ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿ ನೀತಿ: ಇನ್ನೂ ಸಜ್ಜಾಗಿಲ್ಲ ಸರ್ಕಾರ, 2022ರ ಏ.1ರಿಂದ ಜಾರಿಯಾಗಬೇಕಿದೆ ನೀತಿ

ಎಫ್‌ಎಎಫ್‌ಟಿಸಿ ಸ್ಥಾಪನೆಗೆ ನಡೆದಿಲ್ಲ ಸಿದ್ಧತೆ
Last Updated 24 ಡಿಸೆಂಬರ್ 2021, 20:33 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳ ಗುಜರಿ ನೀತಿಯು 2022ರ ಏಪ್ರಿಲ್‌ 1ರಿಂದ ರಾಷ್ಟ್ರದಾದ್ಯಂತ ಜಾರಿಗೆ ಬರಬೇಕಿದೆ. ಕೇಂದ್ರ ಸರ್ಕಾರ 2021ರ ಬಜೆಟ್‌ನಲ್ಲೇ ಈ ನೀತಿಯನ್ನು ಘೋಷಿಸಿದೆ. ಆದರೆ, ಅದರ ಅನುಷ್ಠಾನಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆಯನ್ನುಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನೂ ಪೂರ್ಣಗೊಳಿಸಿಲ್ಲ. ಇದು ವಾಹನ ಮಾಲೀಕರನ್ನು ಗೊಂದಲಕ್ಕೆ ಎಡೆಮಾಡಿದೆ.

2021ರ ಬಜೆಟ್‌ನಲ್ಲಿ ಗುಜರಿ ನೀತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಈ ನೀತಿ ಜಾರಿ ಸಂಬಂಧ ನಿಮಯಗಳನ್ನು ರೂಪಿಸಿ ಸೆಪ್ಟಂಬರ್ 23 ಮತ್ತು ಅಕ್ಟೋಬರ್ 4ರಂದು ಎರಡು ಅಧಿಸೂಚನೆಗಳನ್ನು ಹೊರಡಿಸಿದೆ. ಆದರೆ ಎರಡೂ ಸರ್ಕಾರಗಳು ನೀತಿ ಜಾರಿಯ ಸಿದ್ಧತೆಯ ಹಂತದಲ್ಲೇ ಇದ್ದು, ಏಪ್ರಿಲ್‌ನಿಂದ ಜಾರಿಗೊಳಿಸುವ ಬಗ್ಗೆ ಅಧಿಕಾರಿಗಳೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್ ಅರ್ಜಿ, ಏಕಗವಾಕ್ಷಿ ವ್ಯವಸ್ಥೆ: ಗುಜರಿ ನೀತಿ ಜಾರಿಗೆ ಬಂದ ಬಳಿಕ 15 ವರ್ಷ ಮೀರಿದ ಎಲ್ಲಾ ರೀತಿಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಿ, ಸವಲತ್ತು ಪಡೆಯಲು ಇಚ್ಛಿಸುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲು ತಯಾರಿ ನಡೆದಿದೆ.

‘ಅದಕ್ಕೆ ಬೇಕಿರುವ ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದರೆ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅನುಮತಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿಲ್ಲ. ಜನ ಕಚೇರಿಗಳಿಗೆ ಅಲೆದಾಡುವುದೂ ತಪ್ಪಲಿದೆ’ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘2022ರ ಏಪ್ರಿಲ್‌ 1ರಿಂದಲೇ ಗುಜರಿ ನೀತಿ ಜಾರಿಗೆ ಬರಲಿದೆ ಎಂದು ಈಗಲೇ ಹೇಳಲಾಗದು. ಇದಕ್ಕೆ ಸಾಕಷ್ಟು ಪೂರ್ವ ತಯಾರಿಯ ಅಗತ್ಯ ಇದೆ. ನೀತಿಯನ್ನು ಏಕಾಏಕಿ ಕಾರ್ಯರೂಪಕ್ಕೆ ತರುವುದು ಕಷ್ಟ’ ಎಂದರು.

15 ವರ್ಷ ಮೀರಿದ ವಾಹನಗಳನ್ನು ಹಸಿರು ತೆರಿಗೆ ಪಾವತಿಸಿ ಬಳಸಲು ನೀತಿಯಲ್ಲಿ ಅವಕಾಶ ಇದೆ. ವಾಹನಗಳು ಸುಸ್ಥಿತಿಯಲ್ಲಿ ಇವೆಯೇ ಎಂಬುದನ್ನು ತಪಾಸಣೆಗೆ ಒಳಪಡಿಸಲು ಸಂಪೂರ್ಣ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳನ್ನು(ಎಫ್‌ಎಎಫ್‌ಟಿಸಿ) ಅಲ್ಲಲ್ಲಿ ಸ್ಥಾಪಿಸಬೇಕಿದೆ. ಈ ಬಗ್ಗೆ ಇನ್ನೂ ತಯಾರಿಯೇ ನಡೆದಿಲ್ಲ. ಈ ಕೇಂದ್ರಗಳು ರಾಜ್ಯದಲ್ಲಿ ಎಲ್ಲೆಲ್ಲಿ ತಲೆ ಎತ್ತಲಿವೆ ಎಂಬ ಬಗ್ಗೆ ರಾಜ್ಯದ ಸಾರಿಗೆ ಇಲಾಖೆಗೇ ಇನ್ನೂ ಸ್ಪಷ್ಟತೆ ಇಲ್ಲ.

ಎಫ್‌ಸಿ ಪಡೆಯದಿದ್ದರೆ ದಿನಕ್ಕೆ ₹50 ದಂಡ
ಈ ನೀತಿ ಜಾರಿಗೆ ಬಂದ ಬಳಿಕ 15 ವರ್ಷಗಳಿಗಿಂತ ಹಳೆಯದಾದ ವಾಹನಗಳು ಪ್ರತಿವರ್ಷ ಎಫ್‌.ಸಿ ಪಡೆಯದೇ ರಸ್ತೆಯಲ್ಲಿ ಸಂಚರಿಸಲು ಅವಕಾಶ ಇಲ್ಲ.ಒಂದು ವೇಳೆ ಸಂಚರಿಸಿ, ಸಿಕ್ಕಿಬಿದ್ದರೆ ದಿನಕ್ಕೆ ₹ 50ರಂತೆ ದಂಡ ಕಟ್ಟಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT