡಿ 1,544.45 ಕೋಟಿ ವೆಚ್ಚ ಮಾಡಲಾಗಿದೆ. ಜಲ ಮತ್ತು ನೈಸರ್ಗಿಕ ಸಂಪನ್ಮೂಲಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 13 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ. ಈವರೆಗೆ 4.49 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 18.68 ಲಕ್ಷ ಕುಟುಂಬಗಳಿಗೆ ಕೂಲಿ ನೀಡಲಾಗಿದೆ ಎಂದು ವಿವರಿಸಿದರು.
ತಲಾ ಎರಡು ಸಸಿ: ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ತಲಾ ಎರಡು ಸಸಿಗಳನ್ನು ನೆಟ್ಟು, ಪೋಷಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಂಬಂಧ ಇಲಾಖೆಗೆ ಒಪ್ಪಂದದ ಪತ್ರವನ್ನು ಸಲ್ಲಿಸಿದ್ದಾರೆ. ಈ ಯೋಜನೆ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಈಶ್ವರಪ್ಪ ಹೇಳಿದರು.
ಕೋವಿಡ್ ನಿಯಂತ್ರಣದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗಣನೀಯ ಕೆಲಸಗಳನ್ನು ಮಾಡಿದೆ. ಕೋವಿಡ್ ನಿಯಂತ್ರಣ, ಜನರಿಗೆ ನೆರವು ಒದಗಿಸುವುದರ ಜತ್ತೆಯಲ್ಲೇ ಸಂಕಷ್ಟದಲ್ಲಿರುವ ಜನರಿಗೆ ಉದ್ಯೋಗ ಖಾತರಿ ಮೂಲಕ ಆರ್ಥಿಕ ಬಲ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.