ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಯುಸಿಎಂಎಸ್‌: ಕಾಲೇಜಿಗೆ ಗೈರಾದರೂ ಶೇ 75 ಹಾಜರಾತಿ!

ಏಕೀಕೃತ ನಿರ್ವಹಣಾ ವ್ಯವಸ್ಥೆಯ ಫಲ
Last Updated 5 ಅಕ್ಟೋಬರ್ 2022, 20:57 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಜಾರಿಗೆ ತಂದ ‘ವಿಶ್ವವಿದ್ಯಾಲಯ, ಪದವಿ ಕಾಲೇಜುಗಳ ಏಕೀಕೃತ ನಿರ್ವಹಣಾ ವ್ಯವಸ್ಥೆ’ಯ (ಯುಯುಸಿಎಂಎಸ್‌) ಫಲವಾಗಿ ತರಗತಿಗಳಿಗೆ ಸತತ ಗೈರಾಗುವ ವಿದ್ಯಾರ್ಥಿಗಳಿಗೂ ಶೇ 75ರಷ್ಟು ಹಾಜರಾತಿ ಭಾಗ್ಯ ಲಭಿಸುತ್ತಿದೆ.

ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್‌ ಪರೀಕ್ಷೆಗೆ ಕುಳಿತುಕೊಳ್ಳುವ ಅರ್ಹತೆ ಪಡೆಯಲು ಆಯಾ ಅವಧಿಯಲ್ಲಿ ನಡೆಯುವ ಶೇ 75ರಷ್ಟು ತರಗತಿಗಳಿಗೆ ಹಾಜರಾಗುವುದು ಕಡ್ಡಾಯ. ಆದರೆ, ಪದವಿ ಕಾಲೇಜುಗಳಲ್ಲಿ ಪೂರ್ಣ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ತುಂಬ ವಿರಳ. ತಮಗೆ ಕಷ್ಟವೆನಿಸುವ, ಆಸಕ್ತಿ ಮೂಡಿಸುವ ಪ್ರಾಧ್ಯಾಪಕರ ತರಗತಿಗಳಿಗಷ್ಟೇ ವಿದ್ಯಾರ್ಥಿಗಳು ಒಲವು ತೋರುತ್ತಾರೆ. ಹಾಗಾಗಿ, ಹಾಜರಾತಿ ಅತ್ಯಂತ ಕಡಿಮೆ ಇರುತ್ತದೆ ಎನ್ನುವುದು ಕಾಲೇಜು ಆಡಳಿತ ಮಂಡಳಿಗಳ ವಾದ.

ಯುಯುಸಿಎಂಎಸ್‌ ಪೋರ್ಟಲ್‌ ಜಾರಿಗೂ ಮೊದಲು ಶೇ 75ರಷ್ಟು ಹಾಜರಾತಿ ಕಡ್ಡಾಯವಿದ್ದರೂ, ವಿದ್ಯಾರ್ಥಿಗಳ ಆಸಕ್ತಿ, ಹಿನ್ನೆಲೆ, ನಡವಳಿಕೆ, ಕಲಿಕಾ ಮಟ್ಟವನ್ನು ಗಮನಿಸಿ, ಪರೀಕ್ಷೆಗೆ ಹಾಲ್‌ ಟಿಕೆಟ್‌ ನೀಡುವ ಅಥವಾ ನೀಡದಿರುವ ನಿರ್ಧಾರವನ್ನು ಆಯಾ ಕಾಲೇಜುಗಳೇ ತೆಗೆದುಕೊಳ್ಳುತ್ತಿದ್ದವು. ಮುಂದಿನ ಸೆಮಿಸ್ಟರ್‌ಗೆ ಕಡ್ಡಾಯವಾಗಿ ಹಾಜರಾಗಬೇಕು ಎನ್ನುವ ಷರತ್ತುಗಳನ್ನು ವಿಧಿಸಿ, ಪರೀಕ್ಷೆಗೆ ಅವಕಾಶ ನೀಡಲಾಗುತ್ತಿತ್ತು. ಯುಯುಸಿಎಂಎಸ್‌ ಜಾರಿಗೆ ಬಂದ ನಂತರ ಅಂತಹ ಅವಕಾಶ ಇಲ್ಲವಾಗಿದೆ ಎನ್ನುತ್ತಾರೆ ಬೆಂಗಳೂರಿನ ಪ್ರಮುಖ ಖಾಸಗಿ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥರು.

‘ಪ್ರತಿ ಸೆಮಿಸ್ಟರ್‌ನಲ್ಲೂ ಶೇ 40 ಆಂತರಿಕ ಅಂಕಗಳನ್ನು ನಿಗದಿ ಮಾಡಲಾಗಿದೆ. ಎರಡು ಕಿರು ಪರೀಕ್ಷೆಗಳಿಂದ 20, ಅಸೈನ್‌ಮೆಂಟ್‌, ಸೆಮಿನಾರ್‌ಗಳಿಗೆ ತಲಾ 10 ಅಂಕಗಳನ್ನು ನೀಡುತ್ತಿದ್ದೇವೆ. ಉಳಿದ 60 ಅಂಕಗಳಿಗೆ ಪರೀಕ್ಷೆ ಬರೆಯಬೇಕು.ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ಹಾಜರಾತಿ ನಮೂದಿಸದೇ ಆಂತರಿಕ ಅಂಕ
ಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ತರಗತಿಗಳಿಗೆ ಗೈರಾದವರಿಗೂ ಶೇ 75 ಹಾಜರಾತಿ ನೀಡುತ್ತಿದ್ದೇವೆ. ಇಲ್ಲದಿದ್ದರೆ
ಶೇ 20ರಷ್ಟು ವಿದ್ಯಾರ್ಥಿಗಳೂ ಪರೀಕ್ಷೆಗೆ ಅರ್ಹರಾಗುವುದಿಲ್ಲ’ ಎಂದು ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದರು.

ಹಲವು ವಿಷಯಗಳ ವಿಭಾಗಗಳು ವಿದ್ಯಾರ್ಥಿಗಳಿಲ್ಲದೇ ಬಾಗಿಲು ಮುಚ್ಚುವ ಸ್ಥಿತಿಯಲ್ಲಿವೆ. ಹಾಜರಾತಿ ನೀಡಿದೆ ಇದ್ದರೆ ಕಾಲೇಜು ನಡೆಸುವುದೇ ಕಷ್ಟ ಎನ್ನುವ ಆತಂಕ ವ್ಯಕ್ತಪಡಿಸಿದರು.

ಪ್ರಾಧ್ಯಾಪಕರ ಬಳಿ ಎಲ್‌ಎಂಎಸ್‌ ಐಡಿ

ಕಾಲೇಜು ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಕಲಿಕಾ ನಿರ್ವಾಹಣಾ ವ್ಯವಸ್ಥೆ ಬೋಧನೆ, ಕಲಿಕೆಗೆ ಉತ್ತೇಜನ ನೀಡಿದರೂ, ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ.

ಸಾಕಷ್ಟು ಹಣ ಖರ್ಚು ಮಾಡಿ ಅಳವಡಿಸಿದ ಈ ಎಲ್‌ಎಂಎಸ್‌ ಅನ್ನು ಗರಿಷ್ಠಮಟ್ಟದಲ್ಲಿ ಬಳಸದ ಕಾಲೇಜುಗಳ ಪ್ರಾಂಶುಪಾಲರು,ಪ್ರಾಧ್ಯಾಪಕರನ್ನು ಹೊಣೆ ಮಾಡುವುದಾಗಿ ಈಚೆಗೆ ಆಯುಕ್ತರು ಎಚ್ಚರಿಸಿದ ನಂತರ ಪ್ರಾಧ್ಯಾಪಕರೇ ಎಲ್ಲ ವಿದ್ಯಾರ್ಥಿಗಳ ಐಡಿ, ಪಾಸ್‌ವರ್ಡ್‌ತಮ್ಮ ಬಳಿ ಇಟ್ಟುಕೊಂಡು ನಿತ್ಯವೂ ಲಾಗಿನ್‌ ಆಗುತ್ತಿದ್ದಾರೆ. ಎಲ್ಲರೂಬಳಕೆ ಮಾಡುತ್ತಿದ್ದಾರೆ ಎಂದು ಇಲಾಖೆಗೆ ಲೆಕ್ಕ ತೋರಿಸುತ್ತಿದ್ದಾರೆ. ಈ
ಕುರಿತು ಹಲವು ಅಧ್ಯಾಪಕರು ‘ಪ್ರಜಾವಾಣಿ’ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

3,800

ಯುಯುಸಿಎಂಎಸ್‌ ಬಳಸುವ ಕಾಲೇಜುಗಳು

15.21 ಲಕ್ಷ

ಹೊಸಪೋರ್ಟಲ್‌ನಲ್ಲಿ ನಮೂದಾದ ವಿದ್ಯಾರ್ಥಿಗಳು

18,340

ಯುಯುಸಿಎಂಎಸ್‌ ನಿರ್ವಹಣೆ ಮಾಡುವ ಪ್ರಾಧ್ಯಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT