ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ: ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ ಸಂದರ್ಶನ

70 ದಿನ ಪೂರೈಸಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಧರಣಿ: ಸರ್ಕಾರಕ್ಕೆ ಎಚ್ಚರಿಕೆ l ಹೋರಾಟಕ್ಕೆ ಮಠಾಧೀಶರ ಬೆಂಬಲ
Last Updated 20 ಏಪ್ರಿಲ್ 2022, 21:40 IST
ಅಕ್ಷರ ಗಾತ್ರ

l ಧರಣಿ ಇನ್ನೂ ಎಷ್ಟು ದಿನ?

ಸ್ವಾಮೀಜಿ: ‘ಮೀಸಲಾತಿ ನೀಡುವ ವಿಷಯದಲ್ಲಿ ಸರ್ಕಾರ ದೃಢ ತೀರ್ಮಾನ ಕೈಗೊಂಡು ಆದೇಶದ ಪ್ರತಿ ಹೊರಡಿಸುವವರೆಗೂ ಧರಣಿ ಸತ್ಯಾಗ್ರಹ ನಡೆಸಲಾಗುವುದು. ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

l ಅಗತ್ಯಬಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸಮುದಾಯದ ಶಾಸಕರು, ಸಚಿವರು ಹಲವು ಬಾರಿ ಹೇಳಿಕೆ ನೀಡಿದ್ದಾರೆ. ನಿಜವಾಗಿಯೂ ಅವರಿಗೆ ಬದ್ಧತೆ ಇದೆಯೇ?

ಸ್ವಾಮೀಜಿ: ರಾಜೀನಾಮೆ ಎನ್ನುವುದು ಕೇವಲ ರಾಜಕೀಯ ಗಿಮಿಕ್‌. ರಾಜಕಾರಣಿಗಳು ಸಾಮಾಜಿಕ ಬದ್ಧತೆ ತೋರಿಸುತ್ತಿಲ್ಲ. ಸಭೆ, ಸಮಾರಂಭಗಳಲ್ಲಿ ಮಾತ್ರ ಭಾವೋದ್ವೇಗದಿಂದ ರಾಜೀನಾಮೆ ನೀಡುವ ಹೇಳಿಕೆ ನೀಡುತ್ತಾರೆ. ನಂತರ, ಮೌನವಹಿಸುತ್ತಾರೆ.

l ಸರ್ಕಾರ ವಿಳಂಬ ಧೋರಣೆ ಮುಂದುವರಿಸಿದರೆ ನಿಮ್ಮ ನಿಲುವು?

ಸ್ವಾಮೀಜಿ:‘ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು’. ಇದೇ ಧೋರಣೆ ಅನುಸರಿಸುತ್ತೇವೆ. ಇದೇ ಸೂತ್ರದಲ್ಲಿ ಹೋರಾಟ ರೂಪಿಸುತ್ತೇವೆ. ಬೆಂಗಳೂರಿಗೆ ಅಷ್ಟದಿಗ್ಬಂಧನ ಹಾಕಲು ಸಿದ್ಧ. ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ ಮತ್ತು ಪರಿಶಿಷ್ಟರ ಬಗ್ಗೆ ಇರುವ ಅಸಡ್ಡೆಯಿಂದಾಗಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಯಾವ ಸಮುದಾಯವು ನಮಗೆ ಮೀಸಲಾತಿ ಕೊಡಬೇಡಿ ಎಂದು ಹೇಳಿಲ್ಲ. ಎಲ್ಲ ಸಮುದಾಯಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಎಲ್ಲ ಮಠಾಧೀಶರು ಧರಣಿಗೆ ಬೆಂಬಲ ಸೂಚಿಸಿದ್ದಾರೆ. ಧರಣಿ ಸತ್ಯಾಗ್ರಹಕ್ಕೆ ಸುಮಾರು 90 ಹಾಲಿ ಮತ್ತು ಮಾಜಿ ಶಾಸಕರು ಬೆಂಬಲ ಸೂಚಿಸಿದ್ದಾರೆ.

l ಸದನ ಸಮಿತಿ ರಚನೆ ಮತ್ತು ನ್ಯಾಯಮೂರ್ತಿ ಸುಭಾಷ್ ಅಡಿ ಆಯೋಗ ರಚನೆಗೆ ಆಕ್ಷೇಪ ಏಕೆ?

ಸ್ವಾಮೀಜಿ: ಸದನ ಸಮಿತಿ ರಚಿಸುವ ಅಗತ್ಯವೇ ಇರಲಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪರಾಮರ್ಶೆ ಮಾಡಲು ರಾಜ್ಯ ಸರ್ಕಾರ ಈಗ ನ್ಯಾಯಮೂರ್ತಿ ಸುಭಾಷ್ ಅಡಿ ಆಯೋಗವನ್ನು ರಚಿಸಿದೆ. ವಿಳಂಬ ಮಾಡಲು ಇಂತಹ ಕ್ರಮಗಳನ್ನು ಅನುಸರಿಸುತ್ತಿದೆ. ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ವಿನಾಕಾರಣ ಇತರೆ ಸಮುದಾಯದ ಸಮಸ್ಯೆಗಳ ಜತೆಗೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎನ್ನುವುದು ನಮ್ಮ ಬೇಡಿಕೆ.

l ಸರ್ಕಾರ ನಿಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲವೇ?

ಸ್ವಾಮೀಜಿ: ರಾಜ್ಯ ಸರ್ಕಾರ ಕಾಲಹರಣಕ್ಕಾಗಿ ಸಭೆಗಳನ್ನು ಮಾಡುತ್ತಿದೆ. ಇಂದಿಗೂ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಆದರೆ, ಸಮುದಾಯ ಈಗ ಜಾಗೃತಗೊಳ್ಳುತ್ತಿದೆ. ಮನೆ, ಮನೆಗೂ ಸಂದೇಶ ತಲುಪಿಸುತ್ತಿದ್ದೇವೆ. ಸಮುದಾಯದ ಪ್ರಭಾವಿ ಸಚಿವರು ಮತ್ತು ಶಾಸಕರು ಮೀಸಲಾತಿಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಮಾತಿಗೆ ಮನ್ನಣೆ ಸಿಗುತ್ತಿಲ್ಲ. ಮುಖ್ಯಮಂತ್ರಿ ಅವರ ಪ್ರತಿನಿಧಿಯಾಗಿ ಸಚಿವ ಗೋವಿಂದ ಕಾರಜೋಳ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಈಡೇರಿಸಲು 15 ದಿನಗಳ ಸಮಯಾವಕಾಶ ಕೇಳಿದ್ದರು. 20 ದಿನ ಕಳೆದರೂ ಯಾವುದೇ ನಿರ್ಧಾರವನ್ನೂ ಪ್ರಕಟಿಸಿಲ್ಲ.

2020ರ ಫೆ.9ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ನ್ಯಾಯ ಮೂರ್ತಿ ನಾಗಮೋಹನದಾಸ್‌ ಅವರು ವರದಿ ನೀಡಿದ ತಕ್ಷಣವೇ ಮೀಸಲಾತಿ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ವರದಿ ನೀಡಿ ಒಂದು ವರ್ಷ ಹತ್ತು ತಿಂಗಳಾದರೂ ಯಾವುದೇ ರೀತಿ ಕ್ರಮಕೈಗೊಂಡಿಲ್ಲ. ಇವು ಸರ್ಕಾರದ ಧೋರಣೆಗೆ ಸಾಕ್ಷಿ.

l ಮೀಸಲಾತಿ ಪ್ರಮಾಣಶೇ50ರಷ್ಟು ಮೀರಬಾರದು ಎನ್ನುವ ಸುಪ್ರೀಂ ಕೋರ್ಟ್‌ ತೀರ್ಪು ಮೀಸಲಾತಿ ಹೆಚ್ಚಳಕ್ಕೆ ಅಡ್ಡಿಯಾಗುವುದಿಲ್ಲವೇ?

ಸ್ವಾಮೀಜಿ: ಇಂದ್ರಾ ಸಹಾನಿ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಉಲ್ಲೇಖಗಳಿವೆ.ಸಮಾಜದ ಕಟ್ಟಕಡೆಯ ಸಮುದಾಯಗಳಿಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎನ್ನುವುದು ಪುಟ 810ರಲ್ಲಿದೆ. ವಿಶೇಷ ಸಂದರ್ಭಗಳನ್ನು ಪರಿಗಣಿಸಬೇಕು ಎಂದು ಹೇಳಲಾಗಿದೆ. ಆದರೆ, ಕೆಲವು ಪಟ್ಟಭದ್ರರು ಈ ಅಂಶವನ್ನು ಮುಚ್ಚಿಡುತ್ತಿದ್ದಾರೆ.

ಸಂದರ್ಶನ– ಸಚ್ಚಿದಾನಂದ ಕುರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT