ಬುಧವಾರ, ಮೇ 12, 2021
18 °C
ಕೆಲವು ಜಿಲ್ಲೆಗಳಲ್ಲಿ ತೀವ್ರ ನಿಗಾ

ಕೋವಿಡ್‌ | 15 ದಿನ ಕಟ್ಟೆಚ್ಚರ; ಧರಣಿ, ಪ್ರತಿಭಟನೆಗೆ ಇಲ್ಲ ಅವಕಾಶ -ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಪ್ರಕರಣಗಳ ಹರಡುವಿಕೆ ತಡೆಯಲು ಮುಂದಾಗಿರುವ ರಾಜ್ಯ ಸರ್ಕಾರ ರಾಜ್ಯದಾದ್ಯಂತ 15 ದಿನ
ಗಳ ಕಾಲ ಕಟ್ಟೆಚ್ಚರ ವಹಿಸುವ ನಿರ್ಧಾರವನ್ನು ಸೋಮವಾರ ಕೈಗೊಂಡಿದೆ.

ಈ ಅವಧಿಯಲ್ಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆಗಳಿಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಸೋಮವಾರ ಸಂಜೆ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಈ ನಿರ್ಧಾರ ಪ್ರಕಟಿಸಿದರು.

15 ದಿನಗಳ ಕಾಲ ಯಾವುದೇ ಪ್ರತಿಭಟನೆ, ಧರಣಿಗಳಿಗೆ ಅವಕಾಶವಿಲ್ಲ. ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚಿನ ಜನ ಸೇರಲು ಅವಕಾಶ ನೀಡುವುದಿಲ್ಲ. ಮಾಸ್ಕ್‌ ಹಾಕಿಕೊಳ್ಳುವುದು ಕಡ್ಡಾಯ. ಈ ಎಲ್ಲ ವಿಚಾರಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಹೆಚ್ಚು ಜನರು ಒಂದೆಡೆ ಸೇರದಂತೆ ನಿಯಂತ್ರಿಸಲಾಗುವುದು. ಈ ಸಂಬಂಧ ಮಂಗಳವಾರವೇ ಹೊಸದಾಗಿ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲಾಕ್‌ಡೌನ್‌, ಕರ್ಫ್ಯೂ ಇಲ್ಲ: ರಾಜ್ಯದಲ್ಲಿ ಮುಂದೆ ಯಾವುದೇ ರೀತಿಯ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಿಲ್ಲ. ಪಬ್‌, ಚಿತ್ರಮಂದಿರಗಳಲ್ಲಿ ನಿರ್ಬಂಧ ಜಾರಿಗೊಳಿಸುವ ಪ್ರಸ್ತಾವವೂ ಸದ್ಯಕ್ಕೆ ಇಲ್ಲ ಎಂದರು.

ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಪ್ರತಿ ಸೋಂಕಿತರಿಗೆ 25ಕ್ಕೆ ಬದಲಾಗಿ 30 ಜನ ಸಂಪರ್ಕಿತರನ್ನು ಪತ್ತೆಹಚ್ಚುವಂತೆ ಗುರಿ ನಿಗದಿಪಡಿಸಲಾಗಿದೆ. ಸಂಪರ್ಕಿತರ ಪತ್ತೆಗೆ ಶಿಕ್ಷಣ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಅಪಾರ್ಟ್‌ಮೆಂಟ್‌ಗಳಲ್ಲಿ ನಿಗಾ: ಬೆಂಗಳೂರಿನಲ್ಲಿ 14 ದಿನಗಳ ಅವಧಿಯಲ್ಲಿ 16,921 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲೇ ಹೆಚ್ಚು ಸೋಂಕು ಹರಡುತ್ತಿದೆ. ಕೊಳೆಗೇರಿಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಅಪಾರ್ಟ್‌ಮೆಂಟ್‌ಗಳ ಮೇಲೆ ನಿಗಾ ಇರಿಸಲಾಗುವುದು. ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಅಲ್ಲಿಯೇ ಲಸಿಕೆ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ಮೈಸೂರು, ಕಲಬುರ್ಗಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದಿನವೊಂದಕ್ಕೆ ಸರಾಸರಿ 100 ಪ್ರಕರಣಗಳು ವರದಿಯಾಗುತ್ತಿವೆ. ಈ ಜಿಲ್ಲೆಗಳಲ್ಲೂ ನಿಗಾ ಇಡಲಾಗುವುದು ಎಂದರು.

ಮಾಲೀಕರಿಗೆ ದಂಡ: ಮದುವೆ ಸಮಾರಂಭಗಳಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಯಾದರೆ ಈವರೆಗೂ ಆಯೋಜಕರಿಗೆ ದಂಡ ಹಾಕಲಾಗುತ್ತಿತ್ತು. ಮುಂದೆ ಕಲ್ಯಾಣ ಮಂಟಪಗಳ ಮಾಲೀಕರಿಗೆ ದಂಡ ವಿಧಿಸಿ, ಆರು ತಿಂಗಳವರೆಗೆ ಮುಚ್ಚುವಂತೆ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಸಚಿವರಾದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌, ಅಬಕಾರಿ ಸಚಿವ ಕೆ. ಗೋಪಾಲಯ್ಯ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ ಸಭೆಯಲ್ಲಿದ್ದರು.

ಶಾಲೆ, ಕಾಲೇಜು ಬಂದ್‌ ಇಲ್ಲ:

ಶಾಲೆ, ಕಾಲೇಜುಗಳನ್ನು ಬಂದ್‌ ಮಾಡುವ ಪ್ರಸ್ತಾವವೇ ಇಲ್ಲ. 15 ದಿನಗಳಲ್ಲಿ ಪರೀಕ್ಷೆಗಳು ಪೂರ್ಣಗೊಳ್ಳಲಿದ್ದು, ಆ ಬಳಿಕ ಈ ಕುರಿತು ಯೋಚಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು. ಮಕ್ಕಳು ಶಾಲೆ, ಕಾಲೇಜುಗಳಿಗೆ ಬಂದರೆ ಶಿಸ್ತಿನಿಂದ ಇರುತ್ತಾರೆ. ಅಪಾರ್ಟ್‌ಮೆಂಟ್‌ ಮತ್ತು ಮನೆಗಳಲ್ಲಿ ಗುಂಪುಗೂಡಿ ಇರುತ್ತಾರೆ ಎಂದರು. ಒಂದರಿಂದ ಒಂಬತ್ತನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪರೀಕ್ಷೆಯೇ ಇಲ್ಲದೆ ಮುಂದಿನ ತರಗತಿಗೆ ಉತ್ತೀರ್ಣಗೊಳಿಸುವ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದರು.

ಶಿಕ್ಷಕರಿಗೂ ಲಸಿಕೆ: ಕೇಂದ್ರಕ್ಕೆ ಪತ್ರ

‘ಎಲ್ಲ ಶಿಕ್ಷಕರಿಗೂ ಕೋವಿಡ್‌ ಲಸಿಕೆ ಹಾಕಿಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರತ್ಯೇಕ ಆದೇಶ ಹೊರಡಿಸುವಂತಿಲ್ಲ: ಬೆಂಗಳೂರು: ಕೋವಿಡ್‌ ನಿಯಂತ್ರಣ, ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಮಾತ್ರ ಆದೇಶ, ಸುತ್ತೋಲೆಗಳನ್ನು ಹೊರಡಿಸಬೇಕು. ಯಾವುದೇ ಸಚಿವರು ಅಥವಾ ಅಧಿಕಾರಿಗಳು ಪ್ರತ್ಯೇಕವಾಗಿ ಆದೇಶ, ಸುತ್ತೋಲೆ ಹೊರಡಿಸಬಾರದು ಎಂದು ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ.

‘ಕೇಂದ್ರ ಸರ್ಕಾರದಲ್ಲಿ ಒಂದೇ ಇಲಾಖೆಯ ಮೂಲಕ ಆದೇಶ, ಸುತ್ತೋಲೆ, ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ವಿವಿಧ ಇಲಾಖೆಗಳು ಈ ಕ್ರಮ ಕೈಗೊಳ್ಳುತ್ತಿರುವುದರಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಆದ್ದರಿಂದ ಮುಖ್ಯ ಕಾರ್ಯದರ್ಶಿ ಮಾತ್ರ ನನ್ನ ಅನುಮೋದನೆ ಪಡೆದ ಬಳಿಕ ಆದೇಶ, ಸುತ್ತೋಲೆ ಹೊರಡಿಸಬೇಕು’ ಎಂದು ಟಿಪ್ಪಣಿಯ ಮೂಲಕ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿ ನೀಡಿದ ವಿವರ:

*ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ 0.94ರಿಂದ ಶೇ 1.94ಕ್ಕೆ ಏರಿಕೆ

* ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ 1,166 ಹಾಸಿಗೆಗಳು ಮೀಸಲು

* ಕೋವಿಡ್‌ ನಿಯಂತ್ರಣ, ನಿರ್ವಹಣೆಗೆ ₹ 150 ಕೋಟಿ ಬಿಡುಗಡೆ

* ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಪರೀಕ್ಷೆಗಳ ಹೆಚ್ಚಳಕ್ಕೆ ಸೂಚನೆ

*ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಮತ್ತಷ್ಟು ಬಿಗಿ

* ಆರೋಗ್ಯ ಸಚಿವರಿಂದ ಉಡುಪಿ ಜಿಲ್ಲೆಯಲ್ಲಿ ಪರಿಶೀಲನೆಗೆ ನಿರ್ಧಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು