ಮಂಗಳವಾರ, ಏಪ್ರಿಲ್ 13, 2021
31 °C

ಬೇಸಿಗೆಗೂ ಮುನ್ನವೇ ಬಿಸಿಲ ತಾಪ; ಸಂಜೆಯಾಗುತ್ತಿದ್ದಂತೆ ಸೆಕೆಗೆ ಜನ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಾದ್ಯಂತ ಬೇಸಿಗೆಗೂ ಮುನ್ನವೇ ಒಂದು ವಾರದಿಂದ ತಾಪಮಾನ ಏರುತ್ತಿದೆ. ‘ಕಲಬುರ್ಗಿಯಲ್ಲಿ ಈಗಲೇ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಏಪ್ರಿಲ್‌ ವೇಳೆಗೆ 45 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರುವ ನಿರೀಕ್ಷೆ ಇದೆ’ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

‘ಫೆಬ್ರುವರಿಯಲ್ಲಿ ಮಳೆ ಸುರಿಯುವುದು ವಿರಳ. ಆದರೆ, ಈ ಬಾರಿ ಹವಾವಾನ ವೈಪರೀತ್ಯದಿಂದ ಫೆಬ್ರುವರಿಯಲ್ಲಿ ಅಕಾಲಿಕ ಮಳೆ ಸುರಿಯಿತು. ಇದರ ಪರಿಣಾಮ ಬೇಸಿಗೆಯ ಆರಂಭಕ್ಕೂ ಮುನ್ನವೇ ತಾಪಮಾನ ಏರುತ್ತಿದೆ. ಈ ವಾರದಲ್ಲಿ ಚಳಿ ಮರೆಯಾಗುತ್ತಿದ್ದು, ಒಣಹವೆಯಿಂದ ಸಂಜೆ ವೇಳೆ ದಿಢೀರ್‌ ಸೆಕೆಯೂ ಆರಂಭಗೊಂಡಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಈ ಅವಧಿಯಲ್ಲಿ ಸರಾಸರಿ ತಾಪಮಾನವಿತ್ತು. ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ ಎಂದರೂ 38ರಿಂದ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಆದರೆ, ಈ ಬಾರಿ ಬೇಸಿಗೆಗೆ ಕಾಲಿಡುವ ಮುನ್ನವೇ ಕಲಬುರ್ಗಿಯಲ್ಲಿ ಎರಡು ದಿನಗಳಿಂದ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದೇ ರೀತಿ ತಾಪಮಾನ ಏರಿದರೆ, ರಾಜ್ಯದಲ್ಲಿ ಮುಂದಿನ ವಾರದಲ್ಲಿ ಮಳೆಯಾಗುವ ಲಕ್ಷಣಗಳೂ ಇವೆ’ ಎಂದವರು ಹೇಳಿದರು.

ಎಲ್ಲೆಲ್ಲಿ ಎಷ್ಟು ತಾಪಮಾನ?: ಕಲಬುರ್ಗಿಯಲ್ಲಿ ಸೋಮವಾರ ಗರಿಷ್ಠ 38.6 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 37, ಕೊಪ್ಪಳ 36, ಕಾರವಾರ, ವಿಜಯಪುರ, ಗದಗದಲ್ಲಿ ತಲಾ 35, ದಾವಣಗೆರೆ, ಹಾವೇರಿ, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ತಾಪಮಾನ ದಾಖಲಾಗಿದೆ. ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ತಲಾ 12 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು