ಭಾನುವಾರ, ಜೂನ್ 26, 2022
26 °C
ಬಿಜೆಪಿ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಆಯ್ಕೆಯ ಅಭ್ಯರ್ಥಿಗಳಿಗೆ ಟಿಕೆಟ್‌

ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಬಿಎಸ್‌ವೈ ‘ವಿಜಯ’ಕ್ಕೆ ‘ಸಂತೋಷ’ ವಿಘ್ನ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಪರಿಷತ್‌ನ ಏಳು ಸ್ಥಾನಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ಗಳು ಪ್ರಾಬಲ್ಯ ಮೆರೆದಿವೆ.

ಸ್ಥಳೀಯ ನಾಯಕರ ಶಿಫಾರಸುಗಳಿಗೆ ಮಣೆ ಹಾಕದೇ ತಮ್ಮ ವಿವೇಚನೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಈ ಬಾರಿಯ ವಿಶೇಷ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿ.ಎಸ್‌.ಯಡಿಯೂರಪ್ಪ ಅವರ ‘ಪ್ರಭಾವ’ ಮತ್ತು ‘ಹಿಡಿತ’ವನ್ನು ತಗ್ಗಿಸುವ ಪ್ರಯತ್ನ ನಡೆಸುತ್ತಲೇ ಬಂದಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಈ ಹಿಂದೆ ರಾಜ್ಯಸಭೆ ಚುನಾವಣೆ ವೇಳೆಯೂ ಯಡಿಯೂರಪ್ಪ ಅವರ ಆಯ್ಕೆಗಳನ್ನು ತಿರಸ್ಕರಿಸಿದ್ದರು. ಈ ಬಾರಿಯೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಂತೋಷ್‌ ಅವರೇ ಮೇಲುಗೈ ಸಾಧಿಸಿದ್ದಾರೆ. 

ಬಿ.ಎಸ್‌ .ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲಿ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರು ಸೇರಿಸುವಲ್ಲಿ ಯಶಸ್ವಿಯಾಗಿದ್ದರೂ, ವರಿಷ್ಠರು ನಿರ್ದಾಕ್ಷಿಣ್ಯವಾಗಿ ಅವರ ಹೆಸರು ಕೈಬಿಟ್ಟಿದ್ದಾರೆ.

ಅದೇ ರೀತಿ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಶಿಫಾರಸು ಮಾಡಿದ್ದ ಹೆಸರುಗಳನ್ನು ಗಣನೆಗೆ ತೆಗೆದುಕೊಳ್ಳದೇ ಅಳೆದೂ ತೂಗಿ ಕೆ.ಅಬ್ದುಲ್‌ ಜಬ್ಬಾರ್‌ ಮತ್ತು ನಾಗರಾಜು ಯಾದವ್‌ ಅವರನ್ನು ಆಯ್ಕೆ ಮಾಡಿದೆ.

ಜೆಡಿಎಸ್‌ನಲ್ಲಿ ಟಿ.ಎ.ಶರವಣ ಅವರ ಹೆಸರನ್ನು ಖುದ್ದು ಎಚ್‌.ಡಿ. ದೇವೇಗೌಡ ಅವರೇ ಶಿಫಾರಸು ಮಾಡಿದ್ದಾರೆ.

ವಿಜಯೇಂದ್ರ ವೇಗಕ್ಕೆ ಕಡಿವಾಣ: ವಿಧಾನಪರಿಷತ್‌ಗೆ ಆಯ್ಕೆ ಆಗಿ ಸಚಿವರಾಗಬೇಕು ಎಂಬ ಕನಸು ಕಾಣುತ್ತಿದ್ದ ಬಿ.ವೈ.ವಿಜಯೇಂದ್ರ ಅವರ ವೇಗಕ್ಕೆ ಬಿಜೆಪಿ ವರಿಷ್ಠರು ಕಡಿವಾಣ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು, ವಿಜಯೇಂದ್ರ ಅವರಿಗೆ ಟಿಕೆಟ್‌ ನಿರಾಕರಿಸಲು ಇದೇ ಮುಖ್ಯ ಕಾರಣ ಎಂದು ಬಿಜೆಪಿಯ ಕೆಲವು ನಾಯಕರು ಪ್ರತಿ‍ಪಾದಿಸಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯ ಇರುವವರಿಗೆ ವಿಧಾನಪರಿಷತ್‌ಗೆ ಕಳುಹಿಸುವ ಅಗತ್ಯವಿಲ್ಲ ಎಂಬುದಾಗಿ ವರಿಷ್ಠರು ನಿಲುವು ತಳೆದಿದ್ದಾರೆ ಎಂದೂ ಬಿಜೆಪಿ ಮೂಲಗಳು ಹೇಳಿವೆ.

ಯಡಿಯೂರಪ್ಪ ಅವರು ಪುತ್ರನ ಹೆಸರು ಪಟ್ಟಿಯಲ್ಲಿ ಸೇರಿಸಲು ಒತ್ತಡ ಹೇರಿದಾಗ ಬೊಮ್ಮಾಯಿ ಈ ವಿಷಯವನ್ನು ವರಿಷ್ಠರ ಗಮನಕ್ಕೆ ತಂದಿದ್ದರು. ಪಟ್ಟಿಯಲ್ಲಿ ಸೇರಿಸಿ ಉಳಿದದ್ದು ನಮಗೆ ಬಿಡಿ ಎಂಬ ಸೂಚನೆ ನೀಡಿದ್ದರು. ಆದರೆ, ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬ ವಿಷಯವನ್ನು ಕೆಲವು ದಿನಗಳ ಹಿಂದೆಯೇ ಅವರ ಗಮನಕ್ಕೆ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಥಣಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರಿಗೆ ಎರಡನೇ ಬಾರಿ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಗುತ್ತಿದೆ. ಹಿಂದೆ ಉಪಮುಖ್ಯಮಂತ್ರಿಯನ್ನೂ ಮಾಡಲಾಗಿತ್ತು. ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ ಸವದಿ ಅವರನ್ನು ಆಯ್ಕೆ ಮಾಡಿದರೆ ಮುಂಬರುವ ವಿಧಾನಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂಬ ಲೆಕ್ಕಾಚಾರವಿದೆ.

ಉಳಿದಂತೆ ಸಂಘಟನೆಗೆ ದುಡಿದ ಎಸ್. ಕೇಶವ ಪ್ರಸಾದ್(ನೇಕಾರ), ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ (ಬಲಗೈ) ಮತ್ತು ಪಕ್ಷದ ಕಾರ್ಯದರ್ಶಿ ಹೇಮಲತಾ ನಾಯಕ್ (ವಾಲ್ಮೀಕಿ) ಅವರ ಆಯ್ಕೆ ಪಕ್ಷದ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗಿದ್ದಾಗ ಕಚೇರಿ ಕಾರ್ಯದರ್ಶಿ ಸ್ಥಾನದಿಂದ ಕೇಶವ ಪ್ರಸಾದ್‌ ಅವರನ್ನು ಉಚ್ಚಾಟಿಸಲಾಗಿತ್ತು. ಇವರು ಸಂತೋಷ್‌ ಬಣದಲ್ಲಿ ಗುರುತಿಸಿಕೊಂಡಿದ್ದರು. ಮಂಜುಳಾ ಅವರ ಹೆಸರು ಕೊನೆಯವರೆಗೂ ಪಟ್ಟಿಯಲ್ಲಿತ್ತು. ಅಂತಿಮ ಕ್ಷಣದಲ್ಲಿ ಹೇಮಲತಾ ನಾಯಕ್‌ ಅವರ ಹೆಸರನ್ನು ಸೇರ್ಪಡೆ ಮಾಡಲಾಯಿತು.

ಬಿಜೆಪಿ ಪರ ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಗಟ್ಟಿಯಾಗಿ ನಿಂತಿದ್ದು, ಬಲಗೈ ಸಮುದಾಯದ ವಿಶ್ವಾಸ ಪಡೆಯಲು ನಾರಾಯಣಸ್ವಾಮಿ ಆಯ್ಕೆ ಅನುಕೂಲ ಆಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದು.

ಕಾಂಗ್ರೆಸ್‌ನಲ್ಲಿ ಖರ್ಗೆ ಮಾತಿಗೆ ಮಣೆ: ಕಾಂಗ್ರೆಸ್‌ನಲ್ಲಿ ಕೆ.ಅಬ್ದುಲ್‌ ಜಬ್ಬಾರ್‌, ನಾಗರಾಜು ಯಾದವ್‌ ಅವರ ಆಯ್ಕೆಯಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವ ನಡೆದಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕ್ರೈಸ್ತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಐವನ್‌ ಡಿಸೋಜಾ ಹೆಸರು ಸೂಚಿಸಿದ್ದರು. ಹಿಂದುಳಿದ ವರ್ಗದಿಂದ ಎಂ.ಆರ್‌.ಸೀತಾರಾಂ ಅವರ ಹೆಸರನ್ನೂ ಸೂಚಿಸಿದ್ದರು. ಆದರೆ, ಡಿ.ಕೆ.ಶಿವಕುಮಾರ್‌ ಅವರು ಕ್ರೈಸ್ತರ ಅಭ್ಯರ್ಥಿ ಬದಲು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಒಲವು ತೋರಿದ್ದರು. ರಾಜ್ಯದಲ್ಲಿ ಎಸ್‌ಡಿಪಿಐ ಪ್ರಭಾವ ತಗ್ಗಿಸಲು ಇದರಿಂದ ಅನುಕೂಲವಾಗುತ್ತದೆ ಎಂಬ ವಾದ ಮಂಡಿಸಿದ್ದರು. ಲಿಂಗಾಯತ ಸಮುದಾಯದ ಎಸ್‌.ಆರ್‌.ಪಾಟೀಲ ಅವರ ಹೆಸರನ್ನೂ ಮುಂದಿಟ್ಟಿದ್ದರೂ ಹೈಕಮಾಂಡ್‌ ಇಬ್ಬರ ಶಿಫಾರಸನ್ನು ತಿರಸ್ಕರಿಸಿ, ಖರ್ಗೆಯವರ ಸಲಹೆಯನ್ನು ಪರಿಗಣಿಸಿದೆ. ಜೆಡಿಎಸ್‌ನಲ್ಲಿ ಟಿ.ಎ.ಶರವಣ ಅವರ ಆಯ್ಕೆಯನ್ನು ಎಚ್‌.ಡಿ.ದೇವೇಗೌಡ ಅಂತಿಮಗೊಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಬೆಂಗಾವಲು ವಾಹನ!
ಬಿಜೆಪಿ ಅಭ್ಯರ್ಥಿ ಹೇಮಲತಾ ನಾಯಕ್‌ ಅವರು ನಾಮಪತ್ರ ಸಲ್ಲಿಸಲು ಸಮಯಾವಕಾಶ ಮೀರಲಿದೆ ಎಂಬ ಕಾರಣಕ್ಕೆ ವಿಧಾನಸೌಧದವರೆಗೆ ಪೊಲೀಸ್‌ ಬೆಂಗಾವಲು ನೀಡಲಾಯಿತು.

ಕೊನೆ ಕ್ಷಣದಲ್ಲಿ ಟಿಕೆಟ್‌ ಸಿಕ್ಕಿದ್ದರಿಂದ ನಾಮಪತ್ರ ಸಲ್ಲಿಸಲು ತಡವಾಗುತ್ತದೆ ಎಂಬ ಕಾರಣಕ್ಕೆ ಕೊಪ್ಪಳದಿಂದ ಅವರು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನ ಜಕ್ಕೂರು ಏರೋಡ್ರಂಗೆ ಬಂದರು. ಪಕ್ಷದ ವತಿಯಿಂದಲೇ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹೇಮಲತಾ, ‘ನನ್ನ ಪಕ್ಷ ನಿಷ್ಠೆ ಮತ್ತು ವಾಲ್ಮೀಕಿ ಸಮುದಾಯದ ಮಹಿಳೆಯನ್ನು ಪರಿಗಣಿಸಿ ಪಕ್ಷ ಈ ಅವಕಾಶ ನೀಡಿದೆ. ನಾನು ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಬೆಳಿಗ್ಗೆ ಈ ವಿಷಯ ಗೊತ್ತಾಯಿತು. ನಾಮಪತ್ರ ಸಲ್ಲಿಕೆಗೆ ತಡವಾಗಬಹುದು ಎಂಬ ಕಾರಣಕ್ಕೆ ಪಕ್ಷದಿಂದ ಬೆಂಗಾವಲು ವಾಹನ ಸೌಲಭ್ಯ ಒದಗಿಸಲಾಗಿತ್ತು‌‌‌‌’ ಎಂದರು.

ಅವಿರೋಧ ಆಯ್ಕೆ ಖಚಿತ
ವಿಧಾನಸಭೆಯಿಂದ ವಿಧಾನಪರಿಷತ್‌ನ ಒಟ್ಟು ಏಳು ಸ್ಥಾನಗಳಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ ನಾಲ್ವರು, ಕಾಂಗ್ರೆಸ್ಸಿನಿಂದ ಇಬ್ಬರು, ಜೆಡಿಎಸ್‌ನಿಂದ ಒಬ್ಬ ಅಭ್ಯರ್ಥಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ, ಎಸ್‌.ಕೇಶವಪ್ರಸಾದ್‌, ಹೇಮಲತಾ ನಾಯಕ್‌, ಕಾಂಗ್ರೆಸ್‌ನಿಂದ ಅಬ್ದುಲ್‌ ಜಬ್ಬಾರ್‌, ನಾಗರಾಜು ಯಾದವ್‌, ಜೆಡಿಎಸ್‌ನ ಟಿ.ಎ.ಶರವಣ ಅವರು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಪಕ್ಷಗಳ ಬಲಾಬಲ ಆಧಾರದಲ್ಲಿ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು, ಜೆಡಿಎಸ್ ಒಂದು ಸ್ಥಾನ ಗೆಲ್ಲುವುದು ಖಚಿತವಾಗಿದ್ದು, ಎಲ್ಲ ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗುವುದು ನಿಶ್ಚಿತವಾಗಿದೆ. ನಾಮಪತ್ರಗಳ ಪರಿಶೀಲ
ನೆ ಬುಧವಾರ ನಡೆಯಲಿದ್ದು, ಹಿಂತೆಗೆದುಕೊಳ್ಳಲು ಇದೇ 27 ಕೊನೆ ದಿನ.

ಹೊರಟ್ಟಿ ನಾಮಪತ್ರ ಸಲ್ಲಿಕೆ
ಧಾರವಾಡ:
ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಸವರಾಜ ಹೊರಟ್ಟಿ ತಮ್ಮ ಅದೃಷ್ಟದ ಅಂಬಾಸೆಡರ್ ಕಾರಿನಲ್ಲಿ ಬಂದು ಮಂಗಳವಾರ ನಾಮಪತ್ರ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು