ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಗಿಂತ ಹಿರಿದಾಯ್ತು ವಿಜಯನಗರ ಜಿಲ್ಲೆ!

ಬಂದ್‌ ಮಾರನೇ ದಿನವೇ ತಾಲ್ಲೂಕುಗಳನ್ನು ಪುನರ್ ವಿಂಗಡಿಸಿದ ಸರ್ಕಾರ
Last Updated 27 ನವೆಂಬರ್ 2020, 18:49 IST
ಅಕ್ಷರ ಗಾತ್ರ

ಬಳ್ಳಾರಿ/ಹೊಸಪೇಟೆ: ಜಿಲ್ಲೆಯ ವಿಭಜನೆಯ ವಿರುದ್ಧ ಅಖಂಡ ಬಳ್ಳಾರಿ ಹೋರಾಟ ಸಮಿತಿಯು ಗುರುವಾರ ‘ಬಳ್ಳಾರಿ ಬಂದ್‌’ ನಡೆಸಿದ ಮಾರನೇ ದಿನವೇ ರಾಜ್ಯ ಸಚಿವ ಸಂಪುಟವು ವಿಭಜಿತ ಬಳ್ಳಾರಿ ಜಿಲ್ಲೆ ಹಾಗೂ ಹೊಸ ವಿಜಯನಗರ ಜಿಲ್ಲೆಗೆ ಸೇರಬೇಕಾದ ತಾಲ್ಲೂಕುಗಳ ಪಟ್ಟಿಗೆ ಅನುಮೋದನೆ ನೀಡಿದೆ. ಎರಡೂ ಜಿಲ್ಲೆಗಳ ನಕಾಶೆಯೂ ಸಿದ್ಧವಾಗಿದೆ.

ಈ ಪಟ್ಟಿಯ ಪ್ರಕಾರ ಹೊಸ ಜಿಲ್ಲೆಯು ಹಳೆಯ ಜಿಲ್ಲೆಗಿಂತ ಗಾತ್ರ ಮತ್ತು ವಿಸ್ತಾರದಲ್ಲಿ ಬೃಹತ್ತಾಗಿ ಮಾರ್ಪ ಟ್ಟಿದೆ. ನೂತನ ವಿಜಯನಗರ ಜಿಲ್ಲೆಗೆ ಆರು ತಾಲ್ಲೂಕುಗಳು, ಬಳ್ಳಾರಿ ಜಿಲ್ಲೆಗೆ ಐದು ತಾಲ್ಲೂಕುಗಳು ನಿಗದಿಯಾಗಿವೆ. ಹೊಸಪೇಟೆಯು ಹೊಸ ಜಿಲ್ಲಾ ಕೇಂದ್ರವಾಗಲಿದೆ.

ಹೊಸಪೇಟೆ ಜೊತೆಗೆ ಪಶ್ಚಿಮ ತಾಲ್ಲೂಕುಗಳಾದ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ವಿಜಯನಗರ ಜಿಲ್ಲೆಗೆ ಸೇರಿದರೆ, ಬಳ್ಳಾರಿ ಜಿಲ್ಲೆಗೆ ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ ಮತ್ತು ಸಂಡೂರು ಸೇರಿಸಲು ನಿರ್ಧರಿಸಲಾಗಿದೆ. ಒಟ್ಟು ಹತ್ತು ವಿಧಾನಸಭೆ ಕ್ಷೇತ್ರಗಳ ಪೈಕಿ ತಲಾ ಐದು ಪ್ರದೇಶಗಳು (ಬಳ್ಳಾರಿ ನಗರ, ಗ್ರಾಮೀಣ, ಕಂಪ್ಲಿ, ಸಂಡೂರು, ಸಿರುಗುಪ್ಪ) ಬಳ್ಳಾರಿ ಮತ್ತು (ವಿಜಯನಗರ, ಹಡಗಲಿ, ಹರಪನ ಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ) ವಿಜಯನಗರಕ್ಕೆ ಸೇರಲಿವೆ.

ಸಂಡೂರು, ಕಂಪ್ಲಿ ಬಳ್ಳಾರಿಗೆ:ಮೊದಲು ಹೊಸಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿದ್ದು, ನಂತರ ತಾಲ್ಲೂಕು ಕೇಂದ್ರವಾದ ಕಂಪ್ಲಿ ಯನ್ನು ವಿಜಯನಗರಕ್ಕೆ ಸೇರಿಸಬೇಕು ಎಂಬ ಬಹುದಿನಗಳ ಆಸೆ, ಆಗ್ರಹ ಈಡೇರಿಲ್ಲ.

ಒಂದೇ ವಿಧಾನಸಭೆ ಕ್ಷೇತ್ರವನ್ನು ಎರಡು ಜಿಲ್ಲೆ ವ್ಯಾಪ್ತಿಯಲ್ಲಿ ವಿಂಗಡಿಸಲು ಕ್ಷೇತ್ರ ಪುನರ್‌ವಿಂಗಡಣೆ ಕಾಯ್ದೆಯಲ್ಲಿ ಅವಕಾಶವಿಲ್ಲದೇ ಇರುವುದರಿಂದ, ಕಂಪ್ಲಿ ಕ್ಷೇತ್ರ ಮತ್ತು ಅದೇ ಕ್ಷೇತ್ರಕ್ಕೆ ಸೇರಿರುವ ಕುರುಗೋಡು ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಯಲ್ಲೇ ಉಳಿಸಲಾಗಿದೆ.

ಅಪಸ್ವರ: ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂದೇ ಕರೆಯಲಾಗುವ ಕಂಪ್ಲಿಯನ್ನು ನೂತನ ಜಿಲ್ಲೆಯಿಂದ ಹೊರಗಿಟ್ಟಿರುವುದಕ್ಕೆ ಅಪಸ್ವರ ಕೇಳಿ ಬಂದಿದೆ. ಹೊಸಪೇಟೆಯು ಬಳ್ಳಾರಿ ಗಿಂತಲೂ ಸಮೀಪವಿರುವುದರಿಂದ, ವಿಜಯನಗರ ಜಿಲ್ಲೆಗೇ ತಮ್ಮನ್ನು ಸೇರಿಸಬೇಕು ಎಂಬ ಸಂಡೂರು ಜನರ ಆಗ್ರಹವೂ ಈಡೇರಿಲ್ಲ.

ಹರಪನಹಳ್ಳಿ ಜಿಲ್ಲಾ ಕೇಂದ್ರ ವಾಗಬೇಕು ಎಂಬ ಆಗ್ರಹವೂ ಉಳಿಯುವಂತಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆಯ ನಿಯಮವು ಲೋಕ ಸಭಾ ಕ್ಷೇತ್ರಕ್ಕೆ ಅನ್ವಯವಾಗದಿರುವುದರಿಂದ ಸಿರುಗುಪ್ಪ ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ, ಹರಪನಹಳ್ಳಿಯು ದಾವಣಗೆರೆ ಕ್ಷೇತ್ರದಲ್ಲೇ ಮುಂದುವರಿಯಲಿವೆ.

ವಿಜಯನಗರ ಸಾಮ್ರಾಜ್ಯಕ್ಕೆ ಕಂಪ್ಲಿ ಮುನ್ನುಡಿ!
ಬಳ್ಳಾರಿ/ಹೊಸಪೇಟೆ:
ಚಾರಿತ್ರಿಕ ಮತ್ತು ಭೌಗೋಳಿಕವಾಗಿ ಕಂಪ್ಲಿ ಹೊಸಪೇಟೆಯೊಂದಿಗೆ ಬೆಸೆದುಕೊಂಡಿದೆ. ವಿಜಯನಗರ ಸಾಮ್ರಾಜ್ಯಕ್ಕೆ ಮುನ್ನುಡಿ ಬರೆದ ಕಂಪೀಲರಾಯನಿಂದಲೇ ಕಂಪ್ಲಿ ಹೆಸರು ಬಂತು. ಕಂಪ್ಲಿ, ಹೊಸಪೇಟೆಗೆ 22 ಕಿ.ಮೀ. ಹತ್ತಿರವಿದೆ. ಬಳ್ಳಾರಿಗೆ 51 ಕಿ.ಮೀ. ದೂರವಿದೆ. ಹೀಗಾಗಿ ಕಂಪ್ಲಿ ವಿಜಯನಗರ ಜಿಲ್ಲೆಗೆ ಸೇರಿಸಬೇಕೆಂದು ಜನ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ.

‘ವಿಜಯನಗರದಲ್ಲಿ ಹಿಂದೂ ಸಾಮ್ರಾಜ್ಯಕ್ಕಾಗಿ ಮೊದಲು ಶ್ರಮಿಸಿದವರು ಕಂಪೀಲರಾಯರು. ನಂತರ ಹೋರಾಟ ಆನೆಗೊಂದಿ, ಹಂಪಿಗೆ ಸ್ಥಳಾಂತರಗೊಂಡಿತು. ಹೊಸಪೇಟೆ, ಹಂಪಿ, ಆನೆಗೊಂದಿ, ಕಮಲಾಪುರ, ಕಂಪ್ಲಿ ವಿಜಯನಗರದ ಭಾಗಗಳು. ಆನೆಗೊಂದಿ ತುಂಗಭದ್ರಾ ನದಿಯಾಚೆಗಿರುವುದರಿಂದ ಕೊಪ್ಪಳಕ್ಕೆ ಸೇರಿದೆ. ಆದರೆ, ಕಂಪ್ಲಿಯನ್ನು ಬಳ್ಳಾರಿಗೆ ಸೇರಿಸಿದರೆ ಚರಿತ್ರೆಗೆ ದ್ರೋಹ ಬಗೆದಂತಾಗುತ್ತದೆ’ ಎಂದು ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಮುಖಂಡ ವೈ. ಯಮುನೇಶ ಹೇಳಿದರು.

**

ವಿಜಯನಗರ ಜಿಲ್ಲೆಯಿಂದ ಕಂಪ್ಲಿ ಹೊರಗಿಟ್ಟಿರುವುದು ರಾಜಕೀಯ ಷಡ್ಯಂತ್ರ. ದೂರವಿರುವ ತಾಲ್ಲೂಕು ಸೇರಿಸಿ, ಹತ್ತಿರದಲ್ಲಿರುವ ಕಂಪ್ಲಿ ಕೈಬಿಟ್ಟಿರುವುದು ಸರಿಯಲ್ಲ.
-ಜೆ.ಎನ್‌. ಗಣೇಶ್‌, ಕಂಪ್ಲಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT