ಭಾನುವಾರ, ನವೆಂಬರ್ 1, 2020
19 °C
ಅಲ್ಪಸಂಖ್ಯಾತ ಆಯೋಗದ ವರದಿ ಮಂಡನೆ

ವಕ್ಫ್‌ ಅಕ್ರಮ: ‘ಕೈ’ ನಾಯಕರತ್ತ ಬೊಟ್ಟು, ₹ 2 ಲಕ್ಷ ಕೋಟಿ ಹಗರಣದ ಬಗ್ಗೆ ಉಲ್ಲೇಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕ್ಫ್‌ ಆಸ್ತಿ ಅಕ್ರಮಕ್ಕೆ ಸಂಬಂಧಿಸಿದ ರಾಜ್ಯ ಅಲ್ಪಸಂಖ್ಯಾತ ಆಯೋಗದ ವಿಶೇಷ ವರದಿಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಗಿದ್ದು, ಈ ಅಕ್ರಮದಲ್ಲಿ ಕಾಂಗ್ರೆಸ್‌ನ ಹಲವು ನಾಯಕರ ಕೈವಾಡ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ನೇತೃತ್ವದ ತಂಡವು 2012ರಲ್ಲಿ ಸಿದ್ಧಪಡಿಸಿರುವ ವಿಶೇಷ ವರದಿಯನ್ನು (ಬೀದರ್‌ ಜಿಲ್ಲೆ ಅಧ್ಯಯನ) ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಂಡಿಸಿದರು. ‘ಇದು ಅವ್ಯವಹಾರದ ಸಣ್ಣ ಗುಟುಕು ಮಾತ್ರ. ಮುಂದಿನ ತನಿಖೆಗಳ ನಂತರ ಬಹಳಷ್ಟು ವಿಚಾರಗಳು ಹೊರಬರಲಿವೆ’ ಎಂದು ಹೇಳಲಾಗಿದೆ.

ರಾಜ್ಯದಾದ್ಯಂತ ವಕ್ಫ್‌ ಮಂಡಳಿ ಸ್ಥಿರಾಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅನ್ವರ್‌ ಮಾಣಿಪ್ಪಾಡಿ 2012ರ ಮಾರ್ಚ್ 26ರಂದು ಅಂದಿನ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದರು. ಸರ್ಕಾರ ಇದನ್ನು ವಿಧಾನಮಂಡಲದಲ್ಲಿ ಮಂಡಿಸಿರಲಿಲ್ಲ.

‘ವರದಿಯನ್ನು 2016ರ ಫೆಬ್ರುವರಿಯಲ್ಲಿ ಮಂಡಿಸಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಇನ್ನೂ ಸಲ್ಲಿಸಿಲ್ಲ’ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಕೆ.ಕಾಂತ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಪ್ರಸಕ್ತ ವಿಧಾನಮಂಡಲ ಅಧಿವೇಶನ, 2019ರ ಸಾಲಿನ ಅಧಿವೇಶನದಲ್ಲಿ ಮಂಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 2019ರಲ್ಲಿ ತಾಕೀತು ಮಾಡಿತ್ತು.

ಕಬಳಿಕೆ: ವರದಿ ಹೇಳುವುದೇನು?
*ಬೀದರ್‌ನ ಫತೇಹುಲ್ಲಾ ಖಾದಿರ್‌ ದಾದಾ ಪೀರ್‌ ದರ್ಗಕ್ಕೆ ಸೇರಿದ 8.36 ಎಕರೆ- ಮಾಜಿ ಸಂಸದ ನರಸಿಂಗ ರಾವ್‌ ಸೂರ್ಯವಂಶಿ.

*ಕಲಬುರ್ಗಿಯ ಬಡೆಪುರ ಹಜರತ್‌ ಖಾಜಾ ಬಂಡೆನವಾಜ್ ದರ್ಗದ 8.38 ಎಕರೆಯಷ್ಟು ಜಮೀನು- ಮಾಜಿ ಶಾಸಕರಾಗಿದ್ದ ದಿವಂಗತ ಖಮರುಲ್‌ ಇಸ್ಲಾಂ.

*ಕಲಬುರ್ಗಿಯ ಬ್ರಹ್ಮಪುರ ಗ್ರಾಮ ಹಜರತ್‌ ಖಾಜಾ ಬಂಡೆ ನವಾಜನ ಗೇಶುದರಾಜ್‌ನ ಜಾಗ- ಇಕ್ಭಾಲ್‌ ಅಹಮದ್‌ ಸರಡಗಿ, ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಸಿ.ಎಂ. ಇಬ್ರಾಹಿಂ, ಸಯ್ಯದ್‌ ಯಾಸಿನ್‌.

*ಬೆಂಗಳೂರಿನ ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ನ 4 ಎಕರೆ ಜಾಗ- ರಾಜ್ಯಸಭೆಯ ಮಾಜಿ ಸದಸ್ಯ ಆರ್‌.ರೆಹಮಾನ್‌ ಖಾನ್‌.

*ಬೆಂಗಳೂರಿನ ಕುಲ್ಸುಂ ಬಿ ಟ್ರಸ್ಟ್‌ನ 7,239 ಚದರ ಅಡಿ ಜಾಗ- ಮಾಜಿ ಶಾಸಕ ಆರ್. ರೋಷನ್‌ ಬೇಗ್‌.

*ಬೆಂಗಳೂರಿನ ಬಿಳೇಹಳ್ಳಿಯ 602 ಎಕರೆಯ ಪೈಕಿ 122 ಎಕರೆಯನ್ನು 50 ಜನರಿಗೆ ಮಂಜೂರು ಮಾಡಲಾಗಿದೆ. ಉಳಿದ ಜಾಗವನ್ನು ಕಾನೂನುಬಾಹಿರವಾಗಿ ವಿಲೇವಾರಿ ಮಾಡಲಾಗಿದೆ- ಮಾಜಿ ಸಂಸದ ದಿವಂಗತ ಸಿ.ಕೆ.ಜಾಫರ್‌ ಷರೀಫ್‌

*ಯಲಹಂಕ ಮುಜಾಫಿರ್‌ ಖಾನಾ ಸುನ್ನಿಯ 3.01 ಎಕರೆ, 2.30 ಎಕರೆ, 4.14 ಎಕರೆ ಮಾರಾಟ- ಶಾಸಕ ಎನ್‌.ಎ. ಹ್ಯಾರಿಸ್‌.

*ಕೊಪ್ಪಳ ಜಿಲ್ಲೆಯ ಗಂಗಾವತಿಯ ಬೇರೂನಿ ಅಬಾದಿ ಮಸ್ಜಿದ್‌ಗೆ ಸೇರಿದ 2.09 ಎಕರೆ- ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ.

ವರದಿಯ ಅಭಿಪ್ರಾಯಗಳು:

*₹410 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿಗಳ ಪೈಕಿ ₹2 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ರಾಜ್ಯ ವಕ್ಫ್‌ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಅತಿಕ್ರಮಣ ಮಾಡಿದ್ದಾರೆ ಅಥವಾ ವಿಲೇವಾರಿ ಮಾಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಬಹಳಷ್ಟು ನಾಯಕರು ವಕ್ಫ್‌ ಆಸ್ತಿಗಳ ದುರುಪಯೋಗದಲ್ಲಿ ಮುಳುಗಿ ಹೋಗಿದ್ದಾರೆ.

*ವಕ್ಫ್‌ ಆಸ್ತಿಗಳ ಮಾಫಿಯಾ ಇದೆ. ಅದಕ್ಕೆ ವಕ್ಫ್‌ ಮಂಡಳಿಯ ಚುಕ್ಕಾಣಿ ಹಿಡಿದಿರುವ ಚುನಾಯಿತ ರಾಜಕೀಯ, ಪ್ರಭಾವಶಾಲಿ ಶ್ರೀಮಂತರ ಬೆಂಬಲವಿದೆ. ಜಿಲ್ಲಾ ಮಟ್ಟದ ವಕ್ಫ್ ಸಲಹಾ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಎಸ್ಟೇಟ್‌ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ.

*ರಾಜ್ಯ ಅಲ್ಪಸಂಖ್ಯಾತ ಆಯೋಗದ ವರದಿಯ ಪ್ರಕಾರ, ರಾಜ್ಯದ ಅತ್ಯಂತ ದೊಡ್ಡ ಹಗರಣ. ಇದು ಈಚೆಗೆ  ದೇಶವನ್ನೇ ನಡುಗಿಸಿದ 2–ಜಿ ಹಗರಣಕ್ಕಿಂತ ಕಡಿಮೆಯೇನಲ್ಲ.

*ವಕ್ಫ್‌ ಮಂಡಳಿಯ ದುರ್ನಡತೆಗಳನ್ನು ಕೂಲಂಕಶವಾಗಿ ತನಿಖೆ ಮಾಡಲು ಲೋಕಾಯುಕ್ತಕ್ಕೆ ವಹಿಸಿಕೊಡಬೇಕು.

*ನಿಷ್ಫಕ್ಷಪಾತ ತನಿಖೆ ನಡೆಸಲು ಕರ್ನಾಟಕ ವಕ್ಫ್‌ ಸಮಿತಿಯನ್ನು 12 ತಿಂಗಳ ಅವಧಿಗೆ ಅಮಾನತ್ತಿನಲ್ಲಿಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು