ಬುಧವಾರ, ಮೇ 25, 2022
29 °C
ನೋಟಿಸ್‌ಗೆ 11 ಪುಟಗಳ ಉತ್ತರ: ಬಿಎಸ್‌ವೈ ಕುಟುಂಬ ರಾಜಕಾರಣದ ಬಗ್ಗೆ 45 ಪ್ಯಾರಾ

ಬಿಹಾರದಲ್ಲಿ ಬಿಜೆ‍ಪಿ ಸೋಲಿಸಲು ವಿಜಯೇಂದ್ರ ದುಡ್ಡು: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಿಹಾರದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಜಯೇಂದ್ರ (ಯಡಿಯೂರಪ್ಪ ಪುತ್ರ) ತಮ್ಮ ಆಪ್ತರ ಮೂಲಕ ಹಣ ಕಳುಹಿಸಿದ್ದಾರೆ. ಪ್ರಧಾನಿ ಮೋದಿ ಶಕ್ತಿ ಕುಗ್ಗಿಸಲು ಹಣ ಸಂದಾಯ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಪಾದಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ಆರ್‌ಜೆಡಿ, ಕಾಂಗ್ರೆಸ್‌ಗೆ ವಿಜಯೇಂದ್ರ ಫಂಡಿಂಗ್ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

‘ಪಕ್ಷದಿಂದ ನೋಟಿಸ್ ಬಂದಿರುವುದು ನಿಜ. ಅದಕ್ಕೆ ಹನ್ನೊಂದು ಪುಟಗಳ ಉತ್ತರ ನೀಡಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದೇನೆ’ ಎಂದರು.

‘ಸರ್ಕಾರದಲ್ಲಿ ಕುಟುಂಬದ ಹಸ್ತಕ್ಷೇಪ ಇರಬಾರದು ಎನ್ನುವುದು ನರೇಂದ್ರ ಮೋದಿ ಆಶಯ. ಆದರೆ, ಅವರ ಆಶಯದಂತೆ ಇಲ್ಲಿ ಸರ್ಕಾರ ಇಲ್ಲ' ಎಂದು ಟೀಕಿಸಿದರು.

'ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ 45 ಪ್ಯಾರಾಗಳಲ್ಲಿ ವಿವರಿಸಿದ್ದೇನೆ. ಯಡಿಯೂರಪ್ಪ ಅವರ ಕುಟುಂಬ ಬಿಜೆಪಿ ಶಾಸಕರನ್ನು ಗೌರವಿಸುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬದ ಬಗ್ಗೆಯೂ ತನಿಖೆಗೆ ಒತ್ತಾಯಿಸಿದ್ದೇನೆ’ ಎಂದು ಹೇಳಿದರು.

'ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆ ಬಗ್ಗೆ ತನಿಖೆ ಮಾಡಬೇಕು ಎಂದೂ ಕೋರಿದ್ದೇನೆ. ನೋಟಿಸ್‌ಗೆ ಉತ್ತರ ಕೊಡುವಾಗ ಪತ್ರದಲ್ಲಿ ಎಲ್ಲೂ ಕ್ಷಮೆ ಯಾಚಿಸಿಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ಸಿಡಿ, ಇಡಿ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ.‌ ಮಾರಿಷಸ್ ವಿಚಾರವನ್ನೂ ಬರೆದಿದ್ದೇನೆ. ಮಾರಿಷಸ್‌ಗೆ ಯಾಕೆ ಹೋಗಿದ್ದರು. ಎಷ್ಟು ಮಂದಿ ಹೋಗಿದ್ದರು. ಯಾವ ವಿಮಾನದಲ್ಲಿ ಹೋಗಿದ್ದರು, ಮಾಜಿ ಗೃಹ ಸಚಿವರೊಬ್ಬರ ಆಪ್ತ ಸಹಾಯಕನ ಮೂಲಕ ಮಾರಿಷಸ್‌ಗೆ ಹೋಗಿ ಏನೇನು ತೆಗೆದುಕೊಂಡಿದ್ದಾರೆ ಎಲ್ಲವನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಇದರ ತನಿಖೆ ಮಾಡಲು‌ ಆಗ್ರಹಿಸಿದ್ದೇನೆ’ ಎಂದರು.

ಸಿದ್ದರಾಮಯ್ಯ ವಿರುದ್ದವೂ ಗರಂ: ‘ಸುಪ್ರೀಂ ಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಅಪಚಾರ ಮಾಡಿದ್ದಾರೆ. ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಅವರ ಹೇಳಿಕೆ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲಾಗುವುದು. ಮುಸ್ಲಿಮರ ಮತಗಳಿಗಾಗಿ ಅವರು ಈ ರೀತಿ ಮಾತಾಡುತ್ತಾರೆ’ ಎಂದು ಸಿದ್ದರಾಮಯ್ಯ ವಿರುದ್ದವೂ ಯತ್ನಾಳ ಗರಂ ಆದರು.

ಯತ್ನಾಳರಿಂದ ಸುಳ್ಳು ಆರೋಪ: ಅರುಣ್‌ ಸಿಂಗ್‌
ಬೆಂಗಳೂರು: ‘ಬಸನಗೌಡ ಪಾಟೀಲ ಯತ್ನಾಳ ಹಲವು ವರ್ಷಗಳಿಂದ ಇದೇ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿಯಾಗಲು ಅವರು ಮಾಡುತ್ತಿರುವ ಆರೋಪಗಳಿಗೆ ಹೆಚ್ಚಿನ ಬೆಲೆ ನೀಡಬೇಕಿಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಯತ್ನಾಳರ ಆರೋಪಗಳಲ್ಲಿ ಹುರುಳಿಲ್ಲ. 16 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. 2,000 ಶಾಸಕರಿದ್ದಾರೆ. ಮಾಧ್ಯಮಗಳು ಒಬ್ಬ ಶಾಸಕನಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುವ ಅಗತ್ಯವೇನು’ ಎಂದು ಪ್ರಶ್ನಿಸಿದರು.

‘ಯತ್ನಾಳ ಅವರಿಗೆ ಪಕ್ಷದ ಶಿಸ್ತು ಸಮಿತಿ ಈಗಾಗಲೇ ನೋಟಿಸ್‌ ನೀಡಿದೆ. ಉತ್ತರ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಬಿ.ವೈ. ವಿಜಯೇಂದ್ರ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ. ಅವರನ್ನು ಬೆಂಬಲಿಸುವುದರಲ್ಲಿ ತಪ್ಪೇನೂ ಇಲ್ಲ. ಶಾಸಕ, ಮುಖಂಡ, ಕಾರ್ಯಕರ್ತ ಎಲ್ಲರೂ ಪಕ್ಷಕ್ಕೆ ಮುಖ್ಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು