ಮಂಗಳವಾರ, ಮಾರ್ಚ್ 21, 2023
23 °C

ಸಾವರ್ಕರ್ ವಿಚಾರದ ಬೆಂಕಿಗೆ ಕಾಂಗ್ರೆಸ್ ಪೆಟ್ರೋಲ್ ಸುರಿಯುತ್ತಿದೆ: ಕುಮಾರಸ್ವಾಮಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್ಸಿಗರು ವೀರ ಸಾವರ್ಕರ್ ವಿಚಾರದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ರಾಜ್ಯದಲ್ಲಿ ಬಿಜೆಪಿ –ಕಾಂಗ್ರೆಸ್‌ನವರು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರು ಶಾಂತ ವಾತಾವರಣವನ್ನು ಕೆಡಿಸಲು ಉದ್ದೇಶದಿಂದಲೇ ವೀರ ವೀರ ಸಾವರ್ಕರ್ ವಿಚಾರವನ್ನು ಅನಗತ್ಯವಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ಸಿಗರು ಈ ವಿಚಾರಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಆರಂಭವಾದ ಸಾವರ್ಕರ್‌ ಭಾವಚಿತ್ರ ವಿವಾದ ಇದೀಗ ರಾಜ್ಯದಾದ್ಯಂತ ಹಬ್ಬಿದೆ. ಕಾಂಗ್ರೆಸ್‌, ಬಿಜೆಪಿ ಮುಖಂಡರ ಪ್ರತಿಭಟನೆ, ಮುತ್ತಿಗೆ ಘಟನೆಗಳು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿವೆ. 

ಸಾವರ್ಕರ್‌ ಭಾವಚಿತ್ರ ತೆರವು ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಪ್ರವಾಹ ಪರಿಸ್ಥಿತಿ ಅವಲೋಕಿಸಲು ಕೊಡಗಿ ತೆರಳಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಜತೆಗೆ ಅವರ ಕಾರಿನ ಮೇಲೆ ಕೋಳಿ ಮೊಟ್ಟೆ ಎಸದು ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದರು.

ಕಪ್ಪು ಬಾವುಟ ಪ್ರದರ್ಶನ ಮತ್ತು ಮೊಟ್ಟೆ ಎಸೆತವನ್ನು ಖಂಡಿಸಿದ್ದ ಕಾಂಗ್ರೆಸ್‌, ಆ.26ರಂದು ಕೊಡಗಿನ ಎಸ್ಪಿ ಕಚೇರಿ ಎದುರು  'ಮಡಿಕೇರಿ ಚಲೊ' ಪ್ರತಿಭಟನೆ ನಡೆಸಲು ತೀರ್ಮಾನಿಸಿತ್ತು. 

ಕೊಡಗು: ನಾಳೆಯಿಂದ 4 ದಿನ ನಿಷೇಧಾಜ್ಞೆ
ಕೊಡಗು ಜಿಲ್ಲೆಯಲ್ಲಿ ಇದೇ 24ರ ಬೆಳಿಗ್ಗೆ 6 ಗಂಟೆಯಿಂದ 27ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೋಮವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಪ್ರತಿಭಟನೆ, ಜಾಥಾ, ಮೆರವಣಿಗೆ, ಕಪ್ಪುಬಾವುಟ ಪ್ರದರ್ಶನ ನಿಷೇಧಿಸಲಾಗಿದೆ. ಐವರು ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗಿದೆ.

ಈ ಮೂಲಕ ಆ.26ರಂದು ಕಾಂಗ್ರೆಸ್ ಕರೆ ನೀಡಿದ್ದ ‘ಮಡಿಕೇರಿ ಚಲೋ’ ಹಾಗೂ ಬಿಜೆಪಿ ಆಯೋಜಿಸಿದ್ದ ‘ಜನಜಾಗೃತಿ ಸಮಾವೇಶ’ಗಳಿಗೆ ಅನುಮತಿ ನಿರಾಕರಿಸಲಾಗಿದೆ.

ಓದಿ... ನಿಷೇಧಾಜ್ಞೆಯಿಂದಾಗಿ 'ಮಡಿಕೇರಿ ಚಲೊ' ಮುಂದೂಡಿಕೆ: ಎಚ್.ಸಿ.ಮಹದೇವಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು