ಭಾನುವಾರ, ಏಪ್ರಿಲ್ 2, 2023
33 °C

ಅಧಿವೇಶನದಲ್ಲೇ ಉತ್ತರ ಕೊಡ್ತೇವೆ ಬನ್ನಿ: ಕಾಂಗ್ರೆಸ್, ಜೆಡಿಎಸ್‌ಗೆ ಬಿಜೆಪಿ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಿಮ್ಮ ಪ್ರಶ್ನೆಗಳಿಗೆ, ಆರೋಪಗಳಿಗೆ ಬೆಳಗಾವಿ ಅಧಿವೇಶನದಲ್ಲೇ ಉತ್ತರ ಕೊಡುತ್ತೇವೆ ಬನ್ನಿ’ ಎಂದು ಬಿಜೆಪಿ ನಾಯಕರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರಿಗೆ ಸವಾಲು ಹಾಕಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಮಾವೇಶ
‘ಶಕ್ತಿ ಸಂಗಮ’ ಕಾರ್ಯಕ್ರಮದಲ್ಲಿ ಬಿಜೆಪಿಯ ಮುಖಂಡರು ವಿರೋಧ ಪಕ್ಷಗಳ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇಡೀ ಕಾರ್ಯಕ್ರಮ ಪಕ್ಷದ ಕಾರ್ಯ
ಕರ್ತರ ಬಲಪ್ರದರ್ಶನವಾಗಿ ರೂಪುಗೊಂಡಿತ್ತು. 

ಹುಬ್ಬಳ್ಳಿ– ಹಾವೇರಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ದಾದ ಜೋಶಿ ಸಮಾವೇಶಕ್ಕೆ ಆಗಮಿಸುವುದು ತಡವಾದರೂ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ನಳಿನ್‌ ಕುಮಾರ್‌ ಕಟೀಲ್‌ ಅವರಿಗಾಗಿಯೇ ಕಾದಿದ್ದರು. ಮುಖ್ಯಮಂತ್ರಿ ಭಾಷಣ ಮುಗಿದ ಮೇಲೆಯೇ ಒಟ್ಟಾಗಿ ತೆರಳಿದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮಾತನಾಡಿ, ‘ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಡಬ್ಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯ ಮತ್ತಷ್ಟು ಅಭಿವೃದ್ಧಿ ಕಾಣಲಿದೆ’ ಎಂದು ಪ್ರತಿಪಾದಿಸಿದರು.

‘ಪ್ರಧಾನಿ ಮೋದಿಯವರು ರೈಲ್ವೆ, ವಿಮಾನಯಾನ ಸೇವೆ, ಮೆಟ್ರೊ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಯುಪಿಎ ಅವಧಿಯಲ್ಲಿ ರೈಲ್ವೆ ಇಲಾಖೆಗೆ ಕೇವಲ ₹ 835 ಕೋಟಿ ಸಿಕ್ಕಿತ್ತು. ಬಿಜೆಪಿ ಅವಧಿಯಲ್ಲಿ ₹ 6,091 ಕೋಟಿ ಅನುದಾನ ಲಭಿಸಿದೆ’ ಎಂದು ವಿವರಿಸಿದರು.

‘ಟಿಪ್ಪು ತಾತನ ಹೆಸರು ನೆನಪು’

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ‘100 ದಿನಗಳಲ್ಲಿ ಚುನಾವಣೆ ದಿನಾಂಕ ಪ್ರಕಟಗೊಳ್ಳಲಿದೆ. ಒಂದೇ ಸಾರಿ ಪಂಚರತ್ನ ಬಂದಿದೆ. ಪ್ರತಿಸಾರಿಯೂ ಇದು ಕೊನೆಯ ಚುನಾವಣೆಯೆಂದು ಘೋಷಿಸುತ್ತಾರೆ. ಕಣ್ಣೀರಿನ ಮೂಲಕ ಚುನಾವಣೆಗೆ ಹೋಗುತ್ತಿದ್ದಾರೆ. ಮತ್ತೆ ಬೀದಿಗೆ ಬಂದಿದ್ದಾರೆ. ಅಪ್ಪನಿಂದ ಮಗನಿಗೆ, ತಾಯಿಯಿಂದ ಮಗನಿಗೆ ಕ್ಷೇತ್ರ ತ್ಯಾಗ ಮಾಡುವ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಟಿಪ್ಪು ತಾತನ ಹೆಸರು ನೆನಪಾಗುವ ಇನ್ನೊಂದು ಪಕ್ಷ ಇದೆ. ಚುನಾವಣಾ ಕಾಲ ಬಂದ ಕಾರಣಕ್ಕೆ ಟಿಪ್ಪು ನೆನಪಾಗುತ್ತಿದೆ ಎಂದ ಅವರು, ಕುಕ್ಕರ್ ಬಾಂಬ್‍ನ ಕೊಳಕು ರಾಜಕೀಯ ನಮ್ಮದಲ್ಲ’ ಎಂದರು.

24 ಪ್ರಕೋಷ್ಠ ಸೇರಿಸಿ ಸಮಾವೇಶ ನಡೆಸುತ್ತಿರುವುದು ಇದೇ ಮೊದಲು ಎಂದರು.

‘ಬೆಂಗಳೂರಿನ ವಿಶ್ವೇಶ್ವರಯ್ಯ ರೈಲು ನಿಲ್ದಾಣವನ್ನು ವಿಶ್ವದರ್ಜೆ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ 48 ರೈಲು ನಿಲ್ದಾಣಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು. 2ನೇ ಹಂತದಲ್ಲಿ 50 ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಬಳಿಕ ಕಾಂಗ್ರೆಸ್‌ ದೂಳೀಪಟವಾಗಲಿದೆ. ಕಾಂಗ್ರೆಸ್‌ನಲ್ಲಿ ಇಬ್ಬರು ಮುಖ್ಯಮಂತ್ರಿ ಆಗುತ್ತೇವೆಂದು ಕನಸು ಕಾಣುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಮೇಲೆ ಅವರ ಒಲವು ಬಿಜೆಪಿ ಕಡೆಯಿದೆ. ಬೆಳಗಾವಿ ಅಧಿವೇಶನಲ್ಲಿ ಉತ್ತರ ನೀಡುತ್ತೇವೆ, ಪ್ರತಿಪಕ್ಷಗಳು ಬರಲಿ’ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಬಿಜೆಪಿ ದುಡಿಯುವ ವರ್ಗವನ್ನು ಗುರುತಿಸಿದೆ. ವಿವಿಧ ಸಮುದಾಯದ ಪರಿಣಿತರ ಜ್ಞಾನ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಚುನಾವಣೆಗೋಸ್ಕರವೇ ಹಲವು ಪಕ್ಷಗಳಿವೆ. ಅವುಗಳಿಗಿಂತ ಬಿಜೆಪಿ ವಿಭಿನ್ನವಾದ ಪಕ್ಷ. ರೈತರ ಉತ್ಪನ್ನ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

****

ಸಿ.ಟಿ.ರವಿ ಹೋರಾಟದ ಕಿಚ್ಚು ಹಚ್ಚಿದ್ದಾರೆ. ಪ್ರತಿಪಕ್ಷಗಳ ನಾಯಕರನ್ನು ಮಾತಿನ ಮೂಲಕ ಹುರಿದು ಉಪ್ಪಿನಕಾಯಿ ಹಾಕಿದ್ದಾರೆ ಬಿ.ಎಲ್‌.ಸಂತೋಷ್‌,

-ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು